ಬೆಂಗಳೂರು [ಅ.05]:  ಬಿಬಿಎಂಪಿಯ ನೂತನ ಮೇಯರ್‌ ಗೌತಮ್‌ ಕುಮಾರ್‌ ಹಾಗೂ ಉಪಮೇಯರ್‌ ರಾಮ್‌ ಮೋಹನ್‌ ರಾಜ್‌ ಶುಕ್ರವಾರ ಪಾಲಿಕೆ ಕೇಂದ್ರ ಕಚೇರಿಯ ತಮ್ಮ ಕೊಠಡಿಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ಕುರ್ಚಿಯಲ್ಲಿ ಕೂರುವ ಮೂಲಕ ಅಧಿಕೃತವಾಗಿ ಅಧಿಕಾರ ಆರಂಭಿಸಿದರು.

ಈ ವೇಳೆ ಮೇಯರ್‌ ತಮ್ಮ ಕಚೇರಿಯಲ್ಲಿರುವ ‘ಖಾಸಗಿ ಕೋಣೆ’ಯಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ.ಕೇಶವ ಬಲಿರಾಂ ಹೆಡ್ಗೆವಾರ್‌ ಹಾಗೂ ಸರಸಂಚಾಲಕ ಎಂ.ಎಸ್‌.ಗೋಲ್ವಾಲ್ಕರ್‌ ಅವರ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸಿರುವುದು ವಿವಾದಕ್ಕೀಡಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೇಯರ್‌ ಆಸನ ಇರುವ ವಿಶಾಲ ಕಚೇರಿಯಲ್ಲಿ ಈಗಾಗಲೇ ಇರುವ ಮಹಾತ್ಮಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್‌, ಸರ್‌ ಎಂ.ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ, ಜಗಜ್ಯೋತಿ ಬಸವೇಶ್ವರ ಹಾಗೂ ವಿವಿಧ ದೇವತಾ ಫೋಟೋಗಳಿಗೆ ಪೂಜೆ ಸಲ್ಲಿಸಿದರು. ಜತೆಗೆ ತಮ್ಮ ಕಚೇರಿಗೆ ಹೊಂದಿಕೊಂಡಿರುವ ಖಾಸಗಿ ಕೊಠಡಿಯಲ್ಲಿ ಮಧ್ಯೆ ನಾಡದೇವತೆ ಭುವನೇಶ್ವರಿ ದೇವಿಯ ಫೋಟೋ ಜತೆಗೆ ಅಕ್ಕ ಪಕ್ಕ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೇವಾರ್‌ ಮತ್ತು ಸರಸಂಚಾಲಕ ಗೋಲ್ವಾಲ್ಕರ್‌ ಫೋಟೋಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ಆರ್‌ಎಸ್‌ಎಸ್‌ ನಾಯಕರ ಫೋಟೋ ಇಟ್ಟು ಪೂಜೆ ಮಾಡಿರುವ ಮೇಯರ್‌ ಕ್ರಮ ರಾಜಕೀಯ ವಲಯದಲ್ಲಿ ವಿವಾದಕ್ಕೀಡಾಗಿದೆ. ಸಾರ್ವಜನಿಕ ವಲಯದಲ್ಲೂ ಟೀಕೆಗೆ ಗುರಿಯಾಗಿದೆ. ಇನ್ನು, ಪೂಜೆಗೆ ಆಗಮಿಸುವ ಅತಿಥಿಗಳು, ಸ್ನೇಹಿತರು, ಅಭಿಮಾನಿಗಳು ಪ್ಲಾಸ್ಟಿಕ್‌ ನಿಷೇಧದ ಹಿನ್ನೆಲೆಯಲ್ಲಿ ಹೂ, ಹಾರ, ಹಣ್ಣು ಸೇರಿದಂತೆ ಅಭಿನಂದನೆ ಸಲ್ಲಿಸುವಾಗ ಯಾವುದೇ ಪ್ಲಾಸ್ಟಿಕ್‌ ಬಳಸಿರುವ ವಸ್ತು ತರದಂತೆ ಕಚೇರಿ ಹೊರಗೆ ಸೂಚನಾ ಫಲಕ ಹಾಕಲಾಗಿತ್ತು. ಇದರಿಂದ ಕೆಲವರು ಪುಸ್ತಕ, ಸಿಹಿ ನೀಡಿ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ವೇಳೆ ಶಾಸಕ ಸತೀಶ್‌ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

‘ಸಮಸ್ಯೆ ಮುಕ್ತ ನಗರ ಗುರಿ’

ಕಚೇರಿ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ಗೌತಮ್‌ ಕುಮಾರ್‌, ನಗರದ ನಾಗರಿಕರ ಸಮಸ್ಯೆಗಳನ್ನು ನನ್ನ ವೈಯಕ್ತಿಕ ಸಮಸ್ಯೆಗಳೆಂದು ಭಾವಿಸಿ ಮುಂದಿನ ಒಂದು ವರ್ಷದಲ್ಲಿ ಆ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತೇನೆ. ನಗರವನ್ನು ಮತ್ತಷ್ಟುಸುಂದರ ಮತ್ತು ಸ್ವಚ್ಛವಾಗಿಸಿ, ಸಮಸ್ಯೆಗಳ ಮುಕ್ತ ನಗರವನ್ನಾಗಿಸಲು ಶ್ರಮಿಸುವುದಾಗಿ ಹೇಳಿದರು.