Asianet Suvarna News Asianet Suvarna News

ನಮ್ಮನ್ನ ಬಿಡ್ತಿದ್ರ ಮಕ್ಕಳ ಮುಖ ನೋಡಿ ನೆಮ್ಮದಿಯಾಗಿರ್ತಿದ್ವಿ, ವಲಸೆ ಕಾರ್ಮಿಕರ ಅಳಲು

ಕಳೆದ ಎರಡು ವಾರಗಳಿಂದ ದೇಶವ್ಯಾಪಿ ಲಾಕ್‌ಡೌನ್‌ ಪರಿಣಾಮವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿನ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಗೋಳು ಕೇಳುವವರಿಲ್ಲ ಎಂಬಂತಾಗಿದೆ.

 

Migrant workers wishes to go home in Mangalore
Author
Bangalore, First Published Apr 9, 2020, 9:29 AM IST

ಮೂಡುಬಿದಿರೆ(ಏ.09): ಕಳೆದ ಎರಡು ವಾರಗಳಿಂದ ದೇಶವ್ಯಾಪಿ ಲಾಕ್‌ಡೌನ್‌ ಪರಿಣಾಮವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿನ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಗೋಳು ಕೇಳುವವರಿಲ್ಲ ಎಂಬಂತಾಗಿದೆ.

ಲಾಕ್‌ ಡೌನ್‌ ಘೋಷಣೆಯಾಗುತ್ತಿದ್ದಂತೆ ವಾಹನಗಳಿದ್ದವರು, ಶ್ರೀಮಂತರು ತಕ್ಷಣ ತಮ್ಮ ಸುರಕ್ಷಿತ ನೆಲೆಗಳಿಗೆ ಸೇರಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಹೊಟ್ಟೆಪಾಡಿಗಾಗಿ ಕರಾವಳಿ ಸೇರಿದಂತೆ ರಾಜ್ಯದ ದಕ್ಷಿಣ ಭಾಗಕ್ಕೆ ವಲಸೆ ಬಂದಿದ್ದ ಉತ್ತರ ಕರ್ನಾಟಕದ ಅಸಂಘಟಿತ ವಲಯದ ಕಾರ್ಮಿಕರು ಮಾತ್ರ ಅಲ್ಲಲ್ಲಿ ಸಿಕ್ಕಿ ಹಾಕಿಕೊಂಡು ಸಂಕಟ ಅನುಭವಿಸುತ್ತಿದ್ದಾರೆ. ಕೊರೋನಾ ಮುನ್ನೆಚ್ಚರಿಕೆಯ ಬಗ್ಗೆ ತಳೆದ ಲಾಕ್‌ ಡೌನ್‌ ಬಗ್ಗೆ ಅವರಿಗೆ ಗೌರವವಿದೆ. ಆದರೆ ರಾಜ್ಯದಲ್ಲಿ ಒಂದು ಬಾರಿ ಅವರಿಗೊಂದು ಅವಕಾಶ ಕೊಟ್ಟಿದ್ದರೆ ದೂರದ ಊರಲ್ಲಿರುವ ತಮ್ಮ ವಯಸ್ಸಾದ ಹೆತ್ತವರು, ಎಳೆಯ ಮಕ್ಕಳು ಸಂಸಾರವನ್ನು ಕೂಡಿಕೊಂಡು ನೆಮ್ಮದಿಯಾಗಿರಬಹುದಿತ್ತು ಎನ್ನುವ ತಮ್ಮ ಒಡಲಾಳದ ಕೂಗು ಎಂಬುದು ಕಾರ್ಮಿಕರ ಅಳಲು.

ಅಕಾಲಿಕ ಮಳೆ: ಕೋಟ್ಯಂತರ ರುಪಾಯಿ ಬೆಳೆ ಹಾನಿ, ಸಂಕಷ್ಟದಲ್ಲಿ ರೈತ!

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಸಹಿತ ರಾಜಧಾನಿ ಬೆಂಗಳೂರು ಹೀಗೆ ದಕ್ಷಿಣದ ಏಳೆಂಟು ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕದ ಜನರೇ ಕಾರ್ಮಿಕರಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬಾದಾಮಿ ಹೀಗೆ ಹಲವೆಡೆಯ ಈ ಬಹುಪಾಲು ಮಂದಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದವರು. ತೋಟ, ಕೃಷಿ, ಕಟ್ಟಡ ಕಾರ್ಮಿಕರಾಗಿ ಹಲವು ಕೆಲಸಗಳಲ್ಲಿ ಹೆಂಗಸರೂ ಸೇರಿದಂತೆ ಲಕ್ಷಕ್ಕೂ ಅಧಿಕ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿನ ಸಂಪಾದನೆಯೇ ಅವರ ಜೀವಾಳ. ಆದರೆ ಲಾಕ್‌ ಡೌನ್‌ ಘೋಷಣೆಯಾಗುತ್ತಿದ್ದಂತೆ ಈ ಕಾರ್ಮಿಕರನ್ನು ಮಾಲೀಕರು ಹೊರಗಟ್ಟಿಊರು ಸೇರಿಕೊಳ್ಳಿ ಎಂದು ಉಪದೇಶಿಸಿ ಕೈತೊಳೆದುಕೊಂಡಿದ್ದಾರೆ.

ಒಂದೆಡೆ ನೆಲೆಯಿಲ್ಲದೇ, ವಾಹನಗಳ ವ್ಯವಸ್ಥೆಯೂ ಇಲ್ಲದೇ ಊರು ಸೇರಲೇ ಬೇಕು ಎನ್ನುವ ಹಠದೊಂದಿಗೆ ಪಾದಯಾತ್ರಿಗಳಾಗಿ ಹೊರಟವರನ್ನೂ ಅಲ್ಲಲ್ಲಿ ತಪಾಸಣಾಧಿಕಾರಿಗಳು ಕೂಡಿ ಹಾಕಿರುವುದು ಅವರ ಬದುಕನ್ನು ಹೈರಾಣಾಗಿಸಿದೆ. ಕೆಲವೆಡೆ ಅವರನ್ನು ಉಳಿಸಿಕೊಂಡು ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಸಂಪಾದನೆಯೂ ಇಲ್ಲದೇ ಒಂದೆಡೆ ಬಂಧಿತರಾಗಿ ಕಣ್ಣೀರಿಡುತ್ತಿರುವ ಈ ಕಾರ್ಮಿಕರ ಗೋಳು ಹೇಳತೀರದು. ಮಹಿಳೆಯರು, ಮಕ್ಕಳಿದ್ದವರ ಕಥೆ ಇನ್ನೂ ಅಸಹನೀಯ. ಆದರೆ ಊಟ, ವಸತಿಗಿಂತ ಅವರಿಗೀಗ ತಮ್ಮ ಊರಿನಲ್ಲಿರುವ ಮನೆ ಮಂದಿಯದ್ದೇ ಚಿಂತೆ.

'ಘಟಾನುಘಟಿಗಳು, ಮುತ್ಸದ್ಧಿಗಳು, ಇಸ್ಲಾಂ ಅಪಾಯ ಅಂದಾಜಿಸುವಲ್ಲಿ ವಿಫಲರಾದರೇ?' ಹೆಗಡೆ ಪ್ರಶ್ನೆ ಒಳಾರ್ಥ!

ಅದೆಷ್ಟೋ ಮಂದಿ ಈ ವಸತಿ ಕೇಂದ್ರಗಳಿಂದಲೂ ತಪ್ಪಿಸಿಕೊಂಡು ನಡೆದುಕೊಂಡೇ ಜಿಲ್ಲಾಗಡಿಗಳಲ್ಲಿ ಚೆಕ್‌ ಪೋಸ್ಟ್‌ ತಪ್ಪಿಸಿ ಊರು ಸೇರಿದ ಘಟನೆಗಳಿವೆ. ಇನ್ನೂ ಕೆಲವರು ಅಸ್ವಸ್ಥರಾದ ಪ್ರಕರಣಗಳೂ ವರದಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 6657 ಈ ಅಲೆಮಾರಿ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಲಾಗದೇ ಬಾಕಿಯಾಗಿದ್ದಾರೆ. ರಾಜ್ಯದ ದಕ್ಷಿಣ ಭಾಗದ ಈ ಜಿಲ್ಲೆಗಳಲ್ಲಿ ಹೀಗೆ ತವರಿಗೆ ಮರಳಲಾಗದೇ ಸಂಕಟಪಡುತ್ತಿರುವ ಅಸಂಘಟಿತ ಕಾರ್ಮಿಕರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.

ಸಮಾಜಮಂದಿರದಲ್ಲಿ ಕಾರ್ಮಿಕರಿಗೆ ಆಶ್ರಯ: ಮೂಡುಬಿದಿರೆ ತಾಲೂಕಿನಲ್ಲಿ ಇನ್ನೂರಕ್ಕೂ ಅಧಿಕ ವಲಸೆ ಕಾರ್ಮಿಕರು ಬಾಕಿಯಾಗಿದ್ದಾರೆ. ಮೂಡುಬಿದಿರೆ ಸಮಾಜ ಮಂದಿರದಲ್ಲಿ 62 ಕಾರ್ಮಿಕರಿಗೆ ಆಶ್ರಯ ನೀಡಿ, ಸುವ್ಯವಸ್ಥೆ ಕಲ್ಪಿಸಿಕೊಟ್ಟು ದಾನಿಗಳ ಸಹಕಾರದಿಂದ ಊಟೋಪಚಾರವನ್ನೂ ಮಾಜಿ ಸಚಿವ ಅಭಯಚಂದ್ರ ಜೈನ್‌ ನೇತೃತ್ವದಲ್ಲಿ ನೋಡಿಕೊಳ್ಳಲಾಗುತ್ತಿದೆ.

ಕ್ವಾರಂಟೈನ್‌ ಸ್ಥಳ​ದಲ್ಲಿ ಮಲ ವಿಸರ್ಜನೆ: ತಬ್ಲೀಘಿಗಳಿಂದ ಮತ್ತೆ ದುರ್ವರ್ತನೆ!

ನೀವೆಲ್ಲರೂ ನಮ್ಮನ್ನು ಚಲೋ ನೋಡ್ಕೋತ್ತಿದ್ದೀರಿ..ಆದ್ರ ನಮಗಾ ಮನಿ ಮಂದಿ ಅವರ ಚಿಂತಿ ಕಾಡ್ತದ... . ಸಂಪಾದನಿ ಹಾಳಾಗಿ ಹೋಗ್ಲಿ,... ನಮ್ಮನ್ನ ಬಿಡ್ತಿದ್ರ ಮನೆ ಮಂದಿ, ಮಕ್ಕಳ ಮುಖ ನೋಡಿ ನೆಮ್ಮದಿಯಾಗಿರ್ತಿದ್ವಿ ಎಂದು ಕೊಪ್ಪಳದ ಕಾರ್ಮಿಕ ಹನುಮಂತಪ್ಪ ತಿಳಿಸಿದ್ದಾರೆ.

ಅಲ್ಲಲ್ಲಿ ಬಾಕಿಯಾಗಿರುವ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರಿಗೆ ಒಂದು ಬಾರಿ ತವರು ಸೇರುವ ಅವಕಾಶವನ್ನು ರಾಜ್ಯದ ಮುಖ್ಯಮಂತ್ರಿಗಳು ಕಲ್ಪಿಸಿಕೊಡಬೇಕು. ಕಾರ್ಮಿಕರ ಸಂಕಟ ನೋಡಲಾಗುತ್ತಿಲ್ಲ. ಅವರ ಏಕೈಕ ಬೇಡಿಕೆಗೆ ಸರಕಾರ ಸ್ಪಂದಿಸಲೇಬೇಕು. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳೂ ಸೇರಿದಂತೆ ಸಂಸದರು, ಹಲವು ಶಾಸಕರಲ್ಲೂ ಈ ಬಗ್ಗೆ ವಿನಂತಿಸಲಾಗಿದೆ. ಎಲ್ಲರೂ ಈ ಕಾರ್ಮಿಕ ವರ್ಗದ ಸಂಕಟವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. - ಕೆ. ಅಭಯಚಂದ್ರ ಜೈನ್‌, ಮಾಜಿ ಸಚಿವ

-ಗಣೇಶ್‌ ಕಾಮತ್‌

Follow Us:
Download App:
  • android
  • ios