ಮಂಗಳೂರು(ಮಾ.06): ಹಡಗಿನ ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು-ಲಕ್ಷದ್ವೀಪ ನಡುವಿನ ಜಲ ಸಾರಿಗೆ ಸಂಪರ್ಕ ಪುನಾರಂಭಗೊಂಡಿದೆ. ಮಂಗಳೂರು ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ಪ್ಯಾಸೆಂಜರ್‌ ಹಡಗು ಬುಧವಾರ ಯಾನ ಕೈಗೊಂಡಿದೆ.

ಲಕ್ಷದ್ವೀಪಕ್ಕೆ ಯಾನ ನಡೆಸುವ ಎರಡು ಹಡಗುಗಳು ಕೆಟ್ಟುಹೋದ ಕಾರಣ ಮಂಗಳೂರು-ಲಕ್ಷದ್ವೀಪ ನಡುವೆ ಜಲ ಸಾರಿಗೆ ಸಂಪರ್ಕ ಒಂದು ತಿಂಗಳಿಂದ ಸ್ಥಗಿತಗೊಂಡಿತ್ತು. ಸುಮಾರು 150 ಮಂದಿ ಪ್ರಯಾಣಿಕರನ್ನು ಹೊತ್ತ ಮಿನಿಕೊಯ್‌ ಹಡಗು ಬುಧವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಮಂಗಳೂರಿನಿಂದ ಹೊರಟಿದ್ದು, ಗುರುವಾರ ಮಧ್ಯಾಹ್ನ 1 ಗಂಟೆಗೆ ಲಕ್ಷ ದ್ವೀಪ ತಲುಪಿದೆ. ಪ್ರಸಕ್ತ ಮಂಗಳೂರಿನಿಂದ ಒಂದು ಹಾಗೂ ಕೇರಳದ ಕೊಚ್ಚಿನ್‌ನಿಂದ ಎರಡು ಹಡಗುಗಳು ಲಕ್ಷದ್ವೀಪಕ್ಕೆ ಸಂಚರಿಸುತ್ತಿವೆ.

560 ರು. ಪ್ರಯಾಣ ದರ:

ಮಂಗಳೂರಿನಿಂದ ಲಕ್ಷದ್ವೀಪಕ್ಕೆ 10ರಿಂದ 12 ಗಂಟೆ ಅವಧಿಯ ಪ್ರಯಾಣಕ್ಕೆ ಹಡಗುಯಾನ ದರ 560 ರು. ಇದೆ. ಲಕ್ಷದ್ವೀಪದಲ್ಲಿ ವಿವಿಧ ದ್ವೀಪಗಳು ಇರುವುದರಿಂದ ಪ್ರಯಾಣದ ಅವಧಿ ಹಾಗೂ ದರದಲ್ಲಿ ವ್ಯತ್ಯಾಸವಿದೆ. ಆದರೆ ಲಕ್ಷ ದ್ವೀಪಕ್ಕೆ ಪ್ರಯಾಣಿಸಬೇಕಾದರೆ ಟಿಕೆಟ್‌ ಪಡೆಯುವುದು ಅಷ್ಟುಸುಲಭವಲ್ಲ. ಲಕ್ಷದ್ವೀಪ ಪ್ರಯಾಣ ಕೈಗೊಳ್ಳುವವರು ಲಕ್ಷದ್ವೀಪದಿಂದಲೇ ಪ್ರಾಯೋಜನೆ ಮಾಡಿದ ಪತ್ರವನ್ನು ಹೊಂದಿರಬೇಕಾಗುತ್ತದೆ. ಪ್ರಾಯೋಜಕರ ಪತ್ರ ಇದ್ದರೆ ಮಾತ್ರ ಮಂಗಳೂರಿನ ಹಳೆ ಬಂದರಿನಲ್ಲಿರುವ ಟಿಕೆಟ್‌ ಕೌಂಟರ್‌ನಲ್ಲಿ ಟಿಕೆಟ್‌ ಪಡೆಯಲು ಸಾಧ್ಯವಾಗುತ್ತದೆ.

ಮಣಿಪಾಲ- ಬೆಂಗಳೂರು ಮಲ್ಟಿಆಕ್ಸ್‌ಲ್‌ ವೋಲ್ವೊ ಬಸ್‌ ಆರಂಭ

ಲಕ್ಷದ್ವೀಪದಲ್ಲಿ ಒಂಭತ್ತು ದ್ವೀಪವಿದ್ದು, ಅಲ್ಲಿ ಬೇಕಾಬಿಟ್ಟಿಪ್ರವೇಶ ಮತ್ತು ಓಡಾಡಲು ನಿರ್ಬಂಧ ಇದೆ. ಅಲ್ಲಿನ ದ್ವೀಪಗಳಿಗೆ ಭೇಟಿ ನೀಡಬೇಕಾದರೆ ನಿವಾಸಿ ಪ್ರಾಯೋಜಕರ ಪತ್ರದ ಹೊರತಾಗಿ ಲಕ್ಷದ್ವೀಪ ಆಡಳಿತ ನೀಡುವ ಪ್ರವೇಶ ಪರವಾನಿಗೆ ಪತ್ರವನ್ನು ಹೊಂದಿರಬೇಕು ಎಂಬ ಕಟ್ಟುನಿಟ್ಟಿನ ನಿಯಮ ಇದೆ. ಪ್ರಾಯೋಜಕರು ಸಂಬಂಧಪಟ್ಟದಾಖಲೆ ಪತ್ರಗಳನ್ನು ಲಕ್ಷದ್ವೀಪ ಆಡಳಿತಕ್ಕೆ ಒಪ್ಪಿಸಿ ಮಂಜೂರಾತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆ ಮುಗಿದ ಬಳಿಕವೇ ಮಂಗಳೂರಿನ ಹಳೆ ಬಂದರಿನಲ್ಲಿ ಅಧಿಕೃತ ಗುರುತು ಚೀಟಿ ತೋರಿಸಿ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕು.