ಗೆದ್ದ ಪುರಪಿತೃಗಳಿಗೆ ಒಂದು ವರ್ಷವಾದರೂ ಕೂಡ ಅಧಿಕಾರವಿಲ್ಲ. ಗೆದ್ದರೂ ಅಧಿಕಾರದಿಂದ ವಂಚಿತರಾಗಿ ಕುಳಿತುಕೊಂಡಿದ್ದಾರೆ. ಇದಕ್ಕೆ ಕಾರಣ ಸ್ಥಾನ ಮೀಸಲು ವಿವಾದ

ಕೆ.ಎನ್‌.ರವಿ

ಮಂಡ್ಯ [ಸೆ.17]: ಈಗಾಗಲೇ ಎರಡು ಪಿತೃಪಕ್ಷಗಳು ಬಂದರೂ ನಗರಸಭೆ, ಪುರಸಭೆಯ ಪುರಪಿತೃಗಳು ಮಾತ್ರ ಅಧಿಕಾರ ಭಾಗ್ಯದಿಂದ ವಂಚಿತರಾಗಿದ್ದಾರೆ. ಮಂಡ್ಯ ಸೇರಿದಂತೆ ರಾಜ್ಯದ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳ ನೂತನ ಸದಸ್ಯರು ಗೆದ್ದು ವರ್ಷಗಳೇ ಗತಿಸಿವೆ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಸ್ಥಾನ ಮೀಸಲು ಗೊಂದಲದಿಂದಾಗಿ ಸರ್ಕಾರ ಹೊರಡಿಸಿರುವ ಪಟ್ಟಿ ಪ್ರಶ್ನಿಸಿ ಅವಕಾಶ ವಂಚಿತರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಕಾರಣಕ್ಕಾಗಿ ಕಳೆದ ವರ್ಷ ಹಾಗೂ ಈ ವರ್ಷ ಪಿತೃಪಕ್ಷ ಬಂದರೂ ಇನ್ನೂ ಅಧಿಕಾರದ ಭಾಗ್ಯ ಮಾತ್ರ ದಕ್ಕಿಲ್ಲ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿರುವ ಪುರಪಿತೃಗಳು ನಾಮಕಾವಸ್ತೆಯಾಗಿದ್ದಾರೆ. ಅವರುಗಳಿಗೆ ಯಾವುದೇ ಅಧಿಕಾರವಿಲ್ಲ. ನಗರಸಭೆಯಲ್ಲಿ ಅಧಿಕಾರಿಗಳು, ನೌಕರರು ಮಾತು ಕೇಳುವುದು ಒತ್ತಟ್ಟಿಗೆ ಇರಲಿ ಕನಿಷ್ಠ ಸೌಜನ್ಯ, ಗೌರವವನ್ನೂ ಈ ನೂತನ ಪುರಪಿತೃಗಳಿಗೆ ಕೊಡುತ್ತಿಲ್ಲ ಎಂಬ ಕೊರಗಿನ ನಡುವೆಯೇ ತಮ್ಮ ಅಧಿಕಾರ ಚಲಾಯಿಸುವ ಪುರಪಿತೃಗಳ ಕನಸು ಭಗ್ನವಾಗಿದೆ.

ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾಗುವ ತನಕ ಸಾಮಾನ್ಯ ಸಭೆಯೂ ಇಲ್ಲ, ಸಮಸ್ಯೆಗಳಿಗೆ ಪರಿಹಾರವೂ ಇಲ್ಲ. ಜಿಲ್ಲಾಧಿಕಾರಿಗಳು ನಗರಸಭೆಯ ಆಡಳಿತಾಧಿಕಾರಿ, ಕಮೀನಷರ್‌ ಸದ್ಯಕ್ಕೆ ನಗರಸಭೆಯ ಅಧಿಪತಿ ಎಂಬಂತಾಗಿದೆ.

ಅಧಿಕಾರಾವಧಿ ಆರಂಭವಾಗಿದೆಯೇ?

ಒಂದು ವರ್ಷ ಹಿಂದೆ ಆಯ್ಕೆಯಾಗಿರುವ ನಗರಸಭಾ ಸದಸ್ಯರ ಅಧಿಕಾರ ಅವಧಿ ಇನ್ನೂ ಆರಂಭವಾಗಿಲ್ಲ. ನಿಯಮಗಳ ಅನುಸಾರ ಸ್ಥಳೀಯ ಸಂಸ್ಥೆಯ ಮೊದಲ ಸಾಮಾನ್ಯ ಸಭೆ ನಡೆದ ದಿನದಿಂದಲೇ ನೂತನ ಸದಸ್ಯರ ಅಧಿಕಾರಾವಧಿ ಆರಂಭವಾಗುತ್ತದೆ. ಮೊದಲ ಸಾಮಾನ್ಯ ಸಭೆಯಲ್ಲೇ ಎಲ್ಲಾ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಂದಿನಿಂದ 5 ವರ್ಷಗಳ ಕಾಲ ಅವರ ಅಧಿಕಾರಾವಧಿ. ಆದರೆ, ಚುನಾವಣೆಯಲ್ಲಿ ಗೆದ್ದು ವರ್ಷವಾದರೂ ಪುರಪಿತೃಗಳ ಪದಗ್ರಹಣಕ್ಕೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ.

ಕಳೆದ ಅಕ್ಟೋಬರ್‌ನಲ್ಲೇ ತಡೆಯಾಜ್ಞೆ:

2018ರ ಆ.31ರಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಸೆ.3ರಂದು ಫಲಿತಾಂಶ ಹೊರ ಬಂತು. ಅದೇ ದಿನ ನಗರ ಸ್ಥಳೀಯ ಸಂಸ್ಥೆಗಳ ವರಿಷ್ಠರ ಸ್ಥಾನಗಳಿಗೆ ಮೀಸಲು ಪಟ್ಟಿಪ್ರಕಟವಾಯಿತು. ಆದರೆ, ಸೆ.6ರಂದು ವರಿಷ್ಠರ ಸಂಸ್ಥೆಗಳ ಪರಿಷ್ಕೃತ ಮೀಸಲು ಪಟ್ಟಿಪ್ರಕಟವಾಯಿತು. ಇದರಿಂದ ಮೊದಲ ಪಟ್ಟಿಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಪಡೆಯಲು ಕಾತುರದಿಂದ ಕಾಯುತ್ತಿದ್ದವರು ನಿರಾಸೆಗೊಂಡರು. ಪರಿಷ್ಕೃತ ಪಟ್ಟಿಪ್ರಕಟಕ್ಕೆ ವಿರೋಧಿ ವ್ಯಕ್ತವಾಗಿತ್ತು.

ನಗರ ಸ್ಥಳೀಯ ಸಂಸ್ಥೆಗಳ ವರಿಷ್ಠರ ಪರಿಷ್ಕೃತ ಮೀಸಲು ಪಟ್ಟಿಪ್ರಕಟ ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ ಮೊರೆ ಹೋಗಿದ್ದರು. ಇದರಿಂದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಗೆ ಬ್ರೇಕ್‌ ಬಿತ್ತು. ಬಳಿಕ ತಡೆಯಾಜ್ಞೆ ತೆರವಾಗಿ, ಸೆ.3ರಂದು ಪ್ರಕಟವಾಗಿದ್ದ ಮೀಸಲು ಪಟ್ಟಿಯಂತೆಯೇ ಚುನಾವಣೆ ನಡೆಸುವಂತೆ ನ್ಯಾಯಾಲಯ ಅಕ್ಟೋಬರ್‌ ತಿಂಗಳಲ್ಲೇ ಆದೇಶ ನೀಡಿತ್ತು.

ಅದೇ ವೇಳೆಗೆ ಮಂಡ್ಯ ಲೋಕಸಭೆ ಸೇರಿದಂತೆ ರಾಜ್ಯದಲ್ಲಿ 3 ಲೋಕಸಭೆ, 2 ವಿಧಾನ ಸಭೆಗಳಿಗೆ ಉಪ ಚುನಾವಣೆ (2018ರ ನವೆಂಬರ್‌ 3ಕ್ಕೆ) ಚುನಾವಣೆ ನಿಗದಿಯಾಯಿತು. ಆಗಲೂ ಮೀಸಲು ಪಟ್ಟಿಪ್ರಕಾರ ಚುನಾವಣೆ ನಡೆಸುವುದಕ್ಕೆ ತಡೆಬಿದ್ದಿತು. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಗರ ಸ್ಥಳೀಯ ಸಂಸ್ಥೆಗಳ ವರಿಷ್ಠರ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿತ್ತು.

ಇದಾದ ಬಳಿಕ ಉಪ ಚುನಾವಣೆಗಳು ಮುಗಿದವು. ಧಾರವಾಡ ಹಾಗೂ ಇತರ ಸ್ಥಳಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪ್ರಶ್ನಿಸಿ ಪುನಃ ಹೈಕೋರ್ಟ್‌ಗೆ ಎರಡನೇ ಬಾರಿಗೆ ಮೊರೆ ಹೋಗಲಾಯಿತು. ಮತ್ತೆ ತಡೆಯಾಜ್ಞೆಯೂ ಸಿಕ್ಕಿತು.

ಲೋಕಸಭೆ ಚುನಾವಣೆ ಅಡ್ಡಿ:

ಮಹಾನಗರ ಪಾಲಿಕೆಗಳ ಹೊರತಾಗಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ತಡೆ ಬಿತ್ತು. ಬೆನ್ನಲ್ಲೇ ಮಾ.10ರಂದು ದಿಢೀರನೆ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಅಧಿಸೂಚನೆ ಹೊರಡಿಸಿದ್ದು ಮತ್ತೆ ಸಂಕಷ್ಟಕ್ಕೆ ಬಂತು. ಲೋಕಸಭೆ ಚುನಾವಣೆ ನೆಪದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವರಿಷ್ಠರ ಆಯ್ಕೆ ವಿಚಾರ ನೇಪಥ್ಯಕ್ಕೆ ಸರಿದಿತ್ತು. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು, 27ಕ್ಕೆ ಚುನಾವಣಾ ನೀತಿ ಸಂಹಿತೆ ಅಂತ್ಯಗೊಂಡಿದ್ದರೂ ಸಹ ನೂತನ ಪುರಪಿತೃಗಳ ಸ್ಥಿತಿ ಮಾತ್ರ ಅತಂತ್ರವಾಗಿದೆ.

ಆಡಳಿತಾಧಿಕಾರಿಗಳ ನೇಮಕ

ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳು ನೇಮಕವಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಆಗೊಮ್ಮೆ ಈಗೊಮ್ಮೆ ಸಾಮಾನ್ಯ ಸಭೆ ನಡೆಸಿ, ತುರ್ತು ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತಿದೆ. ಮಂಡ್ಯ ನಗರಸಭೆæಗೆ ಜಿಲ್ಲಾಧಿಕಾರಿ, ಪುರÓಭೆæಗಳಿಗೆ ಆಯಾಯ ವ್ಯಾಪ್ತಿಯ ಉಪ ವಿಭಾಗಾಧಿಕಾರಿ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಆಯಾಯ ವ್ಯಾಪ್ತಿಯ ತಹಸೀಲ್ದಾರರು ಆಡಳಿತಾಕಾರಿಗಳಾಗಿದ್ದಾರೆ.

ಅಭಿವೃದ್ಧಿಗೆ ತೊಂದರೆ ಇಲ್ಲ

ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗದೇ ಇರುವುದರಿಂದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲೇ ಎರಡು ಸಭೆಗಳು ನಡೆದಿವೆ. ಟೆಂಡರ್‌ ಹಂತದಲ್ಲಿದ್ದ ಕೆಲವು ಕಾಮಗಾರಿಗಳಿಗೆ ಅನುಮೋದನೆ ಪಡೆದು, ಕೆಲಸವನ್ನೂ ಆರಂಭಿಸಲಾಗಿದೆ. ಆದರೆ, ಹೊಸ ಕಾಮಗಾರಿಗಳಿಗೆ ಅನುಮೋದನೆ ಪಡೆಯುವುದು ಸಾಧ್ಯವಾಗಿಲ್ಲ ಎನ್ನುವುದು ನಗರಸಭೆ ಅಧಿಕಾರಿಗಳ ಅಂಬೋಣ.

ಆದರೆ, ನೂತನ ಪುರ ಪಿತೃಗಳ ಅನಿಸಿಕೆ ಬೇರೆಯಾಗಿದೆ. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ನಮ್ಮ ವಾರ್ಡ್‌ಗಳಲ್ಲಿ ಬೀದಿದೀಪ ದುರಸ್ತಿ, ಶುಚಿತ್ವದ ಕೆಲಸವನ್ನು ಮಾಡಿಸಲೂ ಕೂಡ ಗೋಗರೆಯುವ ಸ್ಥಿತಿ ಇದೆ ಎನ್ನುತ್ತಾರೆ ನೂತನ ಪುರಪಿತೃಗಳು.

ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯು ಮುಂದಿನ ತಿಂಗಳು ತೆರವು ಮಾಡುವ ಸಾಧ್ಯತೆ ಇದೆ. ಆದರೆ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಯಾಗದೇ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಯಾವುದೇ ರೀತಿಯ ಸಸ್ಯೆ ತಂದೊಡ್ಡಿಲ್ಲ. ನಗರೋತ್ಥಾನ, ಎಸ್‌ಎಫ್‌ ಸಿ ಹಾಗೂ 14ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳು ನಡೆಯುತ್ತಲೇ ಇವೆ.

ಎಸ್‌.ಲೋಕೇಶ್‌, ಪೌರಾಯುಕ್ತ, ನಗರಸಭೆ, ಮಂಡ್ಯ