ಮಾಗಡಿ[ಡಿ.19]:  ಬೆಂಗ​ಳೂರು ಸಹ​ಕಾರಿ ಹಾಲು ಒಕ್ಕೂಟ (ಬ​ಮೂಲ್‌) ಹಾಲಿನ ದರ​ವನ್ನು ಜನ​ವರಿ 1 ರಿಂದ ಹೆಚ್ಚಳ ಮಾಡ​ಲಾ​ಗು​ವುದು ಎಂದು ಒಕ್ಕೂ​ಟದ ಅಧ್ಯಕ್ಷ ನರ​ಸಿಂಹ​ಮೂ​ರ್ತಿ ತಿಳಿ​ಸಿ​ದರು.

ತಾಲೂಕಿನ ಅಗಲಕೋಟೆ ಹಾಲು ಉತ್ಪಾದಕ ಸಹಕಾರ ಸಂಘದ ಅವರಣದಲ್ಲಿ ರೈತರಿಗೆ ದೇಶಿ ಹಸುಗಳನ್ನು ವಿತರಿಸಿ ಮಾತನಾಡಿದ ಅವರು, ಬಮೂಲ್‌ನಿಂದ ಹಾಲಿನ ದರ ಕಡಿಮೆ ಎಂದು ರೈತರು ಕೂಗು ಹಾಕುತ್ತಿದ್ದಾರೆ. ಕನಕಪುರದಲ್ಲಿ ಮೆಗಾ ಡೇರಿ ನಿರ್ಮಾಣವಾದ ನಂತರ ಪ್ರತಿ ಲೀಟರ್‌ ಹಾಲಿಗೆ 2 ರು. ಹೆಚ್ಚಿನ ದರ ನೀಡಲು ಕಾರ್ಯಕಾರಿ ಮಂಡಳಿಯಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು.

ದೇಶಿ ತಳಿ ಹಸುವಿನ ಹಾಲು ಉತ್ಪಾದನೆಯ ವೆಚ್ಚ ಕಡಿಮೆ ಖರ್ಚಿನಿಂದ ಕೂಡಿದ್ದು, ಹೆಚ್ಚು ಲಾಭದಾಯಕವಾಗಿರುತ್ತದೆ. ದೇಶಿ ಹಸುವಿನ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ವಿಷಕಾರಕ ಅಂಶಗಳು ಮುಕ್ತವಾಗಿರುತ್ತದೆ ಹಾಗೂ ರಾಸುಗಳಲ್ಲಿ ಗೋಪುರ ಇದ್ದು, ಸೂರ್ಯನಿಂದ ನೇರವಾಗಿ ಶಕ್ತಿ ಕಿರಣಗಳು ಹೀರಿಕೊಳ್ಳುವುದರಿಂದ ಇದರ ಹಾಲು ಮತ್ತು ಉತ್ಪನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಕ್ಕೆ ವಿಶೇಷವಾದ ಔಷಧಿ ಗುಣಗಳಿರುತ್ತದೆ. ಈ ಹಸುವಿನ ಹಾಲು ಉತ್ಪಾದನೆಯ ವೆಚ್ಚ ಕಡಿಮೆ ಖರ್ಚಿನಿಂದ ಕೂಡಿದ್ದು ಹೆಚ್ಚು ಲಾಭದಾಯವಾಗಿರುತ್ತದೆ ಎಂದು ಹೇಳಿದರು.

ದೇಶಿ ತಳಿಯ ಹಸುವಿನ ಹಾಲಿನಲ್ಲಿ ರೋಗವನ್ನು ತಡೆಗಟ್ಟುವ ಶಕ್ತಿ ಹೆಚ್ಚಿರುತ್ತದೆ ಹಾಗೂ ಇದನ್ನು ಸೇವಿಸುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚಾಗುವುದರಿಂದ ನಾಟಿ ಹಸುವಿನ ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಬಮೂಲ್‌ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಗುಜರಾತ್‌, ಹರಿಯಾಣ, ರಾಜಸ್ಥಾನದಿಂದ ಗಿರ್‌, ಅಮೃತಮಹಲ್‌ ತಳಿಯ ಹಸುಗಳನ್ನು ಮೊದಲ ಹಂತವಾಗಿ ನೆಲಮಂಗಲ, ಮಾಗಡಿ ತಾಲೂಕಿಗೆ 120 ಹಸುಗಳನ್ನು ತರಲಾಗಿದೆ. ಎರಡನೆ ಹಂತದಲ್ಲಿ ಕನಕಪುರಕ್ಕೆ 120ಹಸುಗಳನ್ನು ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಮಾಗಡಿ ತಾಲೂಕಿಗೆ 21ಹಸುಗಳು ಬಂದಿದ್ದು, ಒಂದೊಂದು ಹಸುವಿನ ಬೆಲೆ 80 ಸಾವಿರವಾಗಿದ್ದು, 40 ಸಾವಿರ ರು. ರೈತರು ಪಾವತಿಸಿದರೆ, ಉಳಿಕೆ 40 ಸಾವಿರವನ್ನು ಬಮೂಲ್‌ ಭರಿಸುತ್ತದೆ ಎಂದ ಅವರು, ಕರ್ನಾಟಕ ದೇಶಿ ತಳಿಯ ಹಸುಗಳು 1 ರಿಂದ 2 ಲೀಟರ್‌ ಹಾಲು ನೀಡುತ್ತದೆ. ಅದರೆ ಹೊರ ರಾಜ್ಯದಿಂದ ತಂದಿರುವ ಹಸುಗಳು 10 ರಿಂದ 15 ಲೀಟರ್‌ ಹಾಲು ನೀಡುತ್ತದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ತಳಿಯನ್ನು ರಾಜ್ಯವ್ಯಾಪ್ತಿ ಅಭಿವೃದ್ದಿಮಾಡಬೇಕು ಎಂದು ಚಿಂತಿಸಲಾಗಿದೆ ಎಂದರು.

ದೇಸಿ ಹಸುಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ. ಕರ್ನಾಟಕದಲ್ಲಿ ದೇಸಿ ತಳಿಯ ಹಸುಗಳನ್ನು ಅಭಿವೃದ್ಧಿ ಪಡಿಸಲು ಸರಕಾರ ಚಿಂತಿಸುತ್ತಿದೆ. ಸಂಸದ ಡಿ.ಕೆ. ಸುರೇಶ್‌ ಅವರು ದೇಶಿ ಹಸುಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದ ಹೇಳಿ​ದರು.

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಂಪರ್ ಘೋಷಣೆ...

ಉಪವ್ಯವಸ್ಥಾಪಕ ಆರ್‌. ಶ್ರೀಧರ್‌ ಮಾತನಾಡಿ, ತಾಲೂಕಿನ ಅರಳಕುಪ್ಪೆ, ಮೇಗಲದೊಡ್ಡಿಯಲ್ಲಿ ರೈತರು ದೇಶಿ ಹಸುಗಳನ್ನು ಸಾಕುತಿದ್ದು ಈ ಮಣ್ಣಿನ ಹವಾಗುಣಕ್ಕೆ ಹೊಂದಿಕೆಯಾಗುತ್ತಿವೆ. ತಾಲೂಕಿನ ಪುರ, ಗೆಜ್ಜಗಲ್ಲುಪಾಳ್ಯ ಹಾಲುಉತ್ಪಾದಕ ಸಹಕಾರ ಸಂಘಗಳಲ್ಲಿ ಈಗಾಗಲೇ ದೇಶಿ, ನಾಟಿ ತಳಿಯ ಹಸುವಿನ 2 ಸಾವಿರ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ಮುಂದಿನ ತಿಂಗಳಿನಿಂದ 3 ಸಾವಿರ ಲೀಟರ್‌ ದೇಶಿ ಹಸುವಿನ ಹಾಲನ್ನು ಉತ್ಪಾದಿಸಲಾಗುವುದು ಎಂದು ವಿವರಿಸಿದರು.

ಬಮೂಲ್‌ ನಿರ್ದೆಶಕ ಭಾಸ್ಕರ್‌, ಕೆಇಬಿ ರಾಜಣ್ಣ, ಉಪವ್ಯವಸ್ಥಾಪಕ ಜವರಯ್ಯ, ಡಾ.ಎಲ್ ಎನ್‌. ರೆಡ್ಡಿ, ಶ್ರೀನಿವಾಸ್‌, ವಿಸ್ತರಣಾಧಿಕಾರಿಗಳಾದ ರಂಗಸ್ವಾಮಿ, ರಾಜೇಶ್‌, ಅನಂದ್‌, ಪ್ರಮೋದ್‌, ಕಾರ್ಯದರ್ಶಿ ಚೇತನ್‌ ಕುಮಾರ್‌, ಮೂರ್ತಿ, ಬಸವರಾಜು, ಜಗದೀಶ್‌, ಧನಂಜಯ, ಮೇಲಗಿರಯ್ಯ, ರಂಗಸ್ವಾಮಿ, ರಾಮಣ್ಣ ಮತ್ತಿ​ತ​ರರು ಹಾಜ​ರಿ​ದ್ದರು.