ಬೆಂಗಳೂರು, (ಮೇ.06): ನಾಳೆ (ಮೇ.07) ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ರೆ, ಮದ್ಯ ಮಾರಾಟ ಇರಲಿದೆ.

ನಾಳೆ (ಗುರುವಾರ)  ಬುದ್ಧ ಪೂರ್ಣಿಮೆ ಇರುವ ಹಿನ್ನೆಲೆ ಬೆಂಗಳೂರಿನ ಎಲ್ಲ ಭಾಗಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ.  ಈ ಕುರಿತು ಇಂದು (ಬುಧವಾರ) ಬಿಬಿಎಂಪಿ ಪಶುಪಾಲನೆ ಜಂಟಿ ನಿರ್ದೇಶಕರು ಮಾಂಸ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಮೇ.07ರಂದು ಬುದ್ಧ ಪೂರ್ಣಿಮೆ.  ಅಹಿಂಸೋ ಪರಮ ಧರ್ಮ ಎಂದು ವಿಶ್ವಕ್ಕೆ ಸಾರಿದ ಗೌತಮ ಬುದ್ಧನನ್ನು ಆರಾಧಿಸುವ ದಿನ. ಹೀಗಾಗಿ ನಗರದಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಬುದ್ಧ ಪೂರ್ಣಿಮ ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬುದ್ಧ ಪೂರ್ಣಿಮೆ ಬರುತ್ತದೆ. ಈ ವರ್ಷ ಮೇ 7ಕ್ಕೆ ಬುದ್ಧ ಪೂರ್ಣಿಮ ಬಂದಿದೆ.

ಶುಕ್ರವಾರದಿಂದ ಎಂದಿನಂತೆ ನಗರದಲ್ಲಿ ಮಾಂಸ ಮಾರಾಟ ನಡೆಯಲಿದೆ. ಆದ್ರೆ, ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.