Asianet Suvarna News Asianet Suvarna News

ಚಿಕ್ಕಮಗಳೂರು: ರಾಗಿ ರೈತರಿಗೆ ವರ್ತಕರು, ಅಧಿಕಾರಿಗಳಿಂದ ಧೋಖಾ...?

ರಾಗಿಗೆ ಮಾರುಕಟ್ಟೆ ಬೆಲೆಗಿಂತ ಸರ್ಕಾರದ ಬೆಂಬಲ ಬೆಲೆಯೇ ಹೆಚ್ಚು, ಇದರ ಲಾಭ ಪಡೆಯುಲು ಕೆಲವರಿಂದ ಗೋಲ್ ಮಾಲ್ ಆರೋಪ , ಸಣ್ಣ ರೈತರಿಗೆ ಗೊತ್ತೇ ಆಗದಂತೆ ಅವರ ಹೆಸರಿನಲ್ಲಿ ಬೆಂಬಲ ಬೆಲೆಗೆ ರಾಗಿ ಮಾರಾಟ, ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಘಟನೆ. 

Millet Farmers Cheated by Traders and Officials in Chikkamagaluru grg
Author
First Published Jan 7, 2023, 11:16 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.07):  ಚಳಿ-ಮಳೆ-ಗಾಳಿ-ಬಿಸಿಲು ಯಾವುದನ್ನೂ ಲೆಕ್ಕಿಸದೆ ವರ್ಷಪೂರ್ತಿ ಹೊಲ-ಗದ್ದೆಗಳಲ್ಲಿ ಗಾಣದೆತ್ತಿನಂತೆ ದುಡಿಯೋದು ಅನ್ನದಾತ. ಆದ್ರೆ, ಶ್ರಮಕ್ಕೆ ತಕ್ಕ ಫಲ ನೋಡುವಾಗ ಯಾರ್ದೋ ಹೆಸ್ರಲ್ಲಿ ಮತ್ಯಾವನೋ ದುಡ್ ಮಾಡ್ಕೊಂಡಿರ್ತಾನೆ. ಸದ್ಯಕ್ಕೆ ರಾಗಿಗೆ ಸರ್ಕಾರದ ಬೆಂಬಲ ಬೆಲೆ. ಮಾರ್ಕೇಟ್ ವ್ಯಾಲ್ಯೂಗಿಂತ ಜಾಸ್ತಿ ಇದೆ. ಇದನ್ನೇ ಬಂಡವಾಳ ಮಾಡ್ಕೊಂಡಿರೋ ಮದ್ಯವರ್ತಿಗಳು, ದಲ್ಲಾಳಿಗಳು ಸಣ್ಣ-ಸಣ್ಣ ರೈತರ ಹೆಸರಲ್ಲಿ ಅವ್ರು ಮತ್ಯಾರ್ದೋ ರಾಗಿ ಮಾರಿಕೊಂಡು ರೈತರ ಹೆಸರೇಳಿ ಬದುಕೋರೆ ರೈತರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿದ್ದಾರೆ.

ರಾಗಿ ರೈತರಿಗೆ ವರ್ತಕರು, ಅಧಿಕಾರಿಗಳಿಂದ ಧೋಖಾ

ಯಾರ್ದೋ ಪಹಣಿಗೆ ಯಾರ್ದೋ ಆಧಾರ್-ಬ್ಯಾಂಕ್ ಅಕೌಂಟ್ ನಂಬರ್ ಹಾಕಿ ಸಣ್ಣ ರೈತರಿಗೆ ಗೊತ್ತೇ ಆಗದಂತೆ ಅವರ ಹೆಸರಿನಲ್ಲಿ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಿರುವ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಬೆಳಕಿಗೆ ಬಂದಿವೆ. ಈ ಬಗ್ಗೆ ನೊಂದ ರೈತ ಮಹಿಳೆ ದೂರನ್ನ ಕೂಡ ನೀಡಿದ್ದಾಳೆ. ದಲ್ಲಾಳಿಗಳು, ಮದ್ಯವರ್ತಿಗಳು ಎಲ್ಲಾ ಕಡೆ ಇರ್ತಾರೆ. ರೈತನೇ ಅವರ ಬಂಡವಾಳ. ಅವರು ಬೇರೆಡೆ ಖರೀದಿಸಿದ ರಾಗಿಯನ್ನ ಸರ್ಕಾರದ ರಾಗಿ ಖರೀದಿ ಕೇಂದ್ರದಲ್ಲಿ ಮಾರುತ್ತಿದ್ದಾರೆ. ಕಾರಣ ಸರ್ಕಾರದ ದರ ಮಾರ್ಕೇಟ್ ದರಕ್ಕಿಂತ ಜಾಸ್ತಿ ಇದೆ. ಹಾಗಾಗಿ, ಒಂದು-ಎರಡು ಎಕರೆಯ ಸಣ್ಣ-ಸಣ್ಣ ರೈತರ ಪಹಣಿಗಳನ್ನ ಬಳಸಿ ಅಸಲಿ ರೈತರ ಹೆಸರಲ್ಲಿ ನಕಲಿ ರೈತರು ರಾಗಿ ಮಾರುತ್ತಿದ್ದಾರೆ. ರಾಗಿ ಬೆಳೆದ ರೈತರು ಮಾರಾಟ ಮಾಡಲು ಎಫ್ಐಡಿ ತೆಗೆದುಕೊಳ್ಳಲು ಹೋದರೆ ನಿಮ್ಮ ಪಹಣಿ ಬೇರೆಯವರ ಎಫ್ಐಡಿಗೆ ಲಿಂಕ್ ಆಗಿದೆ. ನಿಮ್ಮ ರಾಗಿ ಮಾರಾಟಕ್ಕೆ ಅವಕಾಶವಿಲ್ಲ ಅಂತಿದ್ದಾರೆ. ಇದು ಹೇಗೆ ಸಾಧ್ಯ ಎಂದು ರೈತರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕ್ತಿದ್ದಾರೆ. 

CHIKMAGALURU: ಮತದಾರರ ಅಂತಿಮ ಪಟ್ಟಿ ಪ್ರಕಟ: ರಾಜಕೀಯ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಭೆ

ಕೆಲವರಿಂದ ಗೋಲ್‌ಮಾಲ್ ಆರೋಪ 

ಸರ್ಕಾರದ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಲು ರೈತರು ಫ್ರೂಟ್ ತಂತ್ರಾಂಶದಲ್ಲಿ ಎಫ್.ಐ.ಡಿ. ಸೃಷ್ಠಿಸುವುದ ಕಡ್ಡಾಯ. ಎಫ್.ಐ.ಡಿ. ಸೃಷ್ಠಿಸಲು ಬ್ಯಾಂಕ್ ಅಕೌಂಟ್ ನಂಬರ್, ಪಾಸ್ಬುಕ್, ಆಧಾರ್ ಕಾರ್ಡ್, ಪಹಣಿ ಎಲ್ಲವೂ ಬೇಕು. ಆದರೆ, ಸೈಬರ್ ಸೆಂಟರ್ ಹಾಗೂ ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿಗಳು ನಕಲಿ ರೈತರ ಹೆಸರಲ್ಲಿ ಎಫ್.ಐ.ಡಿ. ಸೃಷ್ಠಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಕಂದಾಯ ಇಲಾಖೆ ಯಾರಿಗೆ ಬೇಕಾದರು ಪಹಣಿ ನೀಡುತ್ತಿರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಕಡೂರಿನ ಚೌಳಹಿರಿಯೂರು ಗ್ರಾಮದ ರೈತ ಮಹಿಳೆ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ತಂದಾಗ ನಿಮ್ಮ ಎಫ್.ಡಿ.ಐ. ಸಂಖ್ಯೆ ಲಿಂಕ್ ಆಗಿದೆ ಎಂದು ಆ ಮಹಿಳೆಯ ರಾಗಿಯನ್ನೇ ಖರೀದಿ ಮಾಡಿಲ್ಲ. ಮಾರ್ಕೇಟ್ ರೇಟ್ 1900-2000 ಇದ್ರೆ, ಸರ್ಕಾರದ ರಾಗಿ ಖರೀದಿ ಕೇಂದ್ರದಲ್ಲಿ 3500 ಇದೆ. ಹಾಗಾಗಿ, ಮಧ್ಯವರ್ತಿಗಳು, ದಲ್ಲಾಳಿಗಳು ರೈತರ ಹೆಸರಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರುತ್ತಿದ್ದು ಹುತ್ತು-ಬಿತ್ತು ಬೆಳೆ ಬೆಳೆದ ರೈತರಿಗೆ ಮೋಸವಾಗುತ್ತಿದೆ ಎಂದು ರೈತರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಒಟ್ಟಾರೆ, ಹೊಲ-ಗದ್ದೆಗಳಲ್ಲಿ ಇಡೀ ವರ್ಷ ಗಾಣದೆತ್ತಿನಂತೆ ದುಡಿಯೋರು ರೈತರು. ಆದ್ರೆ, ಅಸಲಿ ರೈತರ ಹೆಸರಲ್ಲಿ ನಕಲಿ ರೈತರು ಹಣ ಮಾಡುತ್ತಿರೋದು ನಿಜಕ್ಕೂ ದುರಂತವೇ ಸರಿ. ಸರ್ಕಾರ, ಅಧಿಕಾರಿಗಳು ಹಾಗೂ ಜನನಾಯಕರು ನಾವು ರೈತರ ಪರ, ರೈತರಿಗೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಬಾಯಲ್ಲಿ ಹೇಳಿದರೆ ಸಾಲದು. ರೈತರ ಬೆವರ ಹನಿಗೆ ಸೂಕ್ತ ಬೆಲೆ ಸಿಗುವಂತೆಯೂ ನೋಡಿಕೊಳ್ಳಬೇಕು. ಕಾನೂನು ಜಾರಿಗೆ ತಂದು ಸುಮ್ಮನಾದರೆ ಮತ್ತದೇ ಮದ್ಯವರ್ತಿಗಳು, ದಲ್ಲಾಳಿಗಳ ಹಾವಳಿಯಲ್ಲಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Follow Us:
Download App:
  • android
  • ios