Asianet Suvarna News Asianet Suvarna News

ಮಂಡ್ಯ : ಹೊಸ ಸಕ್ಕರೆ ಕಾರ್ಖಾನೆ ವಿಚಾರ ಮುನ್ನೆಲೆಗೆ

  ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಹೊಸ ಸಕ್ಕರೆ ಕಾರ್ಖಾನೆಯ ರೂಪುರೇಷೆಗಳು ಹೇಗಿರಬೇಕೆಂಬ ಕುರಿತಂತೆ ಪಕ್ಷಾತೀತವಾಗಿ ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವುದಕ್ಕೆ ವೇದಿಕೆ ಸಿದ್ಧಗೊಂಡಿದೆ.

Mandya  The issue of a new sugar factory is in the forefront snr
Author
First Published Jul 11, 2024, 1:43 PM IST

 ಮಂಡ್ಯ ಮಂಜುನಾಥ

 ಮಂಡ್ಯ :  ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಹೊಸ ಸಕ್ಕರೆ ಕಾರ್ಖಾನೆಯ ರೂಪುರೇಷೆಗಳು ಹೇಗಿರಬೇಕೆಂಬ ಕುರಿತಂತೆ ಪಕ್ಷಾತೀತವಾಗಿ ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವುದಕ್ಕೆ ವೇದಿಕೆ ಸಿದ್ಧಗೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಎಲ್ಲಾ ಪಕ್ಷಗಳ ರೈತ ಪ್ರತಿನಿಧಿಗಳು, ರೈತ ಮುಖಂಡರ ಸಭೆ ಕರೆದು ಸಾಧಕ-ಬಾಧಕಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ತಾಂತ್ರಿಕ ಸಮಿತಿಯಿಂದ ವರದಿ:

ಹೊಸ ಕಾರ್ಖಾನೆಯನ್ನು ಎಲ್ಲಿ ಸ್ಥಾಪನೆ ಮಾಡಬೇಕೆಂಬ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವ ಮುನ್ನ ಕಾರ್ಖಾನೆಗೆ ಸಿಗಬಹುದಾದ ಕಬ್ಬಿನ ಪ್ರಮಾಣ, ಕಬ್ಬು ಅರೆಯುವ ಸಾಮರ್ಥ್ಯ, ಸಹ ವಿದ್ಯುತ್ ಘಟಕ ಆರಂಭಗೊಳ್ಳುವುದಕ್ಕೆ ಪೂರಕವಾಗಿ ಕಬ್ಬು ಸಿಗಲಿದೆಯೇ ಎಂಬ ಬಗ್ಗೆ ಚರ್ಚೆ ನಡೆಯಲಿರುವುದಾಗಿ ತಿಳಿದುಬಂದಿದೆ.

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತಂತೆ ತಾಂತ್ರಿಕ ಸಮಿತಿ ಸಿದ್ಧಪಡಿಸುವ ವರದಿಯನ್ನು ಆಧರಿಸಿ ಎಲ್ಲಿ ಸ್ಥಾಪನೆ ಮಾಡಬೇಕು, ಏನೆಲ್ಲಾ ಸೌಲಭ್ಯ ಒಳಗೊಂಡಿರಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಹೊಸ ಕಾರ್ಖಾನೆಯನ್ನು ಈಗ ಕಾರ್ಖಾನೆ ಇರುವ ಸ್ಥಳದಲ್ಲೇ ಸ್ಥಾಪಿಸಿದರೆ ಎಷ್ಟು ಹಣ ಖರ್ಚಾಗಲಿದೆ. ಬೇರೆ ಬೇರೆ ಘಟಕಗಳ ಸ್ಥಾಪನೆಗೆ ಅವಕಾಶ ಸಿಗಲಿದೆಯೇ, ಬೇರೆಡೆ ಸ್ಥಾಪಿಸಿದರೆ ಆಗುವ ಖರ್ಚೆಷ್ಟು. ರೈತರಿಗೆ ಆಗಬಹುದಾದ ಅನುಕೂಲಗಳೇನು ಎನ್ನುವುದನ್ನು ತಾಂತ್ರಿಕ ಸಮಿತಿ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.

ಕಾರ್ಖಾನೆ ಸ್ಥಳಾಂತರ ಬೇಡ:

ಒಮ್ಮೆ ಹೊಸ ಕಾರ್ಖಾನೆಯನ್ನು ಈಗಿರುವ ಸ್ಥಳದಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಿದರೆ ಹಳೇ ಕಾರ್ಖಾನೆ ಇರುವ ಪ್ರದೇಶವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಬೇಕು ಎನ್ನುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಶಾಸಕ ಪಿ. ರವಿಕುಮಾರ್ ಅವರೊಬ್ಬರು ಮಾತ್ರ ಸಾತನೂರು ಫಾರಂನ ೭೫ ಎಕರೆ ಪ್ರದೇಶದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಬೇಕು, ಹಳೇ ಕಾರ್ಖಾನೆ ಇರುವ ಸ್ಥಳವನ್ನು ಸಾಫ್ಟ್‌ವೇರ್ ಪಾರ್ಕ್ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.

ಈ ಬೇಡಿಕೆಯನ್ನು ಈಗಾಗಲೇ ತಿರಸ್ಕರಿಸುತ್ತಿರುವ ರೈತ ಮುಖಂಡರು, ಮೈಷುಗರ್ ಕಾರ್ಖಾನೆ ಇರುವ ಜಾಗದಲ್ಲೇ ಹೊಸ ಕಾರ್ಖಾನೆ ನಿರ್ಮಾಣವಾಗಬೇಕು. ಯಾವ ಕಾರಣಕ್ಕೂ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬಾರದು. ಕಾರ್ಖಾನೆ ಭಾಗಶಃ ಸುಸ್ಥಿತಿಯಲ್ಲಿದ್ದು, ಮತ್ತೊಂದು ಮಿಲ್‌ನ್ನು ದುರಸ್ತಿಗೊಳಿಸಿ ಸುಸ್ಥಿತಿಗೆ ತಂದರೆ ಕಬ್ಬು ಅರೆಯುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಎಥೆನಾಲ್ ಘಟಕ, ಡಿಸ್ಟಿಲರಿ ಘಟಕಗಳನ್ನು ಆರಂಭಿಸುವುದಕ್ಕೂ ಸ್ಥಳಾವಕಾಶದ ಕೊರತೆ ಏನಿಲ್ಲ. ಹೊಸ ಕಾರ್ಖಾನೆ ವಿಚಾರವನ್ನು ಪ್ರಸ್ತಾಪಿಸುತ್ತಿರುವ ಉದ್ದೇಶದ ಬಗ್ಗೆ ರೈತ ಪ್ರತಿನಿಧಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಾಂತರದ ಹಿಂದೆ ರಾಜಕೀಯ ಒಳಸಂಚು?

ಕಳೆದ ವರ್ಷ ಮೈಷುಗರ್ ಕಾರ್ಖಾನೆ ಸುಮಾರು 1 90  ಲಕ್ಷ ಟನ್ ಕಬ್ಬು ಅರೆದಿದೆ. ಎರಡನೇ ಮಿಲ್ ಕಾರ್ಯಾಚರಣೆ ಆರಂಭಿಸಿದರೆ ನಿರೀಕ್ಷೆಯಂತೆ ನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಲಿದೆ. ಅದಕ್ಕಾಗಿ ಹೊಸ ಕಾರ್ಖಾನೆ ಸ್ಥಾಪನೆಯ ಉದ್ದೇಶವಾದರೂ ಏನೆಂಬುದು ಹಲವರ ಪ್ರಶ್ನೆಯಾಗಿದೆ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ತಿಳಿಸಿರುವಂತೆ ಮೈಷುಗರ್ ಆಸ್ತಿಯನ್ನು ಅಡಮಾನ ಮಾಡಿ ಹೊಸ ಕಾರ್ಖಾನೆಯನ್ನು ಸ್ಥಾಪಿಸುವುದಾಗಿ ಸ್ಪಷ್ಟಪಡಿಸಿದೆ. ಇದಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದು, ಹಾಲಿ ಇರುವ ಸಕ್ಕರೆ ಕಾರ್ಖಾನೆಯನ್ನು ನವೀಕರಣಗೊಳಿಸಿದರೆ ಸಾಕು. ಯಾವ ಆಸ್ತಿಯನ್ನು ಮಾರಾಟ ಮಾಡುವ ಅವಶ್ಯಕತೆ ಎದುರಾಗುವುದಿಲ್ಲ. ಮೈಷುಗರ್ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವುದರ ಹಿಂದೆ ರಾಜಕೀಯ ಒಳಸಂಚಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿದೆ.

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತಂತೆ ಚರ್ಚೆ ನಡೆಸಲು ಎಲ್ಲಾ ಪಕ್ಷಗಳ ರೈತ ಪ್ರತಿನಿಧಿಗಳು, ರೈತ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದೇನೆ. ಗುರುವಾರ ಬೆಳಗ್ಗೆ ೯ ಗಂಟೆಗೆ ಮೈಷುಗರ್ ಅತಿಥಿಗೃಹದಲ್ಲಿ ಸಭೆ ಕರೆದಿದ್ದೇನೆ. ಹೊಸ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪನೆ ಮಾಡಬೇಕೆನ್ನುವುದು ಅಂತಿಮವಾಗಿಲ್ಲ. ತಾಂತ್ರಿಕ ಸಮಿತಿ ವರದಿ ಪಡೆದುಕೊಂಡು ನಿರ್ಧರಿಸಲಾಗುತ್ತದೆ.

- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಮೈಷುಗರ್ ಕಾರ್ಖಾನೆ

------------

ಪದೇ ಪದೇ ಹೊಸ ಸಕ್ಕರೆ ಕಾರ್ಖಾನೆ ವಿಚಾರವನ್ನು ಪ್ರಸ್ತಾಪಿಸುತ್ತಿರುವುದೇಕೆ ಎನ್ನುವುದು ನಮಗೆ ತಿಳಿಯುತ್ತಿಲ್ಲ. ಕಾರ್ಖಾನೆ ಆರಂಭದ ಬಗ್ಗೆ ಚರ್ಚಿಸಬೇಕಿರುವ ಸನ್ನಿವೇಶದಲ್ಲಿ ಹೊಸ ಕಾರ್ಖಾನೆ ವಿಷಯವನ್ನು ಮುಂದಕ್ಕೆ ತರುತ್ತಿರುವುದೇಕೆ. ಹೊಸ ಕಾರ್ಖಾನೆಯಾದರೂ ಈಗಿರುವ ಸ್ಥಳದಲ್ಲೇ ಆಗಬೇಕು. ಬೇರೆ ಕಡೆ ಸ್ಥಾಪನೆಗೆ ನಾವು ಅವಕಾಶ ನೀಡುವುದಿಲ್ಲ.

- ಸುನಂದಾ ಜಯರಾಂ, ರೈತ ನಾಯಕಿ.

ಜು.25 ರ ನಂತರ ಕಾರ್ಖಾನೆ ಆರಂಭ

 ಮಂಡ್ಯ :  ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವಿಕೆ ಕಾರ್ಯವನ್ನು ಜು.25 ರ ನಂತರ ಆರಂಭಿಸಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.

ಜೂ.30ರಂದು ಕಾರ್ಖಾನೆ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗಿದೆ. ಕಬ್ಬು ಅರೆಯುವಿಕೆಗೆ ಕಾರ್ಖಾನೆಯೊಳಗೆ ಪ್ರಾಯೋಗಿಕ ಸಿದ್ಧತೆ ನಡೆಸಲಾಗುತ್ತಿದೆ. ಇಂದಿನಿಂದ ನಾಲೆಗಳಿಗೆ ನೀರನ್ನು ಹರಿಸಲಾಗುತ್ತಿರುವುದರಿಂದ ಜು.೨೫ರ ಬಳಿಕ ಕಾರ್ಖಾನೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಈ ಸಾಲಿನಲ್ಲಿ ಕಬ್ಬಿಗೆ ತೀವ್ರ ಕೊರತೆ ಎದುರಾಗಿರುವುದರಿಂದ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಎದುರಾಗುವುದನ್ನು ತಡೆಯಲು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳನ್ನು ಜು.೩೧ರಿಂದ ಆರಂಭಿಸುವಂತೆ ಕಬ್ಬು ಅಭಿವೃದ್ಧಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಆದೇಶಾನುಸಾರ ಮೈಷುಗರ್ ಕೂಡ ಕಬ್ಬು ಅರೆಯುವಿಕೆ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಜು.೬ರಿಂದಲೇ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಗೊಂಡಿದ್ದನ್ನು ಸ್ಮರಿಸಬಹುದು.

Latest Videos
Follow Us:
Download App:
  • android
  • ios