ಬೆಂಗಳೂರು [ಜ.15]:  ಅಕ್ರಮ ಗಣಿಗಾರಿಕೆ ನಡೆಸಿದ್ದಕ್ಕಾಗಿ ಸುಮಾರು 10 ಕೋಟಿ ರು. ದಂಡ ವಿಧಿಸಿ ಹೊರಡಿಸಿದ ಆದೇಶ ರದ್ದುಪಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದ ವ್ಯಕ್ತಿಯೊಬ್ಬನನ್ನು ಹೈಕೋರ್ಟ್‌ ತರಾಟೆ ತೆಗೆದುಕೊಂಡಿತು.

ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ 10 ಕೋಟಿಗೂ ಅಧಿಕ ದಂಡವನ್ನು ಪಾವತಿಸಲು ಸೂಚಿಸಿ ತಮಗೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಡಿಮ್ಯಾಂಡ್‌ ನೋಟಿಸ್‌ ರದ್ದುಪಡಿಸುವಂತೆ ಕೋರಿ ತುಮಕೂರಿನ ಎಚ್‌.ಎ.ಮುಖ್ತಿಯಾರ್‌ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಸರ್ಕಾರಿ ವಕೀಲ ವಿ.ಜಿ.ಭಾನುಪ್ರಕಾಶ್‌, ಸರ್ಕಾರಿ ಅಧಿಕಾರಿಗಳಿಗೆ ಅರ್ಜಿದಾರರು ಪತ್ರ ಬರೆದಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅರ್ಜಿದಾರರು ನಡೆಯನ್ನು ಖಂಡಿಸಿದ ನ್ಯಾಯಪೀಠ, ಆರ್ಥಿಕ ಸಂಕಷ್ಟದಿಂದ ರೈತರು, ಬಡವರು ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಕೇಳಿದ್ದೇವೆ. ಆದರೆ, ಅಕ್ರಮ ಗಣಿಗಾರಿಕೆ ಮಾಡಿದವರು ಡಿಮ್ಯಾಂಡ್‌ ನೋಟಿಸ್‌ ರದ್ದುಗೊಳಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದಾರೆ ಎಂದರೆ ಏನರ್ಥ? ಅದರ ಬದಲು ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡು ಬರುವುದು ಸೂಕ್ತವಲ್ಲವೇ ಎಂದು ಪ್ರಶ್ನಿಸಿತು.

ನಟಿ ಪರಾರಿ ಕೇಸ್: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಸಾವು, ನೋಡಲು ಬಾರದ ನಾನ್‌ಸೆನ್ಸ್‌ ನಟಿ..

ತುಮಕೂರು ತಾಲೂಕು ಗೇರೆಹಳ್ಳಿ ಗ್ರಾಮದ ವಿವಿಧ ಸರ್ವೇ ಸಂಖ್ಯೆಯಲ್ಲಿ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪ ಸಂಬಂಧ ಅರ್ಜಿದಾರರಿಗೆ 10 ಕೋಟಿ ರು.ಗು ಅಧಿಕ ಹಣವನ್ನು ದಂಡ ವಿಧಿಸಲಾಗಿದೆ. ಈ ಸಂಬಂಧ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಲಾಗಿದೆ.