ಬೆಳಗಾವಿಯಲ್ಲಿ ಮಹಾಮೇಳಾವ್ ಆಯೋಜನೆ: ಖಾಕಿ ಖಡಕ್ ಎಚ್ಚರಿಕೆಗೆ ಬೆಚ್ಚಿಬಿದ್ದ ಎಂಇಎಸ್..!
ಈ ಬಾರಿಯೂ ಮಹಾಮೇಳಾವ್ ಆಯೋಜನೆಗೆ ಸಿದ್ಧತೆ ನಡೆಸಿದ್ದ ಎಂಇಎಸ್ ಝಾಪಾಗಳು ನಗರ ಪೊಲೀಸರು ಕೈಗೊಂಡ ದಿಟ್ಟ ಕ್ರಮದಿಂದ ಮೆತ್ತಗಾಗಿದ್ದಾರೆ. ಬೆಳಗಾವಿ ನಗರದ ಟಿಳಕವಾಡಿ ಪ್ರದೇಶದಲ್ಲಿರುವ ಲೇಲೇ ಮೈದಾನದಿಂದ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಿನ್ನೋಳ್ಳಿಯಲ್ಲಿ ಮಹಾಮೇಳಾವ್ ಆಯೋಜನೆ ಮಾಡಲು ಮುಂದಾಗಿದ್ದಾರೆ.
ಜಗದೀಶ್ ವಿರಕ್ತಮಠ
ಬೆಳಗಾವಿ(ಡಿ.04): ಗಡಿಜಿಲ್ಲೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿರುವ ಚಳಿಗಾಲದ ವಿಧಾನ ಮಂಡಳ ಅಧಿವೇಶನಕ್ಕೆ ಪರ್ಯಾಯವಾಗಿ ನಾಡದ್ರೋಹಿ ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡುತ್ತ ಬಂದಿದೆ. ಆದರೆ, ಈ ಬಾರಿ ನಗರ ಪೊಲೀಸರು ಕೈಗೊಂಡ ಖಡಕ್ ನಿರ್ಧಾರದಿಂದ ಬಾಲಮುದುಡಿದ ಝಾಪಾಗಳು ಮಹಾಮೇಳಾವ್ ಮಹಾರಾಷ್ಟ್ರಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದ್ದಾರೆ.
ಗಡಿ, ಭಾಷೆ ವಿಷಯ ಮುಂದಿಟ್ಟುಕೊಂಡು ಒಂದಿಲ್ಲೊಂದು ಕ್ಯಾತೆ ತೆಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್), ರಾಜ್ಯೋತ್ಸವದ ಪರ್ಯಾಯವಾಗಿ ಕರಾಳ ದಿನಾಚರಣೆ ಹಾಗೂ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ವಿಧಾನ ಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್ ಆಯೋಜಿಸಿ ಉದ್ಧಟತನ ಮೆರೆಯುತ್ತ ಬಂದಿದೆ. ಕಳೆದ ವರ್ಷದ ಅಧಿವೇಶನದ ಸಮಯದಲ್ಲಿ ಆಯೋಜಿಸಿದ್ದ ಮಹಾಮೇಳಾವ್ ವೇದಿಕೆಯನ್ನು ಸ್ವತಃ ಅಂದಿನ ಎಡಿಜಿಪಿ ಅಲೋಕಕುಮಾರ ನೇತೃತ್ವದಲ್ಲಿ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸುವ ಮಹಾಮೇಳಾವ್ ನಡೆಯದಂತೆ ನೋಡಿಕೊಂಡಿದ್ದರು.
ಡಿ.4ರಂದು ಸುವರ್ಣಸೌಧಕ್ಕೆ ರೈತರಿಂದ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್
ಈ ಬಾರಿಯೂ ಮಹಾಮೇಳಾವ್ ಆಯೋಜನೆಗೆ ಸಿದ್ಧತೆ ನಡೆಸಿದ್ದ ಎಂಇಎಸ್ ಝಾಪಾಗಳು ನಗರ ಪೊಲೀಸರು ಕೈಗೊಂಡ ದಿಟ್ಟ ಕ್ರಮದಿಂದ ಮೆತ್ತಗಾಗಿದ್ದಾರೆ. ಬೆಳಗಾವಿ ನಗರದ ಟಿಳಕವಾಡಿ ಪ್ರದೇಶದಲ್ಲಿರುವ ಲೇಲೇ ಮೈದಾನದಿಂದ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಿನ್ನೋಳ್ಳಿಯಲ್ಲಿ ಮಹಾಮೇಳಾವ್ ಆಯೋಜನೆ ಮಾಡಲು ಮುಂದಾಗಿದ್ದಾರೆ. ಅಲ್ಲಿನ ಕಾರ್ಯಕ್ರಮಕ್ಕೆ ಬೆಳಗಾವಿ ನಗರ ಸೇರಿದಂತೆ ಬೆಳಗಾವಿ ಗಡಿ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಮರಾಠಿಗರನ್ನು ಆಹ್ವಾನಿಸುವ ಮೂಲಕ ತಮ್ಮ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವು ದಶಕಗಳಿಂದ ಮಂಡಿಸುತ್ತಾ ಬಂದಿರುವ ಗಡಿ, ಭಾಷೆ ಸೇರಿದಂತೆ ಇನ್ನಿತರ ಹಳಸಲು ವಾದವನ್ನೇ ಚರ್ಚಿಸಲಿದ್ದಾರೆ.
ಖಾಕಿ ಖಡಕ್ ನಿರ್ಧಾರ:
ನಾಡದ್ರೋಹಿ ಎಂಇಎಸ್‌ಗೆ ಬೆಳಗಾವಿ ನಗರ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿ ನಗರ ಪೊಲೀಸ್ ಎಸ್.ಎನ್.ಸಿದ್ದರಾಮಪ್ಪ ಖಡಕ್ ಆದೇಶ ಹೊರಡಿಸಿದ್ದಾರೆ. ಅನುಮತಿ ನಿರಾಕರಣೆ ಮಧ್ಯೆಯೂ ಎಂಇಎಸ್ ಮಹಾಮೇಳಾವ್ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಬೆಳಗಾವಿಯ ಮೂರು ಪ್ರಮುಖ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲೇಲೇ ಮೈದಾನ, ಕ್ಯಾಂಪ್ ಪೊಲೀಸ್ ಠಾಣೆಯ ಧರ್ಮವೀರ ಸಂಭಾಜಿ ಸರ್ಕಲ್, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಉದ್ಯಾನದ ಸುತ್ತಮುತ್ತ ಡಿ.4ರ ಬೆಳಿಗ್ಗೆ 6ರಿಂದ ಡಿ.5 ಸಂಜೆ 6ರವೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಚೀನಾ ವೈರಸ್ ಭೀತಿ ನಡುವೆ ಅಧಿವೇಶನಕ್ಕೆ ಬೆಳಗಾವಿ ಸಜ್ಜು..!
ಮಹಾಮೇಳಾವದಿಂದ ಈ ಹಿಂದೆ ಕಾನೂನು ಮತ್ತು ಸುವ್ಯವಸ್ಥೆ ಭಂಗವಾಗಿ ನಗರದಾದ್ಯಂತ ಹಲವಾರು ಅಹಿತಕರ ಘಟನೆಗಳು ನಡೆದು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಹಾರಾಷ್ಟ್ರದ ಸಚಿವರು, ಶಾಸಕರು ಹಾಗೂ ಮರಾಠಾ ಮುಖಂಡರು ಆಗಮಿಸುವ ಹಿನ್ನೆಲೆಯಲ್ಲಿ ಗಡಿ ವಿಚಾರ ಕುರಿತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಹಲವಾರು ಕನ್ನಡಪರ ಸಂಘಟನೆಗಳು ಮಹಾಮೇಳಾವ ಕಾರ್ಯಕ್ರಮಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿವೆ. ಈ ಬಾರಿ ಅನುಮತಿ ನೀಡಿದರೆ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳಾವ್ ಸಿದ್ಧತೆಗೆ ಎಂಇಎಸ್ ಮುಖಂಡರು ಆಗಮಿಸಿದ್ದರು. ಅಲ್ಲಿಗೆ ಆಗಮಿಸಿದ ಪೊಲೀಸ್ ಅಧಿಕಾರಿಗಳು, ಎಂಇಎಸ್ ಮುಖಂಡರ ಜತೆಗೆ ಮಾತನಾಡಿ ಮಹಾಮೇಳಾವ ನಡೆಸಲು ಅನುಮತಿ ಇಲ್ಲ. ಯಾವುದೇ ರೀತಿ ಸಿದ್ಧತೆ ಮಾಡದಂತೆ ಎಚ್ಚರಿಕೆ ನೀಡಿದರು. ಈಗಾಗಲೇ ನಿಷೇಧಾಜ್ಞೆ ಜಾರಿ ಇದೆ. ಐದು ನಿಮಿಷ ಸಮಯ ಕೊಡುತ್ತೇವೆ ಇಲ್ಲಿಂದ ಜಾಗ ಖಾಲಿ ಮಾಡಿ. ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕಾಗುತ್ತದೆ ಎಂದು ಎಂದು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕೆಲಕಾಲ ಪೊಲೀಸರ ಜೊತೆ ವಾಗ್ವಾದ ನಡೆಸಿದ ಎಂಇಎಸ್ ಝಾಪಾಗಳು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ತೆಪ್ಪಗೆ ತೆರಳಿದರು.