ಚಿಕ್ಕಮಗಳೂರಿನ ಕೊಪ್ಪದಲ ಬಸ್‌ ನಿಲ್ದಾಣ ಆವರಣದಲ್ಲಿ ಮಚ್ಚೇಶ್ವರ ಪ್ರತ್ಯಕ್ಷನಾಗಿದ್ದಾನೆ. ಇದ್ಯಾರು ಮಚ್ಚೇಶ್ವರ ಅಂತ ಆಶ್ಚರ್ಯ ಆಗ್ತಿದ್ಯಾ..? ಕೊಪ್ಪ ಬಸ್‌ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಸಿನಿಮಾ ಶೈಲಿಯಲ್ಲಿ ಮಚ್ಚು ಬೀಸುತ್ತಾ ಪ್ರತ್ಯಕ್ಷನಾಗಿ ಮಾಯವಾಗಿದ್ದಾನೆ. ಇದೀಗ ಪೊಲೀಸರು ಮಚ್ಚೇಶ್ವರನನ್ನು ಹುಡುಕುವಲ್ಲಿ ತಲೆಕೆಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು(ಜು.24): ಪಟ್ಟಣದ ಬಸ್‌ ನಿಲ್ದಾಣ ಆವರಣದಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮಧ್ಯಾಹ್ನದ ವೇಳೆ ಮಚ್ಚು ಹಿಡಿದು ಬಹಿರಂಗವಾಗಿ ಓಡಾಡುತ್ತ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದ ಘಟನೆ ನಡೆದಿದೆ. ಆದರೆ ಆ ಮಚ್ಚೇಶ್ವರ ಯಾರು, ಎಲ್ಲಿಗೆ ಹೋದ, ವಿಳಾಸವೇನು ಅನ್ನೋದು ಗೊತ್ತಾಗದೇ ಪೊಲೀಸರಿಗೆ ತಲೆನೋವು ಶುರುವಾಗಿದೆ.

ಇಲ್ಲಿನ ಮುಖ್ಯ ಬಸ್‌ ನಿಲ್ದಾಣದಲ್ಲಿ ಇತ್ತೀಚೆಗೆ ರೋಟರಿ ಸಂಸ್ಥೆಯವರು ಅಳವಡಿಸಿದ ಸಿ.ಸಿ. ಕ್ಯಾಮರಾದಲ್ಲಿ ಮಚ್ಚುಧಾರಿ ಸಂಚಾರದ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ದೃಶ್ಯಗಳು ವೈರಲ್‌ ಆಗಿದೆ.

ಅಜ್ಜಿ ಮನೆಗೆ ಬರ್ತಿದ್ದ ಮಚ್ಚೇಶ್ಚರನ ಬಗ್ಗೆ ಯಾವುದೇ ಸುಳಿವಿಲ್ಲ:

ವ್ಯಕ್ತಿ ನರಸಿಂಹರಾಜಪುರ ಭಾಗದವನಾಗಿದ್ದು, ಕೊಪ್ಪ ತಾಲೂಕಿನ ಬೋಳಾಪುರದ ಕರಿಹಕ್ಲು ಗ್ರಾಮದಲ್ಲಿ ಈತನ ಅಜ್ಜಿ ಮನೆಗೆ ಬಂದುಹೋಗುತ್ತಿದ್ದ ಎಂಬ ಮಾಹಿತಿ ಇದೆ. ಈ ಆಧಾರದಲ್ಲಿ ಪರಿಶೀಲನೆಗೆ ಹೋದಾಗ ಈತ ಮನೆಯಲ್ಲಿಲ್ಲದೇ ಅಜ್ಜಿ ಮನೆಯಲ್ಲಿದ್ದ ಈತನ ತಮ್ಮನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಈತನಿಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಗೊತ್ತಾಗಿದೆ. ಬಳಿಕ ಆತನನ್ನು ಕಳುಹಿಸಿದ ಪೊಲೀಸರು ಮಚ್ಚು ಹಿಡಿದು ಓಡಾಡಿದ ವ್ಯಕ್ತಿಯ ಸುಳಿವು ಪತ್ತೆಹಚ್ಚಲು ಗಸ್ತು ತಿರುಗುತ್ತಿದ್ದಾರೆ. ಆತನ ಮೊಬೈಲ್‌ ನಂಬರ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ಧಿಗಳು ಹಬ್ಬುತ್ತಿವೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ದೂರು ದಾಖಲಿಸಿಲ್ಲ:

ಮಚ್ಚು ಹಿಡಿದು ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈವರೆಗೂ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ. ವ್ಯಕ್ತಿಯು ಮಚ್ಚು ಹಿಡಿದು ಓಡಾಡಿರುವ ಫೋಟೋ ಸಿಕ್ಕಿದೆ. ಯಾವುದೇ ಕಾರಣಕ್ಕಾದರೂ ಬಹಿರಂಗವಾಗಿ ಈ ರೀತಿಯ ನಡವಳಿಕೆ ತಪ್ಪು. ಸಾಕಷ್ಟುಹುಡುಕಾಟ ನಡೆಸಿದರೂ, ವ್ಯಕ್ತಿಯ ಸುಳಿವು ಪತ್ತೆಯಾಗಿಲ್ಲ. ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಯ ಕುರಿತು ಪರಿಶೀಲಿಸಲಾಗುತ್ತಿದೆ.

ಪ್ರಿಯತಮೆಗೆ ಇರಿದು ತಾನೂ ಇರಿದುಕೊಂಡ ಪಾಗಲ್ ಪ್ರೇಮಿ

ಠಾಣೆಯ ಅಧಿಕೃತ ಮಾಹಿತಿ ಹೊರಬೀಳದೇ ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಚಾರಗಳನ್ನು ವೈಭವೀಕರಿಸುವುದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚಾಗಲಿದೆ. ಇಂತಹ ಕೆಲಸಕ್ಕೆ ಯಾರೂ ಮುಂದಾಗಬಾರದು. ಈ ಬಗ್ಗೆ ಮಾಹಿತಿ ದೊರೆತಲ್ಲಿ ನೇರವಾಗಿ ಕೊಪ್ಪ ಪೊಲೀಸ್‌ ಠಾಣೆಗೆ ತಿಳಿಸುವಂತೆ ಇಲಾಖೆ ಕಳಕಳಿಯ ಮನವಿ ಮಾಡಿಕೊಂಡಿದೆ.