Asianet Suvarna News Asianet Suvarna News

ಮಂಗ್ಳೂರು ಗಲಭೆ ಸಂಭವಿಸುವ ಬಗ್ಗೆ ಇತ್ತು ಗುಪ್ತ ಎಚ್ಚರಿಕೆ!

ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ನಡೆದ ಹಿಂಸಾಚಾರವೂ ಪೂರ್ವ ನಿರ್ಧರಿತವಾಗಿತ್ತು ಎನ್ನುವ ವಿಚಾರವೀಗ ಬಯಲಾಗಿದೆ. ಪೊಲೀಸ್ ಮೂಲಗಳಿಗೆ ಮೊದಲೆ ಈ ಬಗ್ಗೆ ಮಾಹಿತಿ ಬಂದಿದ್ದು ಈ ನಿಟ್ಟಿನಲ್ಲಿಯೇ ಎಚ್ಚರಿಕೆ ವಹಿಸಲಾಗಿತ್ತು ಎನ್ನಲಾಗಿದೆ. 

Mangalore Violence Was Pre Planned police Officials
Author
Bengaluru, First Published Dec 26, 2019, 7:57 AM IST
  • Facebook
  • Twitter
  • Whatsapp

ಮಂಗಳೂರು [ಡಿ.26]:  ಮಂಗಳೂರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಪೂರ್ವಯೋಜಿತ. ಪ್ರತಿಭಟನೆಗೂ ಕೆಲ ದಿನ ಮೊದಲು ಮಂಗಳೂರಲ್ಲಿ ಒಂದೆರಡು ಕಡೆ ಸಭೆ ಸೇರಿದ ಕೆಲವರು ಗಲಭೆಯ ರೂಪುರೇಷೆ ಸಿದ್ಧಪಡಿಸಿದ್ದರು, ವಾರದ ಹಿಂದಷ್ಟೇ ಮಡಿಕೇರಿಯಲ್ಲಿ ಸಂಘಟನೆಯೊಂದರ ರಾಜ್ಯಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಕೇರಳದ ಕಾರ್ಯಕರ್ತರೂ ಈ ಗಲಭೆಯಲ್ಲಿ ಪಾಲ್ಗೊಂಡಿದ್ದರು!

ಹೌದು, ಇಂಥದ್ದೊಂದು ಆಘಾತಕಾರಿ ವಿಚಾರ ಇದೀಗ ಬಯಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಷಡ್ಯಂತ್ರ ರೂಪಿಸಿರುವ ವಿಚಾರ ಕುರಿತು ರಾಜ್ಯ ಗುಪ್ತಚರ ಇಲಾಖೆಗೆ ಮೊದಲೇ ಮಾಹಿತಿ ಇತ್ತು. ಇದರ ಆಧಾರದ ಮೇಲೆಯೇ ಮಂಗಳೂರಲ್ಲಿ ಪ್ರತಿಭಟನೆ ದಿನವಾದ ಡಿ.19ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇಷ್ಟಾದರೂ ಕೆಲ ವ್ಯಕ್ತಿಗಳ ಪ್ರಚೋದನೆಯಿಂದಾಗಿ ಪ್ರತಿಭಟನೆಗೆ ಜನ ಸೇರಿ ಅದು ಹಿಂಸಾಚಾರಕ್ಕೆ ತಿರುಗುವಂತಾಯಿತು ಎನ್ನುತ್ತವೆ ಪೊಲೀಸ್‌ ಮೂಲಗಳು.

ಕೇರಳ ಮೂಲದವರು:

ಮಂಗಳೂರು ಗಲಭೆಯಲ್ಲಿ ಕೇರಳ ಮೂಲದ ಕೆಲ ದುಷ್ಕರ್ಮಿಗಳು ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ಮೊದಲಿಂದಲೂ ಹೇಳುತ್ತಲೇ ಬಂದಿದ್ದಾರೆ. ಯಾಕೆಂದರೆ ಪ್ರತಿಭಟನೆಗೂ ಒಂದು ವಾರದ ಹಿಂದೆ ಮಡಿಕೇರಿಯಲ್ಲಿ ನಿಷೇಧಿತ ಸಂಘಟನೆಯೊಂದರ ರಾಜ್ಯಮಟ್ಟದ ಸಭೆ ಆಯೋಜಿಸಲಾಗಿತ್ತು. ಆ ಸಭೆಗೆ ಕೇರಳದಿಂದ ಹಲವಾರು ಮಂದಿ ಆಗಮಿಸಿದ್ದರು. ಸಭೆ ಮುಗಿದ ಬಳಿಕ ಅವರು ಕೇರಳಕ್ಕೆ ವಾಪಸಾಗುವ ಬದಲು ಗಲಭೆ ನಡೆಸುವ ಉದ್ದೇಶದಿಂದಲೇ ಮಂಗಳೂರಿಗೆ ಬಂದಿದ್ದರು ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಕಲೆಹಾಕಿತ್ತು. ಇದಾದ ಬಳಿಕ ಮಂಗಳೂರು ಗಲಭೆಗೆ ಎರಡು ದಿನಗಳ ಮೊದಲು ಮಂಗಳೂರು ಕೇಂದ್ರ ಸ್ಥಾನದ ಎರಡು ಕಡೆ ಸಂಚುಕೋರರು ಗುಪ್ತಸಭೆ ನಡೆಸಿದ್ದರು. ಈ ಸಭೆಯಲ್ಲಿ ನಿಗದಿತ ದಿನದಂದು ಪ್ರತಿಭಟನೆ ನೆಪದಲ್ಲಿ ಗಲಭೆ ನಡೆಸುವ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಈ ವಿಚಾರವನ್ನು ಸಭೆಯ ಬಳಿಕ ಕೆಲ ಧಾರ್ಮಿಕ ಮುಖಂಡರ ಮಾರ್ಗದರ್ಶನದಲ್ಲಿ ಎಲ್ಲರ ಗಮನಕ್ಕೆ ತಿಳಿಸಲಾಗಿತ್ತು. ಈ ಕುರಿತು ಮಾಹಿತಿ ಇದ್ದ ಕಾರಣದಿಂದಲೇ ಡಿ.19ರಂದು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಹೇರಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ್ದರು. ಆದರೂ ಅಂದು ಕೆಲ ವ್ಯಕ್ತಿಗಳು ನೀಡಿದ ಪ್ರಚೋದನೆಯಿಂದಾಗಿ ಏಕಾಏಕಿ ಮುನ್ನುಗ್ಗಿ ಬಂದ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದರು, ಈ ವೇಳೆ ಗೋಲಿಬಾರ್‌ ನಡೆದು ಇಬ್ಬರು ಸಾವಿಗೀಡಾಗಬೇಕಾಯಿತು. ಗಲಭೆಕೋರರ ಪೂರ್ವಭಾವಿ ಸಭೆ ಹಾಗೂ ಅಲ್ಲಿ ನಡೆದ ಚರ್ಚೆಗಳ ಸಮಗ್ರ ವಿವರ ಇದೀಗ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಕೆಲವರಿಗೆ ಅವಕಾಶ ನೀಡಿದ್ದರು:

ಡಿ.18ರ ಮೊದಲು ಕಾಂಗ್ರೆಸ್‌ ಸೇರಿ ಒಂದೆರಡು ಸಂಘಟನೆಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲು ಮಂಗಳೂರು ಪೊಲೀಸರು ಅವಕಾಶ ನೀಡಿದ್ದರು. ಈ ಎಲ್ಲ ಪ್ರತಿಭಟನೆಗಳು ಶಾಂತಿಯುತವಾಗಿಯೇ ನಡೆದಿತ್ತು. ಆದರೆ, ಆ ಬಳಿಕ ಪ್ರತಿಭಟನೆಗಳಿಗೆ ಅನುಮತಿ ಕೋರಿ ವಿವಿಧ ಸಂಘಟನೆಗಳು ಅರ್ಜಿ ಸಲ್ಲಿಸಿದರೂ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಆಧರಿಸಿ ಪರಿಶೀಲನೆಯ ಕಾರಣ ನೀಡಲಾಗಿತ್ತು. ಬಳಿಕ ನಿಷೇಧಾಜ್ಞೆ ಜಾರಿಗೊಳಿಸಿ ಪ್ರತಿಭಟನೆ ಹಾಗೂ ಮೆರವಣಿಗೆಗೆ ಅನುಮತಿ ನೀಡಲು ನಿರಾಕರಿಸಲಾಗಿತ್ತು. ಇದಕ್ಕೂ ಮುನ್ನ ಪ್ರತಿಭಟನೆ, ಮೆರವಣಿಗೆಗೆ ಅವಕಾಶ ನೀಡಿದರೆ ಆಗಬಹುದಾದ ಅಪಾಯ ಹಾಗೂ ನಿಷೇಧಾಜ್ಞೆ ಜಾರಿಗೊಳಿಸಬೇಕಾದ ಅನಿವಾರ್ಯತೆ ಕುರಿತು ಉನ್ನತ ಅಧಿಕಾರಿಗಳಿಗೆ ಮಂಗಳೂರು ಪೊಲೀಸರು ವಿವರಿಸಿದ್ದರು ಎಂದು ಮೂಲಗಳು ಹೇಳಿವೆ.

ಮಂಗಳೂರು ಗಲಭೆ ಹಿಂದೆ ಪಾಕಿಸ್ತಾನದ ಕೈವಾಡ'...

ಈ ಎಲ್ಲ ಬೆಳವಣಿಗೆಗಳ ನಡುವೆಯೂ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಿವಿಧ ಸಂಘಟನೆಗಳ ಮುಖಂಡರು, ಧಾರ್ಮಿಕ ಮುಖಂಡರ ಜತೆಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು. ಡಿ.17 ಮತ್ತು 18ರಂದು ಕರೆ ಮಾಡಿ ಹಾಗೂ ಖುದ್ದಾಗಿ ಮಾತುಕತೆ ನಡೆಸಿ ಅವರ ಮನವೊಲಿಸಿದ್ದರು. ಈ ಮಾತುಕತೆ ಬಳಿಕ ಪ್ರತಿಭಟನೆ ರದ್ದಾಗಿದೆ ಎಂದೂ ಹೇಳಲಾಗಿತ್ತು. ಇದರ ಮಧ್ಯೆ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ರಿಯಾಜ್‌ ಫರಂಗಿಪೇಟೆಯ ಹೆಸರಲ್ಲಿ ಯೋಧರಿಗೇ ನಾವು ಹೆದರಿಲ್ಲ, ಇನ್ನು ಮಂಗಳೂರು ಪೊಲೀಸರಿಗೆ ಹೆದರುತ್ತೇವೆಯೇ? ನಿಗದಿಪಡಿಸಿದ ದಿನ, ನಿಗದಿಪಡಿಸಿದ ಸ್ಥಳ ಹಾಗೂ ಸಮಯದಲ್ಲಿ ಪ್ರತಿಭಟನೆ ನಡೆಸಿಯೇ ಸಿದ್ಧ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಡಲಾಗಿತ್ತು. ಇದನ್ನು ನೋಡಿ ಪ್ರತಿಭಟನೆಗೆ ಜನ ಸೇರಿದ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Follow Us:
Download App:
  • android
  • ios