ಕಾರವಾರ [ಜ.14]: ಪತ್ನಿಯ ಗಮನಕ್ಕೆ ಬರದೇ 2ನೇ ವಿವಾಹವಾಗಿ ಮೊದಲ ಪತ್ನಿಗೆ ಹಿಂಸೆ ನೀಡಿದ್ದ ಅಪರಾಧಿಗೆ ಇಲ್ಲಿನ ಸಿಜೆಎಂ ನ್ಯಾಯಾಲಯ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ಆದೇಶಿಸಿದೆ. ನಗರದ ನಿವಾಸಿ ಸತೀಶ ಗಣಪತಿ ಜೋಶಿ ಶಿಕ್ಷೆಗೆ ಒಳಗಾದವರು.

ಅಂಕೋಲಾ ತಾಲೂಕಿನ ಗಾಬಿತವಾಡದ ಸುನೀತಾ ಅವರನ್ನು 2009ರಲ್ಲಿ ವಿವಾಹವಾಗಿದ್ದು, ನಂತರ ಸುನೀತಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅನುಮಾನಿಸಿ ಅವರನ್ನು ಕೋಣೆಯೊಳಗೆ ಕೂಡಿಹಾಕಿ ಊಟ, ತಿಂಡಿಯನ್ನು ಸರಿಯಾಗಿ ನೀಡದೇ ದೈಹಿಕವಾಗಿ, ಮಾನಸಿಕವಾಗಿ ತೊಂದರೆ ನೀಡಿದ್ದನು. 

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!...

ಇದೇ ನೆಪವೊಡ್ಡಿ  ಸುನೀತಾ ಅವರನ್ನು ತವರು ಮನೆಗೆ ಕಳಿಸಿ, ತವರು ಮನೆಯಲ್ಲಿದ್ದ ಅವಧಿಯಲ್ಲಿ ಸುನೀತಾ ಅವರ ಗಮನಕ್ಕೆ ಬರದಂತೆ ವಿವಾಹ ವಿಚ್ಛೇದನ ಪಡೆದು 2ನೇ  ವಿವಾಹವಾಗಿದ್ದನು. ಈ ಬಗ್ಗೆ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಅಂದಿನ ಪೊಲೀಸ್ ಉಪ ನಿರೀಕ್ಷಕ ಉಲ್ಲಾಸ ವೆರ್ಣೇಕರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಧೀಶ ಎನ್.ಎಂ. ರಮೇಶ, ಆರೋಪ ಸಾಬೀತಾಗಿದ್ದರಿಂದ ಭಾರತೀಯ ದಂಡ ಸಂಹಿತೆ ಕಲಂ ೪೯೮(ಎ) ಪ್ರಕಾರ ಅಪರಾಧಿಗೆ ೩ ವರ್ಷ ಸಾಧಾರಣ ಕಾರಾಗೃಹ ವಾಸದ ಶಿಕ್ಷೆ,10,000 ದಂಡ ಪಾವತಿಸುವಂತೆ ಆದೇಶ ಮಾಡಿದ್ದಾರೆ. ದಂಡದ ಹಣದಲ್ಲಿ 9000 ರು. ಸಂತ್ರಸ್ತೆಗೆ ನೀಡಲು ಸೂಚಿಸಿದ್ದಾರೆ. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಹಾದೇವ ಗಡದ ವಾದ ಮಂಡಿಸಿದ್ದರು