ಬೆಳಗಾವಿ(ಜ.02): ಬೆಳಗಾವಿಯಲ್ಲಿ ಎಂಇಎಸ್ ಮುಖಂಡರು ಮತ್ತೆ ಪುಂಡಾಟ ಮೆರೆದಿದ್ದಾರೆ. ಹೌದು, ಪ್ರಶ್ನೆ ಕೇಳಿದ ಮಾಧ್ಯಮದವರಿಗೆ ಎಂಇಎಸ್ ಮುಖಂಡರು ಅವಾಜ್ ಹಾಕಿ ನಂತರ ಭೇಟಿಯಾಗು ಎಂದು ಹೇಳುವ ಮೂಲಕ ತಮ್ಮ ದರ್ಪ ಮೆರೆದಿದ್ದಾರೆ.  

"

ಇಂದು(ಗುರುವಾರ) ನಗರದ ಡಿಸಿ ಕಚೇರಿ ಎದುರು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್​ ಪಾಟೀಲ್ ಹೇಳಿಕೆಯನ್ನ ಖಂಡಿಸಿದ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಭೀಮಾಶಂಕರ್ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪ್ರತಿಭಟನಾಕಾರರು ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ವೇಳೆ ಭೀಮಾಶಂಕರ್ ಪಾಟೀಲ್ ಹೇಳಿಕೆ ತಿರುರಚಬೇಡಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆಕ್ರೋಷಗೊಂಡ ಬೆಳಗಾವಿ ನಗರ ಘಟಕ ಎಂಇಎಸ್ ಅಧ್ಯಕ್ಷ ದೀಪಕ್ ದಳವಿ, ಬೆಳಗಾವಿಯ ಚೆನ್ನಮ್ಮ ವೃತ್ತವನ್ನು ಸರ್ಕಾರ ಕನ್ನಡ ಸಂಘಟನೆಗಳಿಗೆ ಕೊಟ್ಟಿದ್ದಾರೆ. ಅಲ್ಲಿ ಬಂದು ಇವರು ಮರಾಠಿಗರ ಮೇಲೆ ಗುಂಡು ಹಾರಿಸಿ ಅಂತಾ  ಹೇಳಿಕೆ ಕೊಡುತ್ತಾರೆ. ಎಂಇಎಸ್ ಅಂದ್ರೆ ಅವರು ಮರಾಠಿ ಭಾಷಿಕರೇ ಇದ್ದಾರೆ. ನಿಮಗೆ ಗೊತ್ತಿಲ್ಲ ಅಂದ್ರೆ ನನಗೆ ಆಮೇಲೆ ಭೇಟಿಯಾಗಿ ತಿಳಿಸುವೆ ಎಂದು ಪತ್ರಕರ್ತರ ಮೇಲೆ ಅವಾಜ್ ಹಾಕಿದ್ದಾರೆ. 

ಜಿಲ್ಲಾಡಳಿತ, ಪೊಲೀಸರ ವಿರುದ್ಧವೂ ಹರಿಹಾಯ್ದ ದೀಪಕ್ ದಳವಿ, ಕಾಶ್ಮೀರದಲ್ಲಿರುವ ಜನರಿಗಿಂತ ಹೆಚ್ಚು ದೌರ್ಜನ್ಯ ನಮ್ಮ ಮೇಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಯಳ್ಳೂರಿನಲ್ಲಿ ಏನಾಗಿತ್ತೆಂದು ಗೊತ್ತಿದೆ, ಕಾಶ್ಮೀರದಲ್ಲಿ ನಡೆಯುವುದಕ್ಕಿಂತ ಹೆಚ್ಚಾಗಿ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮ್ಮ ಮೇಲೆ ಇಲ್ಲಿಯ ಜಿಲ್ಲಾಡಳಿತ, ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಬೆಳಗಾವಿಗೆ ಕರೆಸುತ್ತೇವೆ, ಆದರೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ ಈ ಕುರಿತು ಡಿಸಿ ಅನುಮತಿ ಪಡೆಯುತ್ತೇವೆ ಎಂದು ಎಂಇಎಸ್ ಮುಖಂಡರು ಹೇಳಿದ್ದಾರೆ. 

ಕನ್ನಡದ ಆಸ್ತಿ ಹಾಳು ಮಾಡುತ್ತಿರುವ ಎಂಇಎಸ್ ಪುಂಡರನ್ನ ಗಡಿಯಲ್ಲಿ ನಿಲ್ಲಿಸಿ ಗುಂಡಿಕ್ಕಿ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್​ ಪಾಟೀಲ್ ಅವರು ಹೇಳಿದ್ದರು. ಈ ಹೇಳಿಕೆ ಖಂಡಿಸಿ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.