ಬೆಂಗಳೂರು/ಕೆ.ಆರ್‌.ಪುರ [ಸೆ.14]: ಮಹದೇವಪುರದಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರವಾಗಿ ತನ್ನ ತಂದೆಯನ್ನು ನಿಂದಿಸಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಅಂಬೇಡ್ಕರ್‌ ನಗರ ನಿವಾಸಿ ಛಲಪತಿ (38) ಕೊಲೆಯಾದವರು. ಕೊಲೆ ಆರೋಪಿ ಮುರಳಿ ಹಾಗೂ ಆತನ ಸಚರರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಛಲಪತಿ ಎಂಜಿನಿಯರಿಂಗ್‌ ವರ್ಕ್ಶಾಪ್‌ ಮಳಿಗೆ ಹೊಂದಿದ್ದರು. ಕೆಲ ದಿನಗಳ ಹಿಂದೆ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಕ್ಷುಲ್ಲಕ ಕಾರಣಕ್ಕೆ ಛಲಪತಿ ಮತ್ತು ಆರೋಪಿ ಮುರಳಿ ತಂದೆ ನಡುವೆ ಮಾತಿನ ಚಕಮಕಿ ನಡೆದು, ಛಲಪತಿ ಮುರಳಿ ತಂದೆಯನ್ನು ಏಕವಚನದಲ್ಲಿ ನಿಂದಿಸಿದ್ದ ಎನ್ನಲಾಗಿದೆ. ಈ ವಿಚಾರ ಪೊಲೀಸ್‌ ಠಾಣೆ ಮೆಟ್ಟಿಲೇರಿ ಬಳಿಕ ರಾಜೀ ಸಂಧಾನ ನಡೆದಿತ್ತು.

ರಾಜೀ ಸಂಧಾನಕ್ಕೆ ಸುಮ್ಮನೆ ಆಗದ ಮುರಳಿ, ತಂದೆಯನ್ನು ನಿಂದಿಸಿದ ಛಲಪತಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಶುಕ್ರವಾರ ಬೆಳಗ್ಗೆ ತನ್ನ ಸಹಚರರ ಜತೆ ಕಾರಿನಲ್ಲಿ ಛಲಪತಿ ವರ್ಕ್ಶಾಪ್‌ ಬಳಿ ಬಂದ ಆರೋಪಿ ಮುರಳಿ, ಮಾರಕಾಸ್ತ್ರಗಳಿಂದ ಛಲಪತಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಛಲಪತಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.