ಗುಬ್ಬಿಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭ
ರೈತರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ರಾಗಿಗೆ ಬೆಂಬಲ ಬೆಲೆ ಘೋಷಿಸಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ತಿಳಿಸಿದರು.
ಗುಬ್ಬಿ : ರೈತರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ರಾಗಿಗೆ ಬೆಂಬಲ ಬೆಲೆ ಘೋಷಿಸಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿಯಮಿತದಿಂದ ಬೆಂಬಲ ಬೆಲೆ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಂದ ಇಲ್ಲಿ ಗುಣಮಟ್ಟದ ರಾಗಿಯನ್ನು ಖರೀದಿಸಿ ನಂತರ ವ್ಯವಸಾಯ ಸೇವಾ ಸಹಕಾರ ಸಂಘದ ಮೂಲಕ ಸಾರ್ವಜನಿಕರಿಗೆ ನೀಡುತ್ತಾರೆ. ಹಾಗಾಗಿ ರೈತರು ಆದಷ್ಟು ಗುಣಮಟ್ಟದ ರಾಗಿಯನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಆಹಾರವನ್ನು ದೊರಕಿಸಿ ಎಂದು ಮನವಿ ಮಾಡಿದರು.
ತಾಲೂಕು ಆಹಾರ ನಿರೀಕ್ಷಕ ಸಿದ್ಧೇಗೌಡ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ರಾಗಿ ಖರೀದಿ ಕೇಂದ್ರ ಆರಂಭವಾಗಿದ್ದು, ಪ್ರತಿ ಕ್ವಿಂಟಲ್ ಗೆ 3846 ರು. ನೀಡಲಾಗುತ್ತಿದೆ. ರೈತರು ಖುಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯನ್ನು ತರುವುದು ಕಡ್ಡಾಯವಾಗಿದೆ. ರೈತರು ನೋಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ, ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತೆಗೆದುಕೊಂಡು ಖರೀದಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಜನವರಿ 1 ರಿಂದ ಆರಂಭವಾಗಿ ಮಾರ್ಚ್ 31 ಕ್ಕೆ ಕೊನೆಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್, ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ, ಮುಖಂಡ ಮಂಜುನಾಥ್, ವ್ಯವಸ್ಥಾಪಕ ಚಂದ್ರಪ್ಪ, ಜಯಣ್ಣ, ಸೇರಿದಂತೆ ಹಲವು ರೈತರು ಭಾಗಿಯಾದರು.