Asianet Suvarna News Asianet Suvarna News

Mandya : ಹುಲಿವಾನದಲ್ಲಿ ಚಂದ್ರಶೇಖರ್‌ ಶಕ್ತಿ ಪ್ರದರ್ಶನ

ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿತರಲ್ಲಿ ಒಬ್ಬರಾಗಿರುವ ಅಮರಾವತಿ ಚಂದ್ರಶೇಖರ್‌ ತಾಲೂಕಿನ ಹುಲಿವಾನ ಗ್ರಾಮದಲ್ಲಿ ಕಾರ್ಯಕರ್ತರ ಬೃಹತ್‌ ಸಭೆ ನಡೆಸುವುದರೊಂದಿಗೆ ಶಕ್ತಿ ಪ್ರದರ್ಶಿಸಿದರು.

Mandya Chandrasekhar  shows power in Huliwana snr
Author
First Published Jan 23, 2023, 6:36 AM IST

 ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿತರಲ್ಲಿ ಒಬ್ಬರಾಗಿರುವ ಅಮರಾವತಿ ಚಂದ್ರಶೇಖರ್‌ ತಾಲೂಕಿನ ಹುಲಿವಾನ ಗ್ರಾಮದಲ್ಲಿ ಕಾರ್ಯಕರ್ತರ ಬೃಹತ್‌ ಸಭೆ ನಡೆಸುವುದರೊಂದಿಗೆ ಶಕ್ತಿ ಪ್ರದರ್ಶಿಸಿದರು.

ಭಾನುವಾರ ನಡೆದ ಸಭೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿರುವ 16 ಮಂದಿಯನ್ನೂ ಆಹ್ವಾನಿಸಲಾಗಿತ್ತು. ಅದರಲ್ಲಿ ಕೆಲವರು ಸಭೆಗೆ ಹಾಜರಾಗಿದ್ದರೆ, ಮತ್ತೆ ಕೆಲವರು ಗೈರುಹಾಜರಾಗಿದ್ದರು. ಇದರ ನಡುವೆಯೂ ಕಾಂಗ್ರೆಸ್‌ ಹೈಕಮಾಂಡ್‌ ಯಾರಿಗೇ ಟಿಕೆಟ್‌ ನೀಡಿದರೂ ಒಮ್ಮತದಿಂದ ಗೆಲುವಿಗೆ ಶ್ರಮಿಸುವುದಾಗಿ ಟಿಕೆಟ್‌ ಆಕಾಂಕ್ಷಿತರು ಒಗ್ಗಟ್ಟಿನ ಮಂತ್ರ ಪಠಿಸಿದರು.

ತಾಲೂಕಿನ ಹುಲಿವಾನ ಗ್ರಾಮದಲ್ಲಿ ಪ್ರಜಾಧ್ವನಿ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಕಾಂಕ್ಷಿತ ಅಭ್ಯರ್ಥಿ ಅಮರಾವತಿ ಚಂದ್ರಶೇಖರ್‌ ನೇತೃತ್ವದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಟಿಕೆಟ್‌ ಆಕಾಂಕ್ಷಿತರು ಮಾತನಾಡಿದರು. ಯಾರೊಬ್ಬರ ಮಾತಿನಲ್ಲೂ ಅಪಸ್ವರ ಕೇಳಿಬರಲಿಲ್ಲ. ಗೊಂದಲ, ಭಿನ್ನಮತವಿರುವುದನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ.

ಟಿಕೆಟ್‌ ಆಕಾಂಕ್ಷಿಗಳಾದ ಎಂ.ಎಸ್‌.ಆತ್ಮಾನಂದ, ಕೆ.ಕೆ.ರಾಧಾಕೃಷ್ಣ, ಅಮರಾವತಿ ಚಂದ್ರಶೇಖರ್‌ ಹಲವರು ಆಡಿದ ಮಾತುಗಳಲ್ಲಿ 16 ಜನರಲ್ಲಿ ಯಾರಿಗೇ ಟಿಕೆಟ್‌ ಕೊಟ್ಟರೂ ಎಲ್ಲರೂ ಒಗ್ಗಟಾಗಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ ಮಾತನಾಡಿ, ವಿಶ್ವದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಲು ಕಾಂಗ್ರೆಸ್‌ ಕಾರಣ. ಜನರಿಗೆ ಹೊರೆಯಾಗದ ರೀತಿ ಆಡಳಿತ ನಡೆಸಿದ ಸರ್ಕಾರ ಎಂದರೆ ಅದು ಕಾಂಗ್ರೆಸ್‌. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ನಮ್ಮ 16 ಜನರಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಪ್ರಾಮಾಣಿಕತೆಯಿಂದ ದುಡಿದು ಅವರನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಬಿಜೆಪಿ ಸರ್ಕಾರದಲ್ಲಿ ಒಂದಲ್ಲಾ ಒಂದು ಹಗರಣಗಳು ಪ್ರತಿನಿತ್ಯ ನಡೆಯುತ್ತಿವೆ. ಮೈಷುಗರ್‌ ಕಾರ್ಖಾನೆಯನ್ನು ಸಮರ್ಪಕವಾಗಿ ಆರಂಭಿಸದೆ ಜನರಿಗೆ ಮೋಸ ಮಾಡುತ್ತಿದೆ. ಇದರಿಂದ ಜಿಲ್ಲೆಯ ಆರ್ಥಿಕತೆ ಕುಸಿದಿದೆ. ಬಿಜೆಪಿ ಸರ್ಕಾರದಲ್ಲಿ ಪಾರದರ್ಶಕ ಆಡಳಿತ ಇಲ್ಲ. ಪ್ರಾಮಾಣಿಕತೆ ಇಲ್ಲ. ರಾಜ್ಯದ ಜನರು ಬೇಸತ್ತು ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಲು ಬಯಸಿದ್ದಾರೆ. ಜನರ ಹಿತದೃಷ್ಟಿಯಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದರು.

ಮತ್ತೊಬ್ಬ ಆಕಾಂಕ್ಷಿತ ಕೀಲಾರ ರಾಧಾಕೃಷ್ಣ ಮಾತನಾಡಿ, ನಮ್ಮ ಕುಟುಂಬ 1967ರಿಂದ 2017ರವರೆವಿಗೂ ಕಾಂಗ್ರೆಸ್‌ಗಾಗಿ ದುಡಿಯುತ್ತಿತ್ತು. 2018ರಲ್ಲಿ ಎಸ್‌.ಎಂ.ಕೃಷ್ಣ ಬಿಜೆಪಿಗೆ ವಲಸೆ ಹೋದ ನಂತರ ಕಾಂಗ್ರೆಸ್‌ ನಾಯಕರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರಿಂದ ಜೆಡಿಎಸ್‌ಗೆ ಹೋಗಬೇಕಾಯಿತು ಎಂದರು.

ಬಿಜೆಪಿ ಭಾವನಾತ್ಮಕಾಗಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಕಾಂಗ್ರೆಸ್‌ ಬದುಕು ನೀಡುವ ಮೂಲಕ ಜನತೆಯನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ.ನಮ್ಮ ಪ್ರಣಾಳಿಕೆಯಿಂದ ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ನಲುಗಿಹೋಗಿದ್ದಾರೆ. ನಮ್ಮ 16 ಜನರಲ್ಲಿ ಯಾರಿಗೆ ಟಿಕೆಚ್‌ ನೀಡಿದರೂ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗೂಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್‌.ಬಿ.ರಾಮು ಮಾತನಾಡಿ, ನಮ್ಮಲ್ಲಿ ಸಮರ್ಥ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಅಭ್ಯರ್ಥಿಯ ಗೆಲುವು ಮಂಡ್ಯ ಕ್ಷೇತ್ರದಿಂದಲೇ ಮೊದಲಾಗುತ್ತದೆ. ಕಳೆದ 2018ರಲ್ಲಿ ಪಕ್ಷ ಸಮರ್ಪಕವಾಗಿ ಚುನಾವಣೆ ಎದುರಿಸದೆ ಏಳೂ ಕ್ಷೇತ್ರಗಳಲ್ಲೂ ಸೋಲುಂಟಾಯಿತು. ಆದರೆ, ಈ ಬಾರಿ ಹಾಗಾಗಲು ಬಿಡುವುದಿಲ್ಲ. ಈ ಬಾರಿ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರ ಹಿಡಿಯವುದು ಸೂರ್ಯ-ಚಂದ್ರರಿರುವಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.

ಸಭೆಯಲ್ಲಿ ಮೈಷುಗರ್‌ ಮಾಜಿ ಅಧ್ಯಕ್ಷ ಬಿ.ಸಿ.ಶಿವಾನಂದ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ಪಾಜಿ, ಮುಖಂಡರಾದ ಎಂ.ಎಸ್‌.ಚಿದಂಬರ್‌, ಜಿ.ಸಿ.ಆನಂದ್‌, ಶಿವಲಿಂಗೇಗೌಡ, ಚಂದೂಪುರ ಪಾಪಣ್ಣ, ಕುರುಬರ ಸಂಘದ ಅಧ್ಯಕ್ಷ ಸುರೇಶ್‌, ನಗರಸಭೆ ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ ರಘುನಂದನ್‌, ಹನ್ಸಿಯಾಬಾನು, ನಾಗಮಣಿ ಸೇರಿದಂತೆ 8 ಮಂದಿ ಆಕಾಂಕ್ಷಿತ ಅಭ್ಯರ್ಥಿಗಳು ಭಾಗವಹಿಸಿದ್ದರು.

ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಗುರಿ: ಚಂದ್ರಶೇಖರ್‌

ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಲು 16 ಮಂದಿ ಆಕಾಂಕ್ಷಿತರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಎಲ್ಲಾ ವೈಮನಸ್ಸುಗಳನ್ನು ಬಿಟ್ಟು ಅವರ ಪರ ಪ್ರಾಮಾಣಿಕವಾಗಿ ದುಡಿಯುವುದಾಗಿ ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಘೋಷಿಸಿದರು.

ಜ.27ರಂದು ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು, ಕಾಂಗ್ರೆಸ್‌ ಕಾರ‍್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಾನೂ 25 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ಅಂಬರೀಶ್‌ ಇದ್ದ ಕಾಲದಿಂದಲೂ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದೇನೆ. ಆತ್ಮಾನಂದ ಅವರನ್ನು ಬಿಟ್ಟರೆ ನಾನೂ ಹಿರಿಯ ಕಾಂಗ್ರೆಸ್ಸಿಗನಿದ್ದೇನೆ. ಹಾಗಾಗಿ ನಾನೂ ಒಬ್ಬ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಟಿಕೆಟ್‌ ಕೊಡುವ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರಿಗೆ ಎಲ್ಲರೂ ಒಗ್ಗೂಡಿ ಈ ಬಾರಿ ಕೆಲಸ ಮಾಡಲಾಗುವುದು ಎಂದರು.

ಜಿಲ್ಲಾದ್ಯಂತ ಒಗ್ಗಟ್ಟು ಪ್ರದರ್ಶನದಿಂದ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿರ್ಧಾರವನ್ನು ಪ್ರತಿಯೊಬ್ಬರೂ ಮಾಡಿದ್ದೇವೆ. ಈಗಾಗಲೇ ಎರಡು ಮೂರು ಸಭೆಗಳಲ್ಲೂ ನಮ್ಮ ನಾಯಕರು ಸಲಹೆ ನೀಡಿದ್ದಾರೆ. ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಸಭೆಯ ಹಿಂದೆ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಪ್ರತ್ಯೇಕವಾಗಿ ನಡೆಸುವ ಸಭೆಗಳಿಂದ ಪಕ್ಷದ ವರ್ಚಸ್ಸು ಕುಂದುವುದಿಲ್ಲ, ಮತದಾರರಲ್ಲಿ ಗೊಂದಲವೂ ಆಗುವುದಿಲ್ಲ. ಆದರೆ, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗದಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಪಕ್ಷವನ್ನು ಬಲವರ್ಧನೆಗೊಳಿಸುವ ಸಲುವಾಗಿ ಸಭೆಗಳನ್ನು ನಡೆಸುತ್ತಿದ್ದೇವೆ. ನಮ್ಮಲ್ಲಿ ಯಾವ ಗೊಂದಲಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios