ವಿರಾಜಪೇಟೆ(ಮೇ 21): ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ತಮ್ಮನೊಬ್ಬ ಗುಂಡಿಕ್ಕಿ ಕೊಲೆಗೈದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ಬುಧವಾರ ನಡೆದಿದೆ. ಬಿಳಗುಂದದ ಸುರೇಶ್‌ (48) ಮೃತರು. ಕುಮಾರ್‌ ಕೊಲೆ ಆರೋಪಿ.

ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ಕುಮಾರ್‌ ಮದ್ಯದ ಮತ್ತಿನಲ್ಲಿ ಕೊಂದಿದ್ದಾನೆ ಎನ್ನಲಾಗಿದೆ. ಸುರೇಶ್‌, ಬುಧವಾರ ಕುಮಾರ್‌ ತಾಯಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಕುಮಾರ್‌ ಏಕಾಏಕಿ ಮನೆಯಿಂದ ಗನ್‌ ತಂದು ಸುರೇಶ್‌ ಎದೆಗೆ ಶೂಟ್‌ ಮಾಡಿದ್ದಾನೆ. ಪರಿಣಾಮ ಸುರೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕ್ವಾರಂಟೈನ್‌ನಲ್ಲಿ ಪ್ರೇಮಾಂಕುರ: ಮಗು ಬಿಟ್ಟು, ವಿವಾಹಿತ ಪ್ರೇಮಿ ಜೊತೆ ಮಹಿಳೆ ಪರಾರಿ!

ಆದರೆ ಇದನ್ನು ತಿಳಿಯದೆ ವಿರಾಜಪೇಟೆ ಆಸ್ಪತ್ರೆಗೆ ಸುರೇಶ್‌ ಮೃತದೇಹವನ್ನು ಸಾಗಿಸಲಾಗಿತ್ತು. ಆರೋಪಿ ಕುಮಾರ್‌ ಘಟನಾ ಸ್ಥಳದಿಂದ ಪರಾರಿಯಾಗಿದ್ದ. ಸ್ಥಳಕ್ಕೆ ದೌಡಾಯಿಸಿದ ವಿರಾಜಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸುರೇಶ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲೇ ಇರಿಸಲಾಗಿದೆ.

ಆರೋಪಿ ಸೆರೆ: ಗುಂಡೇಟು ಪ್ರಕರಣದ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕೃತ್ಯವೆಸಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ಯೆಮಾಡಿದ ನಂತರ ಆರೋಪಿ ಕುಮಾರ್‌ ಸಮೀಪದ ತೋಟದಲ್ಲಿ ಅಡಗಿ ಕುಳಿತಿದ್ದ ಎನ್ನಲಾಗಿದೆ. ಘಟನೆ ನಡೆದ ಒಂದೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.