ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಸಿಗದೆ ತೀವ್ರ ಅಸಮಾಧಾನಗೊಂಡಿದ್ದ ಕೆ.ಕೆ.ರಾಧಾಕೃಷ್ಣ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಮಂಡ್ಯ (ಜ. 09 ) : ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಸಿಗದೆ ತೀವ್ರ ಅಸಮಾಧಾನಗೊಂಡಿದ್ದ ಕೆ.ಕೆ.ರಾಧಾಕೃಷ್ಣ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಹಲವಾರು ತಿಂಗಳುಗಳಿಂದ ಕಾಂಗ್ರೆಸ್‌ ಪಕ್ಷದ ನಾಯಕರೊಂದಿಗೆ ಒಡನಾಟವಿಟ್ಟುಕೊಂಡಿದ್ದ ಕೆ.ಕೆ.ರಾಧಾಕೃಷ್ಣ ಪಕ್ಷ ಸೇರುವ ಮುನ್ನವೇ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸುವುದರೊಂದಿಗೆ ಅಚ್ಚರಿ ಮೂಡಿಸಿದ್ದರು.

ಜೆಡಿಎಸ್‌ ಪಕ್ಷ ಮತ್ತು ನಾಯಕರಿಂದ ನಾಲ್ಕೈದು ತಿಂಗಳಿಂದ ಅಂತರ ಕಾಯ್ದುಕೊಂಡಿದ್ದ ಕೆ.ಕೆ.ರಾಧಾಕೃಷ್ಣ ಕಾಂಗ್ರೆಸ್‌ ಮುಖಂಡರೊಂದಿಗೆ ಒಡನಾಟವಿಟ್ಟುಕೊಂಡಿದ್ದರೂ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಕ್ಷೇತ್ರದ ಅನೇಕ ಮುಖಂಡರೊಂದಿಗೆ ಕೈಪಾಳಯವನ್ನು ಸೇರಿಕೊಳ್ಳಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಿಂದಲೂ ಕೆ.ಕೆ.ರಾಧಾಕೃಷ್ಣ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಜೆಡಿಎಸ್‌ ಟಿಕೆಟ್‌ ಕೈತಪ್ಪುವ ಸಾಧ್ಯತೆ ದಟ್ಟವಾದ ಹಿನ್ನೆಲೆಯಲ್ಲಿ ಪರ್ಯಾಯ ಆಲೋಚನೆಗೆ ಮುಂದರು. ಕಾಂಗ್ರೆಸ್‌ ಸೇರಿ ಕ್ಷೇತ್ರದಿಂದ ಕಣಕ್ಕಿಳಿಯುವ ಆಕಾಂಕ್ಷೆಯನ್ನು ಹೊಂದಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಕಾಂಗ್ರೆಸ್‌ ಬಿ-ಫಾರಂಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಈಗಾಗಲೇ ವಿವಿಧ ಪಕ್ಷದ ಟಿಕೆಟ್‌ ಆಕಾಂಕ್ಷಿತರು ಚುನಾವಣೆಗಾಗಿ ವಿವಿಧ ಕಾರ್ಯತಂತ್ರಗಳನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಕೀಲಾರ ರಾಧಾಕೃಷ್ಣ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೋವಿಡ್‌ ಸಂಕಷ್ಟಪರಿಸ್ಥಿತಿಯಲ್ಲಿ ಬಡಜನರಿಗೆ ಆಹಾರ ಕಿಟ್‌ ಮತ್ತು ಕೊರೋನಾ ಸುರಕ್ಷಾ ಸಾಮಗ್ರಿಗಳನ್ನು ವಿತರಿಸಿ ಜನಮೆಚ್ಚುಗೆ ಗಳಿಸಿದ್ದರು. ನಂತರದಲ್ಲಿ ಕೀಲಾರ ಗ್ರಾಮದೇವತೆ ಶ್ರೀ ಕಂಚಿನ ಮಾರಮ್ಮ ದೇವಿ ಹಬ್ಬದ ಹೆಸರಿನಲ್ಲಿ ಸಾವಿರಾರು ಜನರಿಗೆ ಬಾಡೂಟ ಆಯೋಜಿಸಿ, ಅವರ ಕುಂದುಕೊರತೆಗಳಿಗೆ ಸ್ಪಂದಿಸುವ ಮೂಲಕ ಜನರ ವಿಶ್ವಾಸ ಸಂಪಾದಿಸುವ ಪ್ರಯತ್ನ ನಡೆಸಿದ್ದರು.

ಕಳೆದ 2018ರ ಚುನಾವಣಾ ಸಮಯದಲ್ಲೇ ಕೆ.ಕೆ.ರಾಧಾಕೃಷ್ಣ ಅವರಿಗೆ ಜೆಡಿಎಸ್‌ ಟಿಕೆಟ್‌ ಸಿಗುವ ಸಾಧ್ಯತೆಗಳಿತ್ತು. ಆದರೆ, ವರಿಷ್ಠರ ನಿರ್ಧಾರಕ್ಕೆ ಕಟ್ಟುಬಿದ್ದು ಅಖಾಡದಿಂದ ಹಿಂದೆ ಸರಿದಿದ್ದರು. ಪಕ್ಷದ ಹಿರಿಯರಾದ ಎಂ.ಶ್ರೀನಿವಾಸ್‌ ಪರ ಚುನಾವಣಾ ಪ್ರಚಾರ ನಡೆಸುವುದರೊಂದಿಗೆ ಗೆಲುವಿಗೆ ಶ್ರಮಿಸಿದ್ದರು.

ಈ ಬಾರಿ ಜೆಡಿಎಸ್‌ ಟಿಕೆಟ್‌ ಸಿಗಬಹುದೆಂದ ಆಶಾಭಾವನೆಯೊಂದಿಗೆ ಚುನಾವಣೆಗೆ ಒಂದು ವರ್ಷವಿರುವಾಗಲೇ ಪಕ್ಷ ಸಂಘಟನೆ, ಚುನಾವಣಾ ಪೂರ್ವ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದರು. ಆದರೆ, ದಿನ ಕಳೆದಂತೆ ಜೆಡಿಎಸ್‌ನೊಳಗೆ ಹೊಸಮುಖಗಳು ಚುನಾವಣಾ ಪೂರ್ವ ತಯಾರಿ ಆರಂಭಿಸಿದರು. ಈ ವಿಷಯ ಪಕ್ಷದ ನಾಯಕರಿಗೆ ತಿಳಿದಿದ್ದರೂ ಮೌನ ವಹಿಸಿದ್ದರು. ಟಿಕೆಟ್‌ ನೀಡುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳದಿದ್ದರಿಂದ ಸಹಜವಾಗಿಯೇ ಬೇಸರಗೊಂಡಿದ್ದರು.

ಆನಂತರದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾದ ಎನ್‌.ಚಲುವರಾಯಸ್ವಾಮಿ ಜೊತೆ ಸಂಪರ್ಕ ಬೆಳೆದು ಮಾತುಕತೆ ನಡೆಸಿದರು. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವುದಕ್ಕೆ ನಿರ್ಧರಿಸಿದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಕೆ.ಕೆ. ರಾಧಾಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಕೈ ನಾಯಕರು ಗ್ರೀನ್‌ ಸಿಗ್ನಲ್‌ ತೋರಿಸಿದ್ದಾರೆ. ಹೀಗಾಗಿ ತಮ್ಮ ಅನೇಕ ಮಂದಿ ಬೆಂಬಲಿಗರೊಂದಿಗೆ ಕೆ.ಕೆ. ರಾಧಾಕೃಷ್ಣ ಅವರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ.

ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ, ಮುಖಂಡನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆನು. ಕಳೆದ ಬಾರಿ ಚುನಾವಣೆಯಲ್ಲಿ ಪಕ್ಷದ ನಾಯಕರ ಮಾತಿಗೆ ಮಣಿದು ಎಂ. ಶ್ರೀನಿವಾಸ್‌ ಗೆಲುವಿಗೆ ಶ್ರಮಿಸಿದೆ. ಈ ಬಾರಿ ಮಂಡ್ಯ ಕ್ಷೇತ್ರದ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದೆ. ಅದನ್ನೂ ಹುಸಿಗೊಳಿಸಿದರು. ಇನ್ನು ಆ ಪಕ್ಷದಲ್ಲಿದ್ದು ಪ್ರಯೋಜನವಿಲ್ಲವೆಂದು ಭಾವಿಸಿ ಕಾಂಗ್ರೆಸ್‌ ಸೇರಲು ನಿರ್ಧರಿಸಿದೆ. ಕ್ಷೇತ್ರದ ಟಿಕೆಟ್‌ ಬಯಸಿ ಕಾಂಗ್ರೆಸ್‌ನಿಂದಲೂ ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್‌ ಸಿಗುವ ವಿಶ್ವಾಸವಿದೆ.

- ಕೆ.ಕೆ.ರಾಧಾಕೃಷ್ಣ, ಮುಖಂಡರು, ಮಂಡ್ಯ ವಿಧಾನಸಭಾ ಕ್ಷೇತ್ರ