Mandya : ಅಧಿಕಾರವಿಲ್ಲದಿದ್ದರೂ ಸಭೆ ಕರೆದಿದ್ದ ಸಂಸದೆ..!

ಸಂಸದರಿಗೆ ದಿಶಾ ಸಭೆ ನಡೆಸುವುದಕ್ಕಷ್ಟೇ ಅಧಿಕಾರ ಸೀಮಿತವಾಗಿರುವುದನ್ನು ಮರೆತ ಸಂಸದೆ ಸುಮಲತಾ ಅಂಬರೀಶ್‌ ನರೇಗಾ ಅನುಷ್ಠಾನಾಧಿಕಾರಿಗಳ ಸಭೆ ಕರೆದು ಕೊನೇ ಘಳಿಗೆಯಲ್ಲಿ ಸರ್ಕಾರದ ಆದೇಶ ಉಲ್ಲಂಘನೆಯಾಗುತ್ತಿರುವುದನ್ನು ಅರಿತು ಸಭೆ ರದ್ದುಪಡಿಸಿದ ಘಟನೆ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

Mandya The MP called the meeting even though she had no authority snr

 ಮಂಡ್ಯ (ನ.19):  ಸಂಸದರಿಗೆ ದಿಶಾ ಸಭೆ ನಡೆಸುವುದಕ್ಕಷ್ಟೇ ಅಧಿಕಾರ ಸೀಮಿತವಾಗಿರುವುದನ್ನು ಮರೆತ ಸಂಸದೆ ಸುಮಲತಾ ಅಂಬರೀಶ್‌ ನರೇಗಾ ಅನುಷ್ಠಾನಾಧಿಕಾರಿಗಳ ಸಭೆ ಕರೆದು ಕೊನೇ ಘಳಿಗೆಯಲ್ಲಿ ಸರ್ಕಾರದ ಆದೇಶ ಉಲ್ಲಂಘನೆಯಾಗುತ್ತಿರುವುದನ್ನು ಅರಿತು ಸಭೆ ರದ್ದುಪಡಿಸಿದ ಘಟನೆ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ನರೇಗಾ ಯೋಜನೆಯಲ್ಲಿ ಮಂಡ್ಯ ಜಿಲ್ಲೆ (Mandya)  ಕೊನೆಯ ಸ್ಥಾನದಲ್ಲಿರುವುದನ್ನು ಅರಿತಿದ್ದ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh)  ಯೋಜನೆಯ ಹಿನ್ನಡೆಗೆ ಕಾರಣಗಳೇನು, ನರೇಗಾ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯ ಬಗ್ಗೆ ತಿಳಿದುಕೊಳ್ಳಲು ಶುಕ್ರವಾರ ಸಂಜೆ 4.30ಕ್ಕೆ ಜಿಪಂ ಕಚೇರಿ ಸಂಕೀರ್ಣದಲ್ಲಿ ಯೋಜನೆಯ ಅನುಷ್ಠಾನಾಧಿಕಾರಿಗಳ ಸಭೆ ಕರೆದಿದ್ದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಸಂಜೀವಪ್ಪ ಸೂಚನೆಯನ್ವಯ ಎಲ್ಲಾ ಅಧಿಕಾರಿಗಳು ಸಭೆಗೆ ಆಗಮಿಸಿದ್ದರು.

ವಾಸ್ತವದಲ್ಲಿ ನರೇಗಾ ಯೋಜನೆಯ ಅನುಷ್ಠಾನ ಕುರಿತಂತೆ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸುವುದಕ್ಕೆ ಸಂಸದರಿಗೆ ಅಧಿಕಾರವೇ ಇಲ್ಲ. ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಕೇಂದ್ರ ಪುರಸ್ಕೃತ ಯೋಜನೆಗಳ ಸಭೆಯಲ್ಲೇ ನರೇಗಾ, ಜಲಜೀವನ್‌ ಮಿಷನ್‌ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನ, ಪ್ರಗತಿಯ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಸಂಸದರಿಗೆ ಅವಕಾಶವಿದೆ.

ಸರ್ಕಾರದ ಆದೇಶವನ್ನೇ ತಿಳಿಯದೆ ಸಂಸದೆ ಸುಮಲತಾ ಅಂಬರೀಶ್‌ ಶುಕ್ರವಾರ ನರೇಗಾ ಯೋಜನೆ ಅನುಷ್ಠಾನಾಧಿಕಾರಿಗಳ ಸಭೆ ಕರೆದಿದ್ದರು. ಶಿಷ್ಟಾಚಾರದ ಬಗ್ಗೆ ಸೂಚನೆ ನೀಡಬೇಕಾದ ಮೇಲಂತದ ಅಧಿಕಾರಿಗಳು ಅದನ್ನು ಮರೆತಿದ್ದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಸಂಜೀವಪ್ಪ ಅವರು ಶಿಷ್ಟಾಚಾರ ಮರೆತು ಅಧಿಕಾರಿಗಳ ಸಭೆ ಕರೆದು ಸಂಸದರಿಗೆ ಪರೋಕ್ಷ ಬೆಂಬಲ ಸೂಚಿಸಿದ್ದರು.

ಏಪ್ರಿಲ್‌ 16, 2019ರಲ್ಲಿ ಸರ್ಕಾರ ಹೊರಡಿಸಿರುವ ಸರ್ಕಾರದ ಸುತ್ತೋಲೆಯಲ್ಲಿ ಶಾಸಕರು ಅಥವಾ ಖಾಸಗಿ ಪ್ರಮುಖರ ಅಧ್ಯಕ್ಷತೆಯಲ್ಲಿ ಹಲವು ಸಮಿತಿಗಳನ್ನು ನೇಮಕ ಮಾಡಲಾಗಿದೆ. ಆಯಾ ಸಮಿತಿಯ ಕಾರ್ಯವ್ಯಾಪ್ತಿಗೆ ಒಳಪಟ್ಟು ಸಮೀಕ್ಷಣಾ ಸಭೆ ನಡೆಸಬಹುದದು. ಇದನ್ನು ಹೊರತುಪಡಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮೀಕ್ಷಣಾ ಸಭೆಗಳನ್ನು ನಡೆಸುವಂತಿಲ್ಲ. ವಿರೋಧಪಕ್ಷದ ನಾಯಕರಿಗೂ ಸಹ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಅವಕಾಶವಿಲ್ಲ. ಆದರೆ, ಅಗತ್ಯ ಮಾಹಿತಿಯನ್ನು ಮಾತ್ರ ಒದಗಿಸಬಹುದು. ಅಂತಹ ಸಭೆಗಳನ್ನು ನಡೆಸಲು ಸಚಿವರು ಮತ್ತು ಅಧಿಕಾರಿಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಹಂತದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಶಿಷ್ಟಾಚಾರದ ಪೂರ್ಣ ತರಬೇತಿ ನೀಡುವುದು, ಶಿಷ್ಟಾಚಾರ ಲೋಪವಾದ ಪ್ರಕರಣಗಳಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಸ್ಪಷ್ಟವಾಗಿ ತಿಳಿಸಿದೆ. ಆದರೂ ಅಧಿಕಾರಿಗಳು ಸಭೆ ಕರೆಯಲು ಅವಕಾಶ ಮಾಡಿಕೊಟ್ಟಿದ್ದೇಕೆ ಎನ್ನುವುದು ಪ್ರಶ್ನೆಯಾಗಿದೆ.

ಸಂಸದರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದರೂ ಅದನ್ನು ಮನವರಿಕೆ ಮಾಡಿಕೊಡುವ ಕೆಲಸವೂ ಅಧಿಕಾರಿಗಳಿಂದ ನಡೆದಿಲ್ಲದಿರುವುದು ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳು ಅದನ್ನು ತಿದ್ದುವ ಪ್ರಯತ್ನವನ್ನೂ ಮಾಡದಿರುವುದು ಟೀಕೆಗೆ ಕಾರಣವಾಗಿದೆ. ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಅವರನ್ನು ದುರ್ಬಳಕೆ ಮಾಡಿಕೊಂಡು ಸಂಸದರ ಅಧ್ಯಕ್ಷತೆಯಲ್ಲಿ ಸಭೆ ಕರೆದಿರುವುದನ್ನು ನೋಡಿದರೆ ಸಂಸದರು ಅಧಿಕಾರಿಗಳ ಹಕ್ಕನ್ನು ಮೊಟಕುಗೊಳಿಸಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ.

ಜಿಪಂ ಉಪಕಾರ್ಯದರ್ಶಿ ಹೊರಡಿಸಿರುವ ಸೂಚನಾ ಪತ್ರದಲ್ಲಿ ಈ ಸಭೆ ಸಂಸದರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಲ್ಲರೂ ತಪ್ಪದೇ ಹಾಜರಾಗಬೇಕು ಎಂದು ತಿಳಿಸಿರುವುದು ಸರ್ಕಾರದ ಶಿಷ್ಟಾಚಾರದ ಉಲ್ಲಂಘನೆ ಎಂದೇ ಹೇಳಲಾಗುತ್ತಿದೆ.

ಕೊನೆಗೆ ಸಭೆ ನಡೆಸಲು ಜಿಲ್ಲಾ ಪಂಚಾಯ್ತಿ ಕಚೇರಿಗೆ ಆಗಮಿಸಿದ ಸಂಸದರಿಗೆ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿರುವ ಕುರಿತು ಸಿಇಒ ಮನದಟ್ಟು ಮಾಡಿಕೊಟ್ಟಬಳಿಕ ಸಭೆಯನ್ನು ರದ್ದುಗೊಳಿಸಿದರು. ಸಿಇಒ ಕಚೇರಿಯಲ್ಲೇ ಕುಳಿತು ಸಂಸದೆ ಸುಮಲತಾ ಅಂಬರೀಶ್‌ ಮಾಹಿತಿ ಪಡೆದುಕೊಂಡು ಹೋದರು.

Latest Videos
Follow Us:
Download App:
  • android
  • ios