ಮಂಗಳೂರು[ಜು.09]: ಅನಾರೋಗ್ಯಕ್ಕೆ ಒಳಗಾದ ತಂದೆಗೆ ಔಷಧಿ ತರಲು ತಡರಾತ್ರಿ ರಸ್ತೆ ಬದಿ ನಿಂತಿದ್ದ ವೈದ್ಯೆಯೊಬ್ಬರಿಗೆ ಪೊಲೀಸ್ ಅಧಿಕಾರಿಯೊಬ್ಬರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸಹಾಯ ಮಾಡಿದ ಕದ್ರಿ ಠಾಣೆ ಎಎಸ್ಸೈ ಸಂತೋಷ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅಭಿನಂದಿಸಿದ್ದಾರೆ

ಜು.೫ರಂದು ತಡರಾತ್ರಿ 1.30 ರ ವೇಳೆಗೆ ಎಎಸ್ಸೈ ಸಂತೋಷ್ ಮತ್ತು ಚಾಲಕ ನಾಗರಾಜ್ ಗಸ್ತಿನಲ್ಲಿದ್ದರು. ಶಿವಭಾಗ್ ಬಳಿ ವೈದ್ಯೆಯೊಬ್ಬರು ಅಡ್ಡಾದಿಡ್ಡಿ ಹೋಗುತ್ತಿದ್ದುದನ್ನು ಕಂಡು ವಿಚಾರಿಸಿದಾಗ ‘ತಂದೆಗೆ ಹುಷಾರಿಲ್ಲ, ಮೆಡಿಕಲ್‌ಗೆ ಹೋಗಬೇಕಾಗಿದೆ. ಅದಕ್ಕೆ ರಿಕ್ಷಾಕ್ಕೆ ಕಾಯುತ್ತಿದ್ದೇನೆ’ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ.

ಇದನ್ನು ಕೇಳಿದ ಪೊಲೀಸರು, ವಾಹನದಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಕರಂಗಲ್ಪಾಡಿ ಮೆಡಿಕಲ್‌ವೊಂದರಲ್ಲಿ ಔಷಧಿ ತೆಗೆಸಿಕೊಟ್ಟು ಮನೆಗೆ ಬಿಟ್ಟಿದ್ದರು

ಪೊಲೀಸರ ಸಹಾಯದ ಕುರಿತು ವೈದ್ಯೆ ಆಯುಕ್ತರಿಗೆ ಟ್ವೀಟ್ ಮಾಡಿ ಪೊಲೀಸರ ಮಾನವೀಯ ಕಾರ್ಯಕ್ಕೆ ಅಭಿನಂದಿಸಿದ್ದರು. ಈ ಹಿನ್ನೆಲೆಯಲ್ಲಿ ಎಎಸ್ಸೈ ಸಂತೋಷ್ ಅವರನ್ನು ಆಯುಕ್ತ ಸಂದೀಪ್ ಪಾಟೀಲ್ ಕಚೇರಿಗೆ ಕರೆದು ಅಭಿನಂದಿಸಿ, ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.