ಮಂಗಳೂರು[ಆ.27]: ಎಲ್ಲರೂ ಹುಟ್ಟಿದ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದರೆ, ಇಲ್ಲೊಬ್ಬಳು 10 ವರ್ಷದ ಬಾಲಕಿ ತನ್ನ ಹುಟ್ಟಿನ ದಿನಕ್ಕೆ ಅಜ್ಜಿ ನೀಡಿದ ಬರೋಬ್ಬರಿ 10 ಸಾವಿರ ರು.ಗಳ ಉಡುಗೊರೆ ಮೊತ್ತವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆಯಾಗಿ ನೀಡುವ ಮೂಲಕ ಮಾನವೀಯ ಸ್ಪಂದನ ತೋರಿಸಿದ್ದಾಳೆ.

ಮಂಗಳೂರಿನ ತೊಕ್ಕೊಟ್ಟು ಸಮೀಪದ ಕಿನ್ಯಾಎಂಬಲ್ಲಿನ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಅವರ ಮೊಮ್ಮಗಳು ಸನ್ಮತಿ ನೆರೆ ಸಂತ್ರಸ್ತರಿಗೆ ಮಿಡಿದಿದ್ದಾಳೆ. ಜಿಲ್ಲಾ ಪಿಯುಸಿ ಇಲಾಖೆಯಲ್ಲಿ ಶಾಖಾಧಿಕಾರಿಯಾಗಿರುವ ಶಕುಂತಳಾ ಶೆಟ್ಟಿ ಪುತ್ರ ನಿತಿನ್‌ ಅವರ 2ನೇ ಪುತ್ರಿ ಸನ್ಮತಿಯ ಜನ್ಮದಿನವನ್ನು ಭಾನುವಾರವಷ್ಟೇ ಆಚರಿಸಲಾಗಿದೆ.

ಸೋಮವಾರ ಬೆಳಗ್ಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಶಾಲಾ ಸಮವಸ್ತ್ರದಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ಗೆ 10000ದ ಚೆಕ್‌ ನೀಡಿ ಅಚ್ಚರಿ ಮೂಡಿಸಿದರು. ಹುಟ್ಟಿದ ದಿನದ ನೆನಪಿನಲ್ಲಿ ನೆರೆ ಸಂತ್ರಸ್ತರಿಗೆ ನನ್ನ ಕಿಂಚಿತ್‌ ಕಾಣಿಕೆ ಎಂಬ ಒಕ್ಕಣೆಯ ಪತ್ರವನ್ನೂ ಚೆಕ್‌ ಜೊತೆಗಿರಿಸಿದ್ದಳು.