ಸಂಕಟ ನಿವಾರಿಸದ್ದಕ್ಕೆ ದೇವರಿಗೇ ಚಪ್ಪಲಿ ಹಾರ ಹಾಕಿದ್ದವನ ಅರೆಸ್ಟ್
ತನ್ನ ಕೋರಿಕೆ ಈಡೇರಿಸದ್ದಕ್ಕೆ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದವನನ್ನು ಬಂಧಿಸಲಾಗಿದೆ.
ಬಸವನಬಾಗೇವಾಡಿ: ಸಂಕಟ ನಿವಾರಿಸದ ಸಿಟ್ಟಿನಲ್ಲಿ ದೇವರ ವಿಗ್ರಹಕ್ಕೆ ಚಪ್ಪಲಿ ಹಾಕಿದ ಮಹಾನುಭಾವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಆರೋಪಿ ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ ಬಂಧಿತ ಆರೋಪಿ. ಗ್ರಾಮದ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ ನಂದಿ ವಿಗ್ರಹಕ್ಕೆ ಚಪ್ಪಲಿಹಾರ ಹಾಕಿದ ಘಟನೆ ಜೂ.8ರಂದು ನಡೆದಿದ್ದು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರು ದೇವಸ್ಥಾನಕ್ಕೆ ಬಂದು ಹೋದವರ ಮಾಹಿತಿ ಕಲೆಹಾಕಿದಾಗ ಬಸಪ್ಪ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಬಸಪ್ಪ .3 ಲಕ್ಷ ಸಾಲ ಮಾಡಿಕೊಂಡಿದ್ದು ಸಂಸಾರದ ತಾಪತ್ರಯವೂ ಬಹಳಷ್ಟಿದೆ. ಇದರಿಂದ ನೊಂದುಕೊಂಡಿದ್ದ ಆತ ತನ್ನೆಲ್ಲ ಸಂಕಷ್ಟಗಳನ್ನು ನಿವಾರಣೆ ಮಾಡುವಂತೆ ನಿತ್ಯ ಬಸವೇಶ್ವರ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋಗುತ್ತಿದ್ದ. ಆದರೆ, ದೇವರು ತನ್ನ ಕೋರಿಕೆಯನ್ನು ಇದುವರೆಗೂ ಈಡೇರಿಸಲಿಲ್ಲ ಎಂದು ಹೇಳಿ ಶನಿವಾರ ಬೆಳಗ್ಗೆ ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.