ಶ್ರೀರಂಗಪಟ್ಟಣ [ಆ.13]:  ಕೆಆರ್‌ಎಸ್‌ ಜಲಾಶಯದ ಮೇಲ್ಬಾಗದ ಕಣಿವೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿ ಜಲಾಶಯಕ್ಕೆ ಯತ್ತೇಚ್ಛವಾಗಿ ನೀರು ಹರಿದು ಬಂದ ಪರಿಣಾಮ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯಾವುದೇ ಕ್ಷಣದಲ್ಲಾದರೂ ಭರ್ತಿಯಾಗಲಿದೆ.

ಕಾವೇರಿ ನದಿಯ ಪ್ರವಾಹ ಇಳಿಮುಖವಾಗುತ್ತಿದೆ. ಸೋಮವಾರ 121.80 ಅಡಿ ನೀರಿತ್ತು. 1,22,983ಒಳಹರಿವು ಇತ್ತು. ನದಿಗೆ ಕೇವಲ 49,342 ಕ್ಯುಸೆಕ್‌ ಹೊರ ಬಿಡಲಾಗುತ್ತಿದೆ. ಕಳೆದ ಒಂದು ವಾರದ ಹಿಂದೆ 83 ಅಡಿ ಇದ್ದ ನೀರಿನ ಸಂಗ್ರಹ, ಈಗ 122 ಅಡಿಗೆ ತಲುಪಿದೆ. ಗರಿಷ್ಠ 124.80 ಅಡಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಲ್ಲಿ ಕಳೆದ ವಾರ ಕೇವಲ 83 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ಒಂದು ವಾರದಿಂದ ಕಾವೇರಿ ಕಣಿವೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಣೆಕಟ್ಟೆಗೆ 2 ಲಕ್ಷ 8 ಸಾವಿರ ಕ್ಯುಸೆಕ್‌ ಗೂ ಅಧಿಕ ನೀರು ಹರಿದು ಬಂದಿತು. ಒಂದು ವಾರದಲ್ಲೇ ಅಣೆಕಟ್ಟೆಭರ್ತಿಯಾಗುವ ಹಂತ ತಲುಪಿ ದಾಖಲೆ ನಿರ್ಮಿಸಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ 1.5 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ಒಳಹರಿವು ಇತ್ತು. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಮೂರ್ನಾಲ್ಕು ದಿನಗಳಿಂದಲೂ 1.8 ಲಕ್ಷ ಕ್ಯುಸೆಕ್‌ ಗೂ ಅಧಿಕ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಮುಳುಗಡೆ ಭೀತಿ ಎದುರಾಗಿದೆ.

ಪ್ರವಾಹ ಪರಿಸ್ಥಿತಿ ಮುಂದುವರಿಕೆ:

ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಸ್ನಾನ ಘಟ್ಟಬಳಿಯ ಕಾವೇರಿ ನದಿ ತಟದಲ್ಲಿದ್ದ ದೇವಸ್ಥಾನಗಳು, ಪಶ್ಚಿಮವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಲಾವೃತವಾಗಿವೆ. ಚೆಕ್‌ ಪೋಸ್ಟ್‌ ಬಳಿಯ ಸಾಯಿ ಮಂದಿರಕ್ಕೆ ನೀರು ನುಗ್ಗಿದೆ. ನಿಮಿಷಾಂಬ ದೇವಾಲಯದ ಮುಖ್ಯದ್ವಾರದ ಬಳಿ ವರೆಗೆ ನೀರೂ ನುಗ್ಗಿದೆ.

ಮೈಸೂರಿನ ಬಿಜೆಪಿ ಶಾಸಕರಾದ ರಾಮದಾಸ್‌ ಹಾಗೂ ನಾಗೇಂದ್ರ ಅವರುಗಳು ಶ್ರೀರಂಗಪಟ್ಟಣದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಜನರಿಗೆ ಧೈರ್ಯ ಹೇಳಿದರು. ಶ್ರೀರಂಗಪಟ್ಟಣದ ಹೊರ ವಲಯದಲ್ಲಿರುವ ಚಂದ್ರವನ ಆಶ್ರಮಕ್ಕೂ ನೀರು ನುಗ್ಗಿದೆ. ತ್ರೀನೇತ್ರ ಶಿವಯೋಗಿಗಳ ಆಶ್ರಮ ಹಾಗೂ ಮಠ, ಅತಿಥಿಗೃಹದ ತನಕ ನೀರು ಬಂದಿದೆ. ಯಾವುದೇ ಅಪಾಯವಿಲ್ಲ ಎಂದು ಆಶ್ರಮದ ಶ್ರೀಗಳು ತಿಳಿಸಿದ್ದಾರೆ.

ಕೆ.ಆರ್‌.ಪೇಟೆಯಲ್ಲಿ ಪ್ರವಾಹ ಇಳಿಮುಖ:

ಜಿಲ್ಲೆಯ ಕೆ ಆರ್‌ ಪೇಟೆಯಲ್ಲಿ ಹೇಮಾವತಿ ನದಿ ಪ್ರವಾಹ ಇಳಿಮುಖವಾಗಿದೆ. ಹೇಮಾವತಿ ಅಣೆಕಟ್ಟೆಯಿಂದ ನದಿಗೆ ಬಿಡುತ್ತಿದ್ದ ನೀರಿನಲ್ಲಿ ಶೇ 80 ರಷ್ಟುನೀರನ್ನು ನಿಲ್ಲಿಸಲಾಗಿದೆ. ಇದರಿಂದ ಕೆ ಆರ್‌ ಪೇಟೆ ತಾಲೂಕಿನಲ್ಲಿ ಜಲಾವೃತಗೊಂಡಿದ್ದ 20ಗ್ರಾಳಗಳಲ್ಲಿ ಪ್ರವಾಹ ಸಂಪೂರ್ಣವಾಗಿ ನಿಂತಿದೆ. ಬೆಳೆ ನಷ್ಟವಾಗಿದೆ. ಕೆಲವು ಮನೆಗಳು ನೀರಿನಿಂದ ಕುಸಿದಿವೆ. ಪ್ರಾಣಾಪಾಯವಾಗಿಲ್ಲ. ನಷ್ಟದ ಅಂದಾಜನ್ನು ಅಧಿಕಾರಿಗಳು ಸಿದ್ಧ ಮಾಡುತ್ತಿದ್ದಾರೆ. ಈ ಮಧ್ಯ ಅನರ್ಹ ಶಾಸಕ ನಾರಾಯಣಗೌಡರು ಸೋಮವಾರ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನರಿಗೆ ಸಾಂತ್ವಾನ ಹೇಳಿ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು. ಹೇಮಾವತಿ ನಾಲೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಾಲೆಗಳಿಗೆ ನೀರು ಬಿಡುವಂತೆ ಸೂಚನೆ ನೀಡಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರವೇಶ ನಿಷೇಧ:

ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆಯ ಭೀತಿಯಲ್ಲಿದೆ. ಬೋಟಿಂಗ್‌ ಟಿಕೆಟ್‌ ವಿತರಣೆ ಮಾಡುವ ಕಚೇರಿಗೆ ಸಂಪೂರ್ಣವಾಗಿ ಪ್ರವಾಹದ ನೀರಿನಿಂದ ಮುಚ್ಚಿಹೋಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ರಂಗನತಿಟ್ಟು ಪಕ್ಷಿಧಾಮ ವೀಕ್ಷಣೆಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲೆ ಯಾವುದೇ ವಾಹನ ಸಂಚರಿಸಿದಂತೆ ನಿರ್ಬಂಧ ಹೇರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಗತ್ಯ ಕ್ರಮ ವಹಿಸಿದೆ.