ಹಾಸನ (ನ.24):  ಜೀವನಾಂಶ ಕೇಳಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ಪತ್ನಿಯನ್ನು ಕೊಂದು ಕೆರೆಯಲ್ಲಿ ಶವ ಎಸೆದಿದ್ದ ಪತಿಯನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಶ್ರೀನಿವಾಸಗೌಡ ಅವರು, 2020 ನವೆಂಬರ್‌ 1ರಂದು ದುದ್ದ ಪೊಲೀಸ್‌ ಠಾಣಾ ವ್ಯಾಪ್ತಿಯ ಚೀರನಹಳ್ಳಿ ಗ್ರಾಮದ ಕೆರೆಯಲ್ಲಿ ಸುಮಾರು 25ರಿಂದ 30 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಈ ಸಂಬಂಧ ದುದ್ದ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಹಾಸನ ಉಪ ವಿಭಾಗದ ಡಿವೈಎಸ್ಪಿ ಟಿ.ಆರ್‌.ಪುಟ್ಟಸ್ವಾಮಿಗೌಡ ಅವರ ಉಸ್ತುವಾರಿಯಲ್ಲಿ ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಸುರೇಶ್‌ ಮತ್ತು ದುದ್ದ ಪೊಲೀಸ್‌ ಠಾಣಾ ಪಿ.ಎಸ್‌.ಐ. ಎಂ.ಸಿ. ಮಧು. ಹಾಗೂ ಸಿಬ್ಬಂದಿ ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ವಿಶೇಷ ತಂಡವು ಮೃತಳ ಹೆಸರು ಮತ್ತು ವಿಳಾಸ ಹಾಗೂ ಆರೋಪಿಯ ಪತ್ತೆಯ ಬಗ್ಗೆ ರಾಜ್ಯದ ನಾನಾ ಜಿಲ್ಲೆಗಳ ಕಡೆಗಳಿಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿದ್ದರು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕು ಶ್ರೀರಾಂಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಲಗೂರು ಗ್ರಾಮದ ಸುಷ್ಮಿತ ಕೋಂ ನಾಗರಾಜು 26 ವರ್ಷ, ಇವರು 2020 ಅಕ್ಟೋಬರ್‌ 29ರಿಂದ ಕಾಣೆಯಾಗಿದ್ದರು. ಶ್ರೀರಾಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತೆಯ ತಂದೆ ಕೃಷ್ಣಮೂರ್ತಿ, ತಾಯಿ ಜಯಶ್ರೀ ಇವರುಗಳನ್ನು ಭೇಟಿ ಮಾಡಿ ಚೀರನಹಳ್ಳಿ ಕೆರೆಯಲ್ಲಿ ದೊರೆತ ಅಪರಿಚಿತ ಮಹಿಳೆಯ ಭಾವಚಿತ್ರ ಮತ್ತು ಆಕೆಯ ಮೈಮೇಲೆ ದೊರೆತ ಸ್ವತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದ ನಂತರ ಮೃತೆಯ ವಾರಸುದಾರರು ಆಕೆಯನ್ನು ಗುರುತಿಸಿದ್ದಾರೆ.

ಕೊಲೆಗೈದು ಟಾಟಾ ಏಸ್‌ ಡ್ರೈವರ್ ಸೀಟಲ್ಲಿ ಕೂರಿಸಿದರು : ರಾತ್ರಿ ಹೇಳಿ ಹೋದವ ಶವವಾದ ...

ಮೃತೆ ಸುಷ್ಮಿತಾಳ ಬಗ್ಗೆ ವಿಚಾರ ಮಾಡಲಾಗಿ, ಸುಮಾರು 6 ವರ್ಷಗಳ ಹಿಂದೆ ಸುಷ್ಮಿತಾ ಅದೆ ಬೆಲಗೂರು ಗ್ರಾಮದ ನಾಗರಾಜು ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಳು. ಇವರಿಗೆ 4 ವರ್ಷ ಯಶಸ್ವಿನಿ ಎಂಬ ಹೆಣ್ಣು ಮಗು ಇದೆ. ಮೃತೆಯ ಗಂಡ ನಾಗರಾಜು ಅವರ ಪಕ್ಕದ ಕೋಡಿಹಳ್ಳಿ ಗ್ರಾಮದ ಶೈಲಾ ಎಂಬಾಕೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರ ಪರಿಣಾಮವಾಗಿ ಸುಷ್ಮಿತಾಳಿಗೆ ಕಿರುಕುಳ ನೀಡುತ್ತಿದ್ದರಿಂದ ಸುಷ್ಮಿತಾ ತನ್ನ ಮಗುವಿನೊಂದಿಗೆ ಕಳೆದ 1 ವರ್ಷದ ಹಿಂದೆ ತಂದೆ ಕೃಷ್ಣಮೂರ್ತಿರವರ ಮನೆಯಲ್ಲಿ ವಾಸವಿದ್ದರು. ಅರಸೀಕೆರೆಯಲ್ಲಿರುವ ಸಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದಳು. ಸುಷ್ಮಿತಾಳು ಜೀವನಾಂಶ ಕೋರಿ ತನ್ನ ಗಂಡ ನಾಗರಾಜು ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ತಿಳಿಸಿದರು.

ಮಾಹಿತಿಯನ್ನು ಸಂಗ್ರಹಿಸಿ ಆರೋಪಿ ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಜೀವನಾಂಶ ಕೇಳಿ ದೂರು ದಾಖಲಿಸಿರುವ ಬಗ್ಗೆ ಮಾತನಾಡುವ ನೆಪದಲ್ಲಿ ಸುಷ್ಮಿತಾಳನ್ನು ತನ್ನ ಹಳೆಯ ಮನೆಗೆ ಕರೆಸಿಕೊಂಡ ನಾಗರಾಜ ಆಕೆಯನ್ನು ಕೊಲೆ ಮಾಡಿ, ನಂತರ ಶವವನ್ನು ತನ್ನ ಸಹೋದರ ಮೋಹನ ಕುಮಾರ್‌ ಮತ್ತು ತನ್ನ ಗೆಳತಿ ಶೈಲಾ ಜತೆ ಸೇರಿಕೊಂಡು ಸಾಕ್ಷಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಶವವನ್ನು ಸಾಗಿಸಿ ದುದ್ದ ಪೊಲೀಸ್‌ ಠಾಣೆಯ ವ್ಯಾಪ್ತಿಯ ಚೀರನಹಳ್ಳಿ ಕೆರೆಯಲ್ಲಿ ಬಿಸಾಡಿ ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಮೆಚ್ಚಿ ಪೊಲೀಸ್‌ ಅ​ಧೀಕ್ಷಕರು ಪ್ರಶಂಶಿಸಿ ವಿಶೇಷ ಬಹುಮಾನ ಘೋಷಣೆ ಮಾಡಿದರು.