ಮಂಗಳೂರು (ಡಿ.16):  ರಾಜ್ಯ ಸೇರಿದಂತೆ ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗ ತೊಡಗಿದ್ದರೆ, ರಾಜ್ಯದ ಕರಾವಳಿ ಭಾಗದಲ್ಲಿ ಮಾತ್ರ ಡಿಸೆಂಬರ್‌ ಕಳೆಯುತ್ತಾ ಬಂದಿದ್ದರೂ ಇನ್ನೂ ಚಳಿಯ ಅನುಭವ ಆಗಿಲ್ಲ. 

ಮಂಗಳೂರಿನ ಪಣಂಬೂರಲ್ಲಿ ಶನಿವಾರ ದೇಶದಲ್ಲೇ ಗರಿಷ್ಠ ಉಷ್ಣಾಂಶ 38.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಭಾರತೀಯ ಮಾಪನಶಾಸ್ತ್ರ ಇಲಾಖೆ ಕೂಡ ಇದನ್ನು ದೃಢಪಡಿಸಿದೆ. ಇದರೊಂದಿಗೆ ಕರಾವಳಿಯಲ್ಲಿ ಚಳಿಗಾಲದಲ್ಲೂ ಬೇಸಿಗೆಯ ಅನುಭವ ಮುಂದುವರೆದಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶನಿವಾರ ಅಧಿಕವಾಗಿದ್ದ ಉಷ್ಣಾಂಶ ಭಾನುವಾರದ ವೇಳೆಗೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದರೂ ಗಣನೀಯ ಇಳಿಕೆಯಾಗಿಲ್ಲ. ಭಾನುವಾರ ಪಣಂಬೂರಿನಲ್ಲಿ ಗರಿಷ್ಠ 36.5 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಮುಂದಿನ ಏಳು ದಿನಗಳ ಕಾಲ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶದ ಮುನ್ಸೂಚನೆಯನ್ನೂ ಇಲಾಖೆ ನೀಡಿದೆ.

ಕಳೆದೆರಡು ವರ್ಷಗಳಿಂದ ಕರಾವಳಿ ಜಿಲ್ಲೆ ಪ್ರಕೃತಿ ವೈಪರೀತ್ಯಕ್ಕೆ ಸಿಲುಕಿದ್ದರಿಂದ ಈ ರೀತಿಯ ಹವಾಮಾನ ಬದಲಾವಣೆಗೆ ಕಾರಣ ಆಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.