ಮಂಡ್ಯ (ಜ.25): ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬ ನೀಡಿದ ದೂರನ್ನು ಆಧರಿಸಿ ನಾಡೋಜ ಹಂ.ಪ.ನಾಗರಾಜಯ್ಯ ಅವರನ್ನು ಪೊಲೀಸ್‌ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಕ್ಷಮೆಯಾಚಿಸಿದ್ದಾರೆ.

ಹಂ.ಪ.ನಾಗರಾಜಯ್ಯ ಅವರಿಗೆ ಪತ್ರ ಬರೆದಿರುವ ಎಸ್‌ಪಿ ಅವರು, ತಮ್ಮ ವಿರುದ್ಧ ದಾಖಲಾದ ದೂರು ಅರ್ಜಿಯ ವಿವರ ಮತ್ತು ತಮ್ಮನ್ನು ಠಾಣೆಗೆ ಕರೆಸುವ ವಿಚಾರವನ್ನು ಇಲಾಖೆಯ ಕೆಳಹಂತದ ಅಧಿಕಾರಿಗಳು ನನಗಾಗಲೀ ಅಥವಾ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಹಿರಿಯ ವಿದ್ವಾಂಸರು ಹಾಗೂ ಹಿರಿಯ ನಾಗರಿಕರಾದ ತಮ್ಮನ್ನು ಕೆಳಹಂತದ ಅಧಿಕಾರಿಗಳು ಠಾಣೆಗೆ ಬರುವಂತೆ ಮಾಡಿ ತಮಗೆ ಮಾನಸಿಕವಾಗಿ ಘಾಸಿಯಾಗುವಂತೆ ಮಾಡಿರುವುದಕ್ಕೆ ವೈಯಕ್ತಿಕವಾಗಿ ಮತ್ತು ಇಲಾಖೆ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಇವರ ಸಾಧನೆಗೆ ನಮ್ಮದೊಂದು ಸಲಾಂ, ಇವರೇ Big 3 ಹೀರೋಗಳು! ...

ತಮ್ಮನ್ನು ವಿಚಾರಣೆಗೊಳಪಡಿಸಿದ ಪೊಲೀಸ್‌ ಅಧಿಕಾರಿ ವಿರುದ್ಧ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮಂಡ್ಯ ಉಪವಿಭಾಗದ ಡಿವೈಎಸ್ಪಿ ಅವರಿಗೆ ಸೂಚಿಸಲಾಗಿದೆ. ವಿಚಾರಣಾ ವರದಿಯನ್ನಾಧರಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.