ಬೆಂಗಳೂರು [ಜು.14] :  ಕುಡಿದು ವಾಹನವೊಂದಕ್ಕೆ ಡಿಕ್ಕಿ ಹೊಡೆದು ಬೈಕ್‌ನಿಂದ ಕೆಳಗೆ ಬಿದ್ದಾಗ ರಕ್ಷಣೆ ಬಂದ ಹೆಡ್‌ ಕಾನ್‌ಸ್ಟೇಬಲ್‌ನ ಕೈ ಕಚ್ಚಿ, ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ ವಾಹನ ಸವಾರನನ್ನು ಬಸವನಗುಡಿ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ ಸುರೇಶ್‌(48) ಅವರಿಗೆ ತೀವ್ರ ಗಾಯಗಳಾಗಿವೆ. ಬನಶಂಕರಿ ನಿವಾಸಿ ಆರೋಪಿ ವಿಜಯಕುಮಾರ್‌ (26)ಹಲ್ಲೆ ನಡೆಸಿದ ಬೈಕ್‌ ಸವಾರ.

ಹೆಡ್‌ಕಾನ್‌ಸ್ಟೇಬಲ್‌ ಸುರೇಶ್‌ ಅವರು ಲಾಲ್‌ಬಾಗ್‌ ಪಶ್ಚಿಮ ದ್ವಾರದಲ್ಲಿರುವ ಜಂಕ್ಷನ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ರಾತ್ರಿ 9.40ರ ಸುಮಾರಿಗೆ ಏಕಮುಖ ರಸ್ತೆಯಲ್ಲಿ ವೇಗವಾಗಿ ಬೈಕ್‌ನಲ್ಲಿ ಬಂದಿರುವ ವಿಜಯಕುಮಾರ್‌ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಇದನ್ನು ಕಂಡ ಸುರೇಶ್‌ ಅವರು ಸವಾರನ ರಕ್ಷಣೆಗೆ ಧಾವಿಸಿದ್ದು, ಆರೋಪಿಯನ್ನು ಮೇಲೆತ್ತಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಏಕಾಏಕಿ ತನ್ನ ಬಳಿ ಇದ್ದ ಹೆಲ್ಮೆಟ್‌ನಿಂದ ಹೆಡ್‌ಕಾನ್ಸ್‌ಟೇಬಲ್‌ ಸುರೇಶ್‌ ಅವರ ಮೇಲೆ ಹಲ್ಲೆ ನಡೆಸಿ ಕೈ ಕಚ್ಚಿದ್ದಾನೆ. ಕೂಡಲೇ ಸ್ಥಳೀಯ ಸಾರ್ವಜನಿಕರು ಸುರೇಶ್‌ ಅವರ ರಕ್ಷಣೆಗೆ ಬಂದಿದ್ದಾರೆ.

ಆರೋಪಿ ಮಾದಕ ದ್ರವ್ಯ ಸೇವಿಸಿರುವ ಬಗ್ಗೆ ಶಂಕೆ ಇದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟದ ಕೆಲಸ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.