ಶಿರಸಿ [ಫೆ.27]: ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಟ್ರಾಫಿಕ್ ಸಮಸ್ಯೆ ದೂರ ಮಾಡಲು ಹೊಸ ಸಂಚಾರ ಮಾರ್ಗಗಳನ್ನು ಜೋಡಿಸಲಾಗುತ್ತಿದೆ. ಒಂದೆರಡು ದಿನದಲ್ಲಿ ಕೆಲವು ತಾಸು ಪ್ರಾಯೋಗಿಕವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ಅದರ  ಸಾಧಕಬಾಧಕ ತಿಳಿದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು. 

 ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಾರ್ವಜನಿಕ ಶಾಂತಿ  ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಐದು ರಸ್ತೆಸೇರಿದಂತೆ ಕೆಲವು ಕಡೆಗಳಲ್ಲಿ ಜಾತ್ರೆ ಸಂದರ್ಭದಲ್ಲಿ ಆಗುವ ಟ್ರಾಫಿಕ್ ತೊಂದರೆ ದೂರ ಮಾಡಲು ಕೆಲವೊಂದು ಸಂಚಾರ ಮಾರ್ಗ ಬದಲಾವಣೆ ಮಾಡಿದ್ದೇವೆ. ಅದಕ್ಕೆ ಜನರು ಸಹಕಾರ ನೀಡಬೇಕು. ಅದರಿಂದ ಏನೇನು ತೊಂದರೆಯಾಗುತ್ತದೆ ಎಂಬುದನ್ನು ರಿಹರ್ಸಲ್ ಮೂಲಕ ತಿಳಿದುಕೊಳ್ಳುತ್ತೇವೆ ಎಂದರು.

ಬಲೆಗೆ ಬಿತ್ತು 200 ಕೆಜಿ ತೂಗುವ ಅಪರೂಪದ ಮೀನು, ಇದರ ಚಂದ ನೋಡಿ

ಡ್ರಾಪ್ ಪಾಯಿಂಟ್: ಐದು ರಸ್ತೆ ಸಮೀಪ, ದುಂಡಸಿ ಪೆಟ್ರೋಲ್ ಪಂಪ್, ಕರ್ಜಗಿ  ಕಲ್ಯಾಣಮಂಟಪ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಡ್ರಾಪ್ ಪಾಯಿಂಟ್ ರುತಿಸಲಾಗಿದೆ. ಅಂತಹ ಕಡೆಗಳಲ್ಲಿ ಒಂದೆರಡು ನಿಮಿಷ ವಾಹನಗಳ ನಿಲ್ಲಿಸಿ ಪ್ರಯಾಣಿಕರು ಇಳಿಯುವುದಕ್ಕೆ ಅವಕಾಶ ಕಲ್ಪಿಸುವುದಕ್ಕೆ ಯೋಜಿಸಲಾಗಿದೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ತಿಳಿಸಿದರು. ನಗರದಲ್ಲಿ ನಗರಸಭೆಯಿಂದ 28 ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.

ಯಾತ್ರಿಕರ ಅನುಕೂಲಕ್ಕೆ 20 ಕಡೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ವಿವರಣೆ ನೀಡಿದರು. ಸಾರ್ವಜನಿಕರ ಸಲಹೆ: ಪಿಯುಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಮರ್ಪಕವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಹಿರಿಯರ ಅನುಕೂಲಕ್ಕೆ ಆಟೋಗಳು ಜಾತ್ರಾ ಗದ್ದುಗೆ ಸುತ್ತಮುತ್ತಲಿನ ಹತ್ತಿರ ಪ್ರದೇಶಗಳಿಗೆ ತೆರಳಿ ಡ್ರಾಪ್ ಮಾಡಿ ಬರುವುದಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. 

ಆಟೋಗಳು ನಿಲ್ಲುವುದಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು, ನೀರಿನ ಸೌಲಭ್ಯ ಕಲ್ಪಿಸಬೇಕು. ರಾತ್ರಿ 1 ಗಂಟೆವರೆಗೂ ಸಾರಿಗೆ ಬಸ್ ಓಡಾಡುವುದಕ್ಕೆ ಅವಕಾಶ ಕಲ್ಪಿಬೇಕು. ಮನೆಗಳ ಕಳ್ಳತನ ತಡೆಗಟ್ಟಲು ಪೊಲೀಸ್ ಗಸ್ತು ಹಾಕಬೇಕು. ಸರಗಳ್ಳತನದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಲಾಯಿತು. ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಮಾರಿಕಾಂಬಾ ದೇವಸ್ಥಾನ ಅಧ್ಯಕ್ಷ ವೆಂಕಟೇಶ ನಾಯ್ಕ ಮುಂತಾದವರು ಪಾಲ್ಗೊಂಡರು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"