- ಆರ್‌.ತಾರಾನಾಥ್‌, ಕನ್ನಡಪ್ರಭ

ಚಿಕ್ಕಮಗಳೂರು(ಮೇ.13): ಅಟ್ಯಾಚ್‌ ಬಾತ್‌ ರೂಂ ಇಲ್ವಾ, ವೈಫೈ ಇಲ್ವಾ. ನಾವು ಆರೋಗ್ಯವಾಗಿದ್ದೇವೆ. ಇಲ್ಲಿ ಇವಿರೋದಿಲ್ಲಾ ನಮ್ಮನ್ನು ಮನೆಗೆ ಕಳುಹಿಸಿಕೊಂಡಿ, ಪರಿಚಯಸ್ಥರು ಬಂದಿದ್ದಾರೆ ಮಾತನಾಡಿಸಲು ಅವಕಾಶ ಕೊಡಿ. ಇದು, ಹೊರ ರಾಜ್ಯಗಳ ಡೆಂಜರ್‌ ಝೋನ್‌ಗಳಿಂದ ಬಂದು ಹಾಸ್ಟೆಲ್‌ಗಳಲ್ಲಿ ಕ್ವಾರೆಂಟೈನ್‌ನಲ್ಲಿರುವ ಬಹಳಷ್ಟು ಮಂದಿಯ ಡಿಮ್ಯಾಂಡ್‌.

ಲಾಕ್‌ಡೌನ್‌ ಸಡಿಲಿಕೆ ಮಾಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಕೊಟ್ಟಿರುವ ಅವಕಾಶವನ್ನು ಹಲವು ಮಂದಿ ಬಳಸಿಕೊಳ್ಳುತ್ತಿದ್ದಾರೆ. ಹೊರ ರಾಜ್ಯಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಬರಲು ಆನ್‌ಲೈನ್‌ನಲ್ಲಿ ಈವರೆಗೆ 476 ಮಂದಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ 150 ಮಂದಿ ಜಿಲ್ಲೆಗೆ ಬಂದಿದ್ದಾರೆ.

ಹೊರರಾಜ್ಯಗಳಿಂದ ತಪಾಸಣೆ:

ಹೊರ ರಾಜ್ಯಗಳಿಂದ ಬಂದವರು ನೇರವಾಗಿ ಮನೆಗಳಿಗೆ ತೆರಳುವಂತಿಲ್ಲ. ಚಿಕ್ಕಮಗಳೂರಿನ ಹೊರವಲಯದ ತೇಗೂರಿನಲ್ಲಿರುವ ಮೂರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ತೆರೆದಿರುವ ಪರೀಕ್ಷಾ ಕೇಂದ್ರದಲ್ಲಿ ಸ್ಕ್ರೀನಿಂಗ್‌ ಮಾಡಿ, ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುವುದು. ಬಳಿಕ ಅವರಿಂದ ಪ್ರಮಾಣ ಪತ್ರ ತೆಗೆದುಕೊಂಡು ಕ್ವಾರೆಂಟೈನ್‌ ಸೆಂಟರ್‌ಗೆ ಕಳುಹಿಸಿಕೊಡಲಾಗುವುದು.

ಇದಕ್ಕಾಗಿ ಜಿಲ್ಲೆಯಲ್ಲಿ 13 ಸರ್ಕಾರಿ ಹಾಸ್ಟೆಲ್‌ಗಳನ್ನು ಗುರುತಿಸಿ ಇಲ್ಲಿಗೆ ಅಗತ್ಯವಾಗಿ ಬೇಕಾಗಿರುವ ಪೂರ್ವ ಸಿದ್ಥತೆ ಮಾಡಿಕೊಳ್ಳಲಾಗಿದೆ. ಕೊರೋನಾ ತೀವ್ರವಾಗಿರುವ ರಾಜ್ಯಗಳಿಂದ ಬಂದವರನ್ನು ಒಂದೆಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ವೈರಸ್‌ನ ತೀವ್ರತೆ ಕಡಿಮೆ ಇರುವ ರಾಜ್ಯಗಳಿಂದ ಆಗಮಿಸಿದ್ದವರನ್ನು ಮತ್ತೊಂದು ಕಡೆಗಳಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ. ಅಂದರೆ, ಮುಂಬೈ, ತಮಿಳುನಾಡು, ಆಂಧ್ರಪ್ರದೇಶದಿಂದ ಬಂದಿರುವವರು ಒಂದೇ ಹಾಸ್ಟೆಲ್‌ನಲ್ಲಿ ಇದ್ದಾರೆ. ಇಲ್ಲಿರುವ ಜನರ ಆರೋಗ್ಯ ತಪಾಸಣೆಗಾಗಿ ಪ್ರತಿದಿನ ಸಂಜೆ ವೈದ್ಯರು ಭೇಟಿ ನೀಡಬೇಕು. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಬೇಕು. ಈ ಕೆಲಸ ಕ್ವಾರೆಂಟೈನ್‌ ಕೇಂದ್ರಗಳಲ್ಲಿ ನಿರಂತರವಾಗಿ ನಡೆಯುತ್ತಿದೆ.

ಬಾಗಲಕೋಟೆಗೆ ತಬ್ಲೀಘಿಗಳ ಕಾಟ: ಮತ್ತೆ 15 ಕೊರೋನಾ ಪಾಸಿಟಿವ್‌..!

ಸಿಬ್ಬಂದಿಗೆ ಕಿರಿಕಿರಿ:

ಪರೀಕ್ಷೆಯ ನಂತರ ಕ್ವಾರೆಂಟೈನ್‌ಗೆ ಬರುತ್ತಿದ್ದಂತೆ ಇಲ್ಲಿ ಹಾಸಿಗೆ ಸರಿ ಇಲ್ಲ, ಮೊಬೈಲ್‌ ಚಾಜ್‌ರ್‍ ಮಾಡಿಕೊಳ್ಳಲು ಪ್ಲೆಗ್‌ ಸರಿ ಇಲ್ಲ, ಅಟ್ಯಾಚ್‌ ಬಾತ್‌ ರೂಂ ಇಲ್ಲ, ವೈಫೈ ಕನೆಕ್ಷನ್‌ ಇಲ್ಲ, ವರ್ಕ್ ಮಾಡಲು ಲ್ಯಾಪ್‌ಟ್ಯಾಪ್‌ ಬೇಕಾಗಿತ್ತು ಎಂಬ ಡಿಮ್ಯಾಂಡ್‌ ಮಾಡುತ್ತಿದ್ದಾರೆ. ಇದರಲ್ಲಿ ಕೆಲವು ಮಂದಿ, ತಮಗೆ ಉಳಿದುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಟ್ಟರೆ ಅದಕ್ಕಾಗಿ ಹಣ ಸಂದಾಯ ಮಾಡುವುದಾಗಿ ಹೇಳುತ್ತಿದ್ದಾರೆ.

ಕ್ವಾರೆಂಟೈನ್‌ನಲ್ಲಿರುವವರ ಪೈಕಿ ಕೆಲವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿದ್ದಾರೆ. ಕೆಲವರು ಉನ್ನತ ಹುದ್ದೆಯಲ್ಲಿದ್ದವರೂ ಇದ್ದಾರೆ. ಅವರಿಗೆ ಹಾಸ್ಟೆಲ್‌ನಲ್ಲಿನ ವಾತಾವರಣ ಹಿಡಿಸುತ್ತಿಲ್ಲ. ಅದ್ದರಿಂದ ಖಾಸಗಿಯಾಗಿ ಉಳಿದುಕೊಳ್ಳುವ ಬೇಡಿಕೆ ಇಡುತ್ತಿದ್ದಾರೆ. ಆದರೆ, ಇದಕ್ಕೆ ಅವಕಾಶ ಇಲ್ಲ. ಜಿಲ್ಲಾಡಳಿತ ಗುರುತು ಮಾಡಿರುವ ಹಾಸ್ಟೆಲ್‌ಗಳಲ್ಲಿ ಇರಲೇಬೇಕಾಗಿದೆ.

ಸ್ನಾನಕ್ಕೆ ಬಕೇಟ್‌, ಮಗ್‌ ಪ್ರತ್ಯೇಕ

14 ದಿನ ಕಾಲ ಕಳೆಯಬೇಕಾಗಿರುವ ಕ್ವಾರೆಂಟೈನ್‌ಗಳಲ್ಲಿ ನಮ್ಮ ನಿರೀಕ್ಷೆ ತಕ್ಕಂತೆ ಸವಲತ್ತು ಇಲ್ಲ. ಹಾಗಾಂತ ಇಲ್ಲಿ ಪರಿಸ್ಥಿತಿ ತುಂಬಾ ಕಠಿಣವಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ. ಸದ್ಯ ಕ್ವಾರೆಂಟೈನ್‌ನಲ್ಲಿ ಇದ್ದವರು ಬೇಕಾಬಿಟ್ಟಿಹೊರಗೆ ಹೋಗುವಂತ್ತಿಲ್ಲ. ಶೌಚಾಲಯ, ಸ್ನಾನಕ್ಕೆ ಹೋಗುವುದಾದರೆ ಮಾತ್ರ ರೂಂನಿಂದ ಹೊರಗೆ ಬರಬೇಕು. ಸ್ನಾನಕ್ಕಾಗಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಬಕೇಟ್‌ ಹಾಗೂ ಮಗ್‌ ನೀಡಲಾಗಿದೆ. ಅದನ್ನೇ ಬಳಸಿಕೊಳ್ಳಬೇಕು. ಎಲ್ಲರೂ ಕುಳಿತು ಊಟ ಮಾಡುವಂತಿಲ್ಲ. ಅಡುಗೆ ಇಲ್ಲೇ ಸಿದ್ಧಪಡಿಸಿ ಪ್ಯಾಕೇಟ್‌ಗಳ ಮೂಲಕ ಪ್ರತಿ ರೂಮ್‌ಗೂ ಕೊಡಲಾಗುತ್ತದೆ. ಪರಿಚಯಸ್ಥರು ಊಟ ತಂದರೂ, ಕೊಡುವಂತಿಲ್ಲ, ಮಾತನಾಡುವಂತಿಲ್ಲ. ಕ್ವಾರೆಂಟೈನ್‌ನಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಲಾಗುತ್ತಿದೆ