ಬೆಂಗಳೂರು[ಜ.16]: ಮನೆ ಮುಂದೆ ಸ್ವಚ್ಛತಾ ಕಾರ‍್ಯ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಹಿಂಬದಿಯಿಂದ ಬಲವಂತವಾಗಿ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆ ಹಲಸೂರು ವ್ಯಾಪ್ತಿಯ ಜೋಗುಪಾಳ್ಯದಲ್ಲಿ ನಡೆದಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿದ್ದರಿಂದ ಸಾರ್ವಜನಿಕರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಅಲ್ಲದೆ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ರಾಕೇಶ್‌ ಎಂದು ಗುರುತಿಸಲಾಗಿದೆ. ಮಹಿಳೆ ತನ್ನ ಮನೆಯ ಮುಂದೆ ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸ್ವಚ್ಛತೆಯಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ಆಕೆಯನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಅಲ್ಲದೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆಯಿಂದ ತೀವ್ರ ಅಘಾತಕ್ಕೆ ಒಳಗಾದ ಮಹಿಳೆ ತಕ್ಷಣ ಚೀರಿಕೊಂಡಿದ್ದಾರೆ. ಅಲ್ಲದೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ರಾಕೇಶ್‌ ಆಕೆಯನ್ನು ಎಳೆದಾಡಿದ್ದರಿಂದ ಮಹಿಳೆಯ ಕೈಗೆ ಗಾಯವಾಗಿದೆ. ಈ ವೇಳೆ ಮಹಿಳೆಯ ಕಿರುಚಾಟ ಕೇಳಿದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಈ ವೇಳೆ ರಾಕೇಶ್‌ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಆತನನ್ನು ತಕ್ಷಣ ಬೆನ್ನತ್ತಿದ ಮಹಿಳೆ ಮತ್ತು ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ. ಹಲಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.