ನೆಲಮಂಗಲ [ಜು.23] : ಮಕ್ಕಳಾಗುತ್ತವೆ ಎಂದು ದುಬಾರಿ ಹಣಕ್ಕೆ ಮಾತ್ರೆ ಖರೀದಿಸಿ ಸೇವಿಸಿದ್ದ ದಂಪತಿಗಳಲ್ಲಿ ಪತಿ ಸಾವನ್ನಪ್ಪಿದ್ದರೆ, ಪತ್ನಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ಅರಿಶಿನಕುಂಟೆ ಗ್ರಾಮದ ಶಶಿಧರ್‌(40) ಮೃತರಾದವರು. ಇವರ ಪತ್ನಿ ಗಂಗಮ್ಮ(37) ತೀವ್ರ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಮದುವೆಯಾಗಿ 12 ವರ್ಷವಾಗಿತ್ತು. ಆದರೆ, ಮಕ್ಕಳಾಗಿರಲಿಲ್ಲ. ಇದರಿಂದ ಮನನೊಂದ ದಂಪತಿಗಳು ದೇವಸ್ಥಾನ ಸುತ್ತುವುದು, ಜನ ಹೇಳಿದ ಕಡೆಯಲ್ಲ ಔಷಧಿ ಮಾಡುತ್ತಿದ್ದರು. 

ಆದರೂ ಪ್ರಯೋಜನವಾಗಿರಲಿಲ್ಲ. ಸೋಮವಾರ ಗುಜರಾತ್‌ ನೋಂದಣಿಯ ಕಾರೊಂದರಲ್ಲಿ ಜಾಹೀರಾತು ಹಾಕಿಕೊಂಡು ಬರುತ್ತಿದ್ದ ವ್ಯಕ್ತಿಯಿಂದ ಮಾತ್ರೆ ಖರೀದಿಸಿದ್ದಾರೆ. 

ಈ ಮಾತ್ರೆಗೆ 25 ಸಾವಿರ ರು. ನಿಗದಿಯಾಗಿದ್ದು, 2 ಸಾವಿರ ರು. ಮುಂಗಡ ಕೊಟ್ಟು ಪಡೆದಿದ್ದಾರೆ. ಆ ಸಮಯದಲ್ಲಿಯೇ ದಂಪತಿಗಳು ಮಾತ್ರೆ ಸೇವಿಸಿದ್ದಾರೆ. ಬಳಿಕ ದಂಪತಿಗೆ ಅತಿಯಾದ ಭೇದಿಯಾಗಿದೆ. ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಶಶಿಧರ್‌ ತೀರಿಕೊಂಡಿದ್ದಾರೆ. ನೆಲಮಂಗಲ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.