‘ಸಮೀಕ್ಷೆಗಳ ಪ್ರಕಾರ ಎಂ.ಟಿ.ಬಿಗೆ ಸೋಲು ಖಚಿತ’
ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ರಂಗೇರಿದೆ. ಇತ್ತ ಹೊಸ ಕೋಟೆಯಲ್ಲಿ ಸ್ಪರ್ಧೆ ಮಾಡಿರುವ ಎಂಟಿಬಿ ನಾಗರಾಜ್ ಸೋಲಿನ ಬಗ್ಗೆ ಭವಿಷ್ಯ ನುಡಿಯಲಾಗಿದೆ.
ಸೂಲಿಬೆಲೆ (ನ.28): ಹೊಸಕೋಟೆ ತಾಲೂಕು ಖಾಜಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆಗೂ ನಮಗೂ ಸಂಬಂಧವಿಲ್ಲ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಕಾನೂನು ರೀತಿ ಶಿಕ್ಷೆಯಾಗಲಿ ನಾನು ನ್ಯಾಯಾದ ಪರವಾಗಿ ಕಾನೂನಿಗೆ ಬದ್ಧವಾಗಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಕಾರ‍್ಯಕ್ರಮದಲ್ಲಿ ಖಾಜಿ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ನಡೆದಿರುವ ಘಟನೆಯ ಬಗ್ಗೆ ನಮಗೆ ಪೂರ್ಣ ಮಾಹಿತಿ ಇಲ್ಲ. ಆದರೆ ಗ್ರಾಮಗಳಲ್ಲಿ ಇರುವ ಸಣ್ಣ-ಸಣ್ಣ ತಪ್ಪುಗಳ ಬಗ್ಗೆ ತಿಳಿದು ಯಾವ ಹಿನ್ನೆಲೆಯಿಂದ ಈ ರೀತಿಯಾಗಿ ನಡದಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು. ನಮ್ಮದು ಶಾಂತಿಯುತ ವಾತಾವರಣ, ನಾವು ಹೊಸಕೋಟೆಯ ಅಭಿವೃದ್ಧಿ ಪರ ಹೋಗುತ್ತಿದ್ದೇವೆ. ಆದ್ದರಿಂದ ಅದಕ್ಕೂ ನಮಗೂ ಸಂಬಂಧವಿಲ್ಲ.
ಈ ಬಾರಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ನನ್ನ ವಿರುದ್ಧ ಬಳಸಿಕೊಳ್ಳಲು ಯಾವುದೇ ರೀತಿಯ ಅಸ್ತ್ರ ಸಿಕ್ಕುತ್ತಿಲ್ಲ. ಕೆಲ ದಿನಗಳ ಹಿಂದೆ ಮಿನಿ ಬಿಹಾರ್ ಎಂದು ಎಂಟಿಬಿ ನಾಗರಾಜ್ ಅವರು ಅಪಪ್ರಚಾರ ನಡೆಸಿದ್ದರು. ಮೊದಲು ಮಾರಾಟವಾಗಿದ್ದಾನೆ, ಡೀಲ್ ಆಗಿದ್ದಾನೆ, ಚೇರ್ಮನ್ ಬೋರ್ಡ್ ತಿರಸ್ಕರಿಸಿದರು ಎಂದೆಲ್ಲಾ ಅಪಪ್ರಚಾರ ಮಾಡುತ್ತಾ ಬಂದರು. ಆದರೆ ಯಾವುದಕ್ಕೂ ತಾಲೂಕಿನ ಜನತೆ ಒಪ್ಪದ ಸಂದರ್ಭದಲ್ಲಿ ಈಗ ಗೂಂಡಾ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರ ನಿರಂತರವಾಗಿ ಸಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅವರು ತಮ್ಮ ಪರವಾಗಿ ಪ್ರಚಾರ ಮಾಡುವುದಕ್ಕಿಂತ ಹೆಚ್ಚಾಗಿ ನನ್ನ ವಿರುದ್ಧ ಹೆಚ್ಚು ಅಪಪ್ರಚಾರ ಮಾಡುವಲ್ಲಿಯೇ ತೊಡಗಿದ್ದಾರೆ. ಆದರೆ, ತಾಲೂಕಿನ ಮತದಾರರು ಇದನ್ನೆಲ್ಲಾ ಅರಿತು ಈ ಬಾರಿಯ ಉಪ ಚುನಾವಣೆಯಲ್ಲಿ ಸ್ವಾಭಿಮಾನಕ್ಕೋಸ್ಕರ ಮತದಾನ ಮಾಡುವ ಮುಖಾಂತರ ಹೊಸಕೋಟೆಯ ಸ್ವಾಭಿಮಾನವನ್ನು ಉಳಿಸಲಿದ್ದಾರೆ.
ಈಗಾಗಲೇ ಕೆಲವು ಸಮೀಕ್ಷೆಗಳ ಪ್ರಕಾರ ಎಂ.ಟಿ.ಬಿ. ನಾಗರಾಜ್ ಅವರಿಗೆ ಸೋಲು ಎಂಬ ಮಾಹಿತಿ ಇದೆ. ಈ ಆಧಾರದ ಮೇಲೆ ಹಾಗೂ ತಾಲೂಕಿನ ಮತದಾರರು ಆಮಿಷಗಳಿಗೆ ಒಳಗಾಗದೆ ಸ್ವಾಭಿಮಾನಿಗಳಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಲಿದ್ದಾರೆ. ಇದನ್ನು ಅರಿತ ಅವರು, ಈಗ ಈ ರೀತಿಯಾದ ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರೂ, ಈ ಚುನಾವಣೆಯಲ್ಲಿ ತಾಲೂಕಿನ ಮತದಾರರೇ ಇದಕ್ಕೆಲ್ಲಾ ಸರಿಯಾದ ಉತ್ತರ ನೀಡಲಿದ್ದಾರೆ. ಹೊಸಕೋಟೆ ತಾಲೂಕಿನ ಸ್ವಾಭಿಮಾನವನ್ನು ಎತ್ತಿ ಹಿಡಿಯಲಿದ್ದಾರೆ ಎಂದು ತಿಳಿಸಿದರು.