ಹೊಸಪೇಟೆ: ಜನಪ್ರತಿನಿಧಿಗಳಿಗೆ ದುಬಾರಿ ಮೊತ್ತದ ದೀಪಾವಳಿ ಗಿಫ್ಟ್ ನೀಡಿದ ಆನಂದ ಸಿಂಗ್
ಹೊಸಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳಿಗೆ ದೀಪಾವಳಿ ಹಬ್ಬದ ನಿಮಿತ್ತ ಹಣ, ಬೆಳ್ಳಿ, ರೇಷ್ಮೆ ಪಂಚೆ ಸೀರೆ ನೀಡಿದ ಸಚಿವ ಆನಂದ ಸಿಂಗ್
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ(ಅ.27): ಚುನಾವಣೆ ಸಮೀಪಿಸುತ್ತಿದ್ದಂತೆ ಜನರನ್ನು, ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿ ವಲಯವನ್ನು ಮನವೋಲೈಸೋ ಕೆಲಸಕ್ಕೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಶಾಸಕ ಮತ್ತು ಸಚಿವರು ಮಾಡುತ್ತಿದ್ದಾರೆ. ಈಗಾಗಲೇ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಶಿಕ್ಷಕರ ದಿನಾಚರಣೆ ದಿನ ಬೆಳ್ಳಿ ನಾಣ್ಯ ಕೊಟ್ಟಿದ್ದರು. ಸಚಿವ ಶ್ರೀರಾಮುಲು ಕೂಡ ಶಿಕ್ಷಕರ ದಿನಾಚರಣೆಯ ದಿನದಂದು ಬಳ್ಳಾರಿ ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಶಿಕ್ಷಕರಿಗೆ ಸೀರೆ, ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ಕೊಟ್ಟಿದ್ರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಸಚಿವ ಆನಂದ ಸಿಂಗ್ ತಮ್ಮ (ಹೊಸಪೇಟೆ) ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳಿಗೆ ದೀಪಾವಳಿ ಹಬ್ಬದ ನಿಮಿತ್ತ ಹಣ, ಬೆಳ್ಳಿ, ರೇಷ್ಮೆ ಪಂಚೆ ಸೀರೆ ನೀಡೋ ಮೂಲಕ ಮನವೊಲೈಕೆ ಕೆಲಸಕ್ಕೆ ಮುಂದಾಗಿದ್ದಾರೆ.
ದೀಪಾವಳಿ ಹಬ್ಬದ ಭರ್ಜರಿ ಉಡುಗೊರೆ ಕೊಟ್ಟ ಸಚಿವ ಆನಂದ ಸಿಂಗ್
ಹೊಸಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 180 ಗ್ರಾಮ ಪಂಚಾಯತಿ ಸದಸ್ಯರಿಗೆ ಆರ್ಧ ಕೆಜಿ ಬೆಳ್ಳಿ 27 ಸಾವಿರ ನಗದು ರೇಷ್ಮೆ ಸೀರೆ ಮತ್ತು ಪಂಚೆ ನೀಡಿದ್ದಾರೆ. ಇನ್ನೂ ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತಿ ಸದಸ್ಯರಿಗೆ 1 ಲಕ್ಷದ 44 ಸಾವಿರ ರೂಪಾಯಿ ನಗದು ಒಂದು ಕೆಜಿ ಬೆಳ್ಳಿ ರೇಷ್ಮೆ ಸೀರೆ ಮತ್ತು ಪಂಚೆಯನ್ನ ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ. ಇದರ ಜೊತೆ ಪ್ರತಿಯೊಬ್ಬರಿಗೂ ಡ್ರೈಪ್ರೂಟ್ಸ್ ಮತ್ತು ಸ್ವೀಟ್ ಬಾಕ್ಸ್ ನ್ನು ಕೊಟ್ಟಿದ್ದಾರೆ.
ಈ ಬಗ್ಗೆ ಉಡುಗೊರೆ ಪಡೆದವರು ಮತ್ತು ಉಡುಗೊರೆಯನ್ನು ನೀಡಿದ ಆನಂದ ಸಿಂಗ್ ಬೆಂಬಲಿಗರು ಉಡುಗೊರೆಯನ್ನು ಕೊಟ್ಟಿರೋದ್ರ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹಿಂದೂ ಸಂಸ್ಕೃತಿಯಲ್ಲಿ ದೀಪಾವಳಿ ಹಬ್ಬ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಉಡುಗೊರೆ ನೀಡುವುದು ಸಾಮಾನ್ಯ ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದರಲ್ಲಿ ಅರ್ಥವಿಲ್ಲವೆಂದಿದ್ದಾರೆ. ಆದ್ರೇ, ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ಉಡುಗರೆ ನೀಡಿರೋದ್ರಿಂದ ಮತ್ತು ಇದೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರೋದ್ರಿಂದ ಇದೊಂದು ಚುನಾವಣೆ ಗಿಮಿಕ್ ಎನ್ನಲಾಗ್ತಿದೆ.
VIJAYANAGARA: ಫ್ಯಾನ್‌ಗೆ ಸಿಕ್ಕಿ ತುಂಡಾದ ಬೆರಳನ್ನು ಜೋಡಿಸಿ ಮರುಜೀವ ನೀಡಿದ ವೈದ್ಯರು
ಉಡುಗೊರೆ ನೀಡೋದ್ರಲ್ಲೂ ಅದೃಷ್ಟದ ಸಂಖ್ಯೆ
ಇನ್ನೂ ಉಡುಗೊರೆಯಲ್ಲೂ ಅದೃಷ್ಟದ ಸಂಖ್ಯೆಯನ್ನು ಹುಡುಕಿದ ಸಚಿವ ಆನಂದ ಸಿಂಗ್, ಗ್ರಾಮ ಪಂಚಾಯತಿ ಸದಸ್ಯರಿಗೆ ಬೆಳ್ಳಿಯ ಜೊತೆ 27 ಸಾವಿರ ನಗದು ಹಣ ನೀಡಿದ್ದಾರೆ. 27 ಅಂದ್ರೇ ಕೊನೆಗೆ 9 ಬರುತ್ತದೆ ಇದು ಲಕ್ಕಿ ನಂಬರ್ ಎನ್ನಲಾಗ್ತಿದೆ. ಇನ್ನೂ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಿಗೆ ಒಂದು ಕೆಜಿ ಬೆಳ್ಳಿಯ ಜೊತೆ 1 ಲಕ್ಷದ 44 ಸಾವಿರ ಕೊಟ್ಟಿದ್ದಾರೆ ಇದನ್ನು ಕೂಡಿದ್ರೆ 9 ಬರುತ್ತದೆ. ಆನಂದ ಸಿಂಗ್ ಲಕ್ಕಿ ನಂಬರ್ 9 ಎಂದು ಹೇಳಲಾಗುತ್ತಿದ್ದು, ಹೀಗಾಗಿ ಈ ಮೊತ್ತವನ್ನು ನೀಡಿದ್ದಾರೆ ಎನ್ನಲಾಗ್ತಿದೆ. ಹೊಸಪೇಟೆ ನಗರಸಭೆಯ 35 ಸದಸ್ಯರು ಮತ್ತು ಕಮಲಾಪುರ ಪಟ್ಟಣ ಪಂಚಾಯತಿಯಲ್ಲಿ 20. ಸದಸ್ಯರಿದ್ದು, ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಪ್ರತಿ ಚುಣಾವಣೆಲ್ಲೂ ಏನಾದ್ರೂ ಒಂದು ಭಿನ್ನ ಪ್ರಯೋಗ ಮಾಡೋ ಸಿಂಗ್
2008ರಿಂದ ಚುನಾವಣೆ ಕಣದಲ್ಲಿರೋ ಸಚಿವ ಆನಂದ ಸಿಂಗ್ ಈವರೆಗೂ ಮೂರು ಸಾರ್ವತ್ರಿಕ ಮತ್ತು ಒಂದು ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣೆವಿದೆ ಎಂದು 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಆನಂದ ಸಿಂಗ್ ವಿಜಯನಗರ ಜಿಲ್ಲೆ ಮಾಡಲಿಲ್ಲವೆಂದು 2019ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಸೇರ್ಪಡೆಯಾಗಿ ನಿರಾಯಾಸವಾಗಿ ಗೆದ್ರು. ಅಲ್ಲದೇ ಹಠಕ್ಕೆ ಬಿದ್ದವರಂತೆ ಮಂತ್ರಿಯಾಗೋದ್ರ ಜೊತೆ ವಿಜಯನಗರ ಜಿಲ್ಲೆಯನ್ನು ಮಾಡಿಕೊಂಡು ಬಂದ್ರು. ಒಂದು ಕಡೆ ಜನರ ಮನಗೆಲ್ಲೋದ್ರ ಜೊತೆ ಸರ್ಕಾರದ ಪ್ರಮುಖರ ಜೊತೆಗೆ ಉತ್ತಮ ನಂಟು ಹೊಂದಿರೋದಕ್ಕೆ ಆನಂದ ಸಿಂಗ್ ಅವರ ಕೆಲವು ಗಿಮಿಕ್ಸ್‌ಗಳು ಕಾರಣ ಎನ್ನುತ್ತಾರೆ ರಾಜಕೀಯ ಪಂಡಿತರು.