ರಾಜ್ಯದಲ್ಲಿ ಈಗಾಗಲೇ ಕೊರೋನಾ ವೈರಸ್ ಲಸಿಕೆ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆನ್ನಲ್ಲೇ ಮಂಡ್ಯ ಜಿಲ್ಲಾಧಿಕಾರಿ ಇಂಜೆಕ್ಷನ್ ನೀಡಿ ಚಾಲನೆ ನೀಡಿದರು.
ಮಂಡ್ಯ (ಜ.17): ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಹೆಮ್ಮಾರಿಗೆ ಲಸಿಕೆ ದೊರಕಿರುವುದು ಸಂತಸ ತಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಶನಿವಾರ ಮಿಮ್ಸ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಂಕು ಇಡೀ ಪ್ರಪಂಚದಾದ್ಯಂತ ಭಯದ ವಾತಾವರಣ ಸೃಷ್ಟಿಸಿತ್ತು. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮರಣಮೃದಂಗ ನಡೆಸಿತು. ಇದೀಗ ಆ ಸೋಂಕಿಗೆ ಲಸಿಕೆ ಸಿಕ್ಕಿರುವುದು ವಿಶ್ವದ ಜನರಲ್ಲಿ ನೆಮ್ಮದಿಯನ್ನು ಮೂಡಿಸಿದೆ ಎಂದರು.
ಪ್ರಧಾನಿ ಮೋದಿ ಅವರು ಲಸಿಕೆಗೆ ದೇಶಾದ್ಯಂತ ಚಾಲನೆ ನೀಡಿದ್ದು, ಮೊದಲ ದಿನವಾದ ಶನಿವಾರ ಜಿಲ್ಲೆಯ 8 ಕೇಂದ್ರಗಳಲ್ಲೂ ತಲಾ 100 ಮಂದಿಯಂತೆ ಒಟ್ಟು 800 ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತವಾಗಿ ಆರೋಗ್ಯ ಇಲಾಖೆ, ಪೌರ ಕಾರ್ಮಿಕರಿಗೆ ಲಸಿಕೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕೊರೋನಾ ಮುಂಚೂಣಿ ಕಾರ‍್ಯಕರ್ತರಾದ ಕಂದಾಯ, ಪೊಲೀಸ್, ಸ್ಥಳೀಯ ಸಂಸ್ಥೆಗಳ ನೌಕರರು ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಬಳಿಕ ಸರ್ಕಾರದ ಮಾರ್ಗಸೂಚಿಯನ್ವಯ ಲಸಿಕಾ ಕಾರ‍್ಯಕ್ರಮ ಮುಂದುವರಿಸಲಾಗುವುದು ಎಂದು ನುಡಿದರು.
ಬೆಂಗ್ಳೂರಿನ 8 ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ...
ಲಸಿಕೆ ಪಡೆದ ಪ್ರತಿ ವ್ಯಕ್ತಿಯನ್ನು 20 ನಿಮಿಷಗಳ ಕಾಲ ನಿಗಾ ವಹಿಸಲಾಗುವುದು. ಅವರಿಗೆ ಯಾವುದೇ ಅಡ್ಡಪರಿಣಾಮ ಬೀರದಿದ್ದರೆ 30 ನಿಮಿಷದ ಬಳಿಕ ಬಿಡುಗಡೆ ಮಾಡಲಾಗುವುದು. 8 ಕೇಂದ್ರಗಳಲ್ಲೂ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದರು.
ಕೋವಿಶೀಲ್ಡ್ ಲಸಿಕೆ ಪಡೆಯಲು ಯಾರೂ ಸಹ ಭಯ, ಗಾಬರಿಪಡುವುದು ಬೇಡ. ಸೋಂಕಿನಿಂದ ಮುಕ್ತಿ ದೊರಕಿಸಲು ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಧೈರ್ಯದಿಂದ ಬಂದು ಲಸಿಕೆ ಪಡೆದು ಆರೋಗ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.
ಲಸಿಕೆಯಿಂದ ಏನಾದರೂ ಅಡ್ಡಪರಿಣಾಮ ಬೀರಿದರೆ ನಿಗಾ ವಹಿಸಲು ಅನುಭವಿ ಸಿಬ್ಬಂದಿಯನ್ನು ನಿಯೋಜಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
