ಬೆಂಗಳೂರು [ಸೆ.20]:  ಮ್ಯಾಟ್ರಿಮೋನಿಯಲ್‌ (ವಧು ವರಾನ್ವೇಷಣೆ) ವೆಬ್‌ಸೈಟ್‌ಗಳ ಮೂಲಕ ಅಸಹಾಯಕ ವಿಧವೆಯರನ್ನು ಪರಿಚಯಿಸಿಕೊಂಡು ಇದುವರೆಗೆ ನಾಲ್ಕು ವಿವಾಹವಾಗಿರುವ ಚಲಾಕಿ ಆರೋಪಿಯೊಬ್ಬ ಆರ್‌ಎಂಸಿ ಯಾರ್ಡ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮೈಸೂರಿನ ಸರಸ್ವತಿಪುರಂ ನಿವಾಸಿ ಎನ್‌.ಆರ್‌.ಗಣೇಶ್‌ (45) ಬಂಧಿತ. ಮೂರನೇ ವಿಚ್ಛೇದಿತ ಪತ್ನಿಯ ತಾಯಿ ಕೊಟ್ಟದೂರಿನ ಮೇರೆಗೆ ಆರೋಪಿಯ ಅಸಲಿಯತ್ತು ಬಯಲಾಗಿದೆ.

10ನೇ ತರಗತಿ ವರೆಗೆ ವ್ಯಾಸಂಗ ಮಾಡಿರುವ ಆರೋಪಿ ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವುದು ಹಾಗೂ ನಿವೇಶನ- ಮನೆಗಳನ್ನು ಕೊಡಿಸುವ ಕೆಲಸ ಮಾಡಿಕೊಂಡಿದ್ದ. ವಿಧವೆ ಮತ್ತು ಅಸಹಾಯಕ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಸುಮಾರು 15 ವರ್ಷಗಳ ಹಿಂದೆ ಆರೋಪಿ ರಾಜಾಜಿನಗರದಲ್ಲಿರುವ ಆರ್‌.ಸವಿತಾ ಎಂಬುವವರನ್ನು ವಿವಾಹವಾಗಿದ್ದು, ಮಹಿಳೆ ಗಾರ್ಮೆಂಟ್ಸ್‌ ಉದ್ಯೋಗಿಯಾಗಿದ್ದಾರೆ. ಈಕೆಗೆ 14 ವರ್ಷದ ಪುತ್ರ ಇದ್ದಾನೆ. ಮೊದಲ ಪತ್ನಿಗೆ ತಿಳಿಯದಂತೆ ಆರೋಪಿ ಏಳು ವರ್ಷಗಳ ಹಿಂದೆ ಮಡಿಕೇರಿ ಮೂಲದ ಗಾಯತ್ರಿ ಎಂಬುವವರನ್ನು ವರಿಸಿದ್ದು, ಇವರಿಗೆ ಒಂದೂವರೆ ವರ್ಷದ ಮಗು ಇದೆ. ಈಕೆ ಮೈಸೂರಿನಲ್ಲಿ ನೆಲೆಸಿದ್ದಾರೆ.

ಮೊದಲ ಮತ್ತು ಎರಡನೇ ಪತ್ನಿಗೆ ತಿಳಿಯದಂತೆ ಆರೋಪಿ ‘ಬ್ರಾಹ್ಮಿ’ ಮ್ಯಾಟ್ರಿಮೋನಿಯಲ್‌ ಮೂಲಕ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದ ಲಲಿತಾ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದ. ಲಲಿತಾ ಅವರು ಈ ಮೊದಲು ವಿವಾಹವಾಗಿ ಅಮೆರಿಕದಲ್ಲಿ ನೆಲೆಸಿದ್ದರು. ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ಮೊದಲ ಪತಿ ಸ್ಥಳದಲ್ಲಿಯೇ ಅಸುನೀಗಿದರೆ, ಲಲಿತಾ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಲಲಿತಾ ಅವರು ಅಂಗವಿಕಲರಾಗಿದ್ದಾರೆ. ಲಲಿತಾ ಅವರಿಗೆ ಬದುಕು ಕಟ್ಟಿಕೊಡುತ್ತೇನೆ ಎಂದು ನಂಬಿಸಿ 2018ರಲ್ಲಿ ಅವರನ್ನು ವಿವಾಹವಾಗಿದ್ದ. 2019ರ  ಇದೇ ರೀತಿ ಹೊಸಕೋಟೆ ಮೂಲದ ವಿಧವೆಯಾಗಿದ್ದ ಆಶಾ ಎಂಬುವವರನ್ನು ಆರೋಪಿ ವಿವಾಹವಾಗಿದ್ದ.

ಮ್ಯಾಟ್ರಿಮೋನಿಯಲ್‌ನಿಂದ ಸಿಕ್ಕಿ ಬಿದ್ದ!

ಆರೋಪಿ ಬಗ್ಗೆ ಅನುಮಾನಗೊಂಡಿದ್ದ ಮೂರನೇ ವಿಚ್ಛೇದಿತ ಪತ್ನಿಯ ತಾಯಿ ಮಹಾಲಕ್ಷ್ಮೀ ಅವರು ಆತನ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದರು. ಬ್ಯಾಹ್ಮಿ ಮ್ಯಾಟ್ರಿಮೋನಿಯಲ್‌ಅನ್ನು ಮಹಾಲಕ್ಷ್ಮೀ ಅವರು ಜಾಲಾಡಿದ್ದು, ವೆಬ್‌ಸೈಟ್‌ನಲ್ಲಿ ವಿವಾಹದ ಬಗ್ಗೆ ಹಾಕಲಾಗಿದ್ದ ಸ್ಟೇಟಸ್‌ ನೋಡಿ ಬೆಚ್ಚಿ ಬಿದ್ದಿದ್ದಾರೆ.

ಇದರಲ್ಲಿ ಆರೋಪಿ ವಿಕ್ರಮ್‌, ಕಾರ್ತಿಕ್‌ ಮತ್ತು ಹರೀಶ್‌ ಸೇರಿದಂತೆ ನಾನಾ ಹೆಸರಿನಲ್ಲಿ ತನ್ನ ಪರಿಚಯ ಮಾಡಿಕೊಂಡಿದ್ದಾನೆ. ಅಮಾಯಕ ಹೆಣ್ಣು ಮಕ್ಕಳನ್ನು ನಂಬಿಸಿ ಆರೋಪಿ ವಂಚನೆ ಮಾಡುತ್ತಿರುವ ಬಗ್ಗೆ  ಅವರು ಆರ್‌ಎಂಸಿ ಯಾರ್ಡ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹಣ ಪಡೆದು ವಂಚನೆ

ಆರೋಪಿ ವಧು-ವರರ ಸಮಾಲೋಚನಾ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ವಿಧವೆ ಮತ್ತು ಅಸಹಾಯಕ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಬ್ಯಾಂಕ್‌ನಲ್ಲಿ ಸಾಲ, ನಿವೇಶನ ಹಾಗೂ ಫ್ಲ್ಯಾಟ್‌ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅಲ್ಲದೆ, ಮೂರನೇ ವಿಚ್ಛೇದಿತ ಪತ್ನಿಯ ಸಂಬಂಧಿಕರಾದ ವಿಜಯಲಕ್ಷ್ಮೇ ಎಂಬುವವರ ನಿವೇಶನ ಮಾರಾಟ ಮಾಡಿಕೊಡುವುದಾಗಿ ತನ್ನ ಹೆಸರಿಗೆ ಜಿಪಿಎ ಮಾಡಿಸಿಕೊಂಡು 25 ಲಕ್ಷ ರು. ವಂಚನೆ ಮಾಡಿದ್ದಾನೆ. ಈ ಬಗ್ಗೆ ತನಿಖೆ ನಡೆಲಾಗುತ್ತಿದೆ. ಈತ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದೇ ರೀತಿನಲ್ಲಿ ಜೀವನ ಕಳೆಯುತ್ತಿದ್ದ. ಮೊದಲ ಮತ್ತು ಎರಡನೇ ಪತ್ನಿಯನ್ನು ಸಂಪರ್ಕ ಮಾಡಲಾಗಿದ್ದು, ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು.