ಬೆಂಗಳೂರು: ಮಲ್ಲಿಗೆ ಕಾರಿಡಾರ್ 14 ನಿಲ್ದಾಣಗಳ ನಿರ್ಮಾಣಕ್ಕೆ ಕೆ-ರೈಡ್ ಅಸ್ತು
ಮಲ್ಲಿಗೆ ಮಾರ್ಗದ ನಿಲ್ದಾಣಗಳನ್ನು ನಿರ್ಮಿಸಲು 2023ರಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಕೇವಲ ಒಂದು ಸಂಸ್ಥೆ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಿ ₹ 800 ಕೋಟಿ ಮೊತ್ತಕ್ಕೆ ಬಿಡ್ ಸಲ್ಲಿಸಿತ್ತು. ಅಂದಾಜಿಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲಾಗಿತ್ತು. ಇದೀಗ ಪುನಃ ಟೆಂಡರ್ ಕರೆಯಲಾಗಿದ್ದು, 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಡೆಡ್‌ಲೈನ್ ನಿಗದಿಸಲಾಗಿದೆ.
ಮಯೂರ್ ಹೆಗಡೆ
ಬೆಂಗಳೂರು(ಜು.04): ಬೆಂಗಳೂರು ಉಪನಗರ ರೈಲ್ವೇ ಯೋಜನೆಯ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಸಂಪರ್ಕಿಸುವ ‘ಮಲ್ಲಿಗೆ’ ಮಾರ್ಗದಲ್ಲಿ 12 ನಿಲ್ದಾಣಗಳ ಕಾಮಗಾರಿಗೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮುಂದಾಗಿದೆ.
25 ಕಿಮೀ ಉದ್ದದ ಈ ಮಾರ್ಗದಲ್ಲಿ 16.5 ಕಿಮೀ ಮಾರ್ಗವು ನೆಲಮಟ್ಟದಲ್ಲಿ ಹಾಗೂ ಹೆಬ್ಬಾಳದಿಂದ ಯಶವಂತಪುರದವರೆಗೆ 8.5 ಕಿಮೀ ನಷ್ಟು ಎತ್ತರಿಸಿದ (ಎಲಿವೇಟೆಡ್) ಮಾರ್ಗ ನಿರ್ಮಾಣ ಆಗುತ್ತಿದೆ. ಕಾಮಗಾರಿ ಚುರುಕುಗೊಂಡಿದ್ದು, ಪಿಲ್ಲರ್ ಅಳವಡಿಕೆ, ಟ್ರ್ಯಾಕ್ ನಿರ್ಮಾಣ ಸಂಬಂಧಿತ ಕಾಮಗಾರಿ ಸೇರಿ ಶೇ. 30ಕ್ಕಿಂತ ಹೆಚ್ಚಿನ ಕೆಲಸ ಮುಗಿದಿದೆ. ಇದೀಗ ನಿಲ್ದಾಣ ನಿರ್ಮಾಣಕ್ಕಾಗಿ ಎರಡು ಪ್ರತ್ಯೇಕ ಟೆಂಡರ್ ಕರೆದಿದೆ. ಎರಡು ಸೇರಿ ₹ 933 ಕೋಟಿ ಅಂದಾಜು ವೆಚ್ಚದಲ್ಲಿ ಈ ಕಾರಿಡಾರ್‌ನಲ್ಲಿ ನಿಲ್ದಾಣಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ.
3ನೇ ಹಂತದ ಮೆಟ್ರೋಗೆ ಪಿಐಬಿ ಸಮ್ಮತಿ, ಸುರಂಗ ಮಾರ್ಗ ರಸ್ತೆ ಮತ್ತೆ ಕುಸಿತ
ಟೆಂಡರ್ ದಾಖಲೆಯಂತೆ ಮೊದಲ ಹಂತದಲ್ಲಿ (ಸಿ2-ಎ) ಅಂದಾಜು ₹ 455 ಕೋಟಿ (₹ 455,89,16,966) ವೆಚ್ಚದಲ್ಲಿ ಎಂಟು ನಿಲ್ದಾಣಕ್ಕೆ ಟೆಂಡರ್ ಕರೆಯಲಾಗಿದೆ. ಈ ಹಂತದಲ್ಲಿ ಬೆನ್ನಿಗಾನಹಳ್ಳಿ (ಬೈಯಪ್ಪನಹಳ್ಳಿ), ಕಸ್ತೂರಿನಗರ, ಸೇವಾನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ, ಮತ್ತಿಕೆರೆ ನಿಲ್ದಾಣ ತಲೆ ಎತ್ತಲಿದೆ.
ಹಾಗೂ ಎರಡನೇ ಹಂತದಲ್ಲಿ (ಸಿ2ಬಿ) ಅಂದಾಜು ₹ 477 ಕೋಟಿ (477,93,81,516) ವೆಚ್ಚದಲ್ಲಿ ನಾಲ್ಕು ನಿಲ್ದಾಣಗಳ ನಿರ್ಮಾಣಕ್ಕಾಗಿ ಟೆಂಡರ್‌ನ್ನು ಆಹ್ವಾನಿಸಲಾಗಿದೆ. ಈ ಹಂತದಲ್ಲಿ ಯಶವಂತಪುರ, ಶೆಟ್ಟಿಹಳ್ಳಿ, ಮೈದರಹಳ್ಳಿ ಮತ್ತು ಚಿಕ್ಕಬಾಣಾವರ ನಿಲ್ದಾಣಗಳ ನಿರ್ಮಾಣಕ್ಕೆ ಮುಂದಾಗಲಾಗಿದೆ.
ಮಲ್ಲಿಗೆ ಮಾರ್ಗದ ನಿಲ್ದಾಣಗಳನ್ನು ನಿರ್ಮಿಸಲು 2023ರಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಕೇವಲ ಒಂದು ಸಂಸ್ಥೆ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಿ ₹ 800 ಕೋಟಿ ಮೊತ್ತಕ್ಕೆ ಬಿಡ್ ಸಲ್ಲಿಸಿತ್ತು. ಅಂದಾಜಿಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲಾಗಿತ್ತು. ಇದೀಗ ಪುನಃ ಟೆಂಡರ್ ಕರೆಯಲಾಗಿದ್ದು, 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಡೆಡ್‌ಲೈನ್ ನಿಗದಿಸಲಾಗಿದೆ.
Bengaluru: ನಾಗಸಂದ್ರ - ಮಾದಾವರ ಮೆಟ್ರೋ ಸೇವೆ ವಿಳಂಬ
2019ರ ವಿಸ್ತ್ರತ ಯೋಜನಾ ವರದಿಯಂತೆ ಒಂಬತ್ತು ಬೋಗಿಯ ರೈಲುಗಳ ನಿಲುಗಡೆಗೆ ಅನುಗುಣವಾಗಿ ನಿಲ್ದಾಣಗಳು ವಿನ್ಯಾಸಗೊಂಡಿವೆ. ನಿಲ್ದಾಣಗಳ ನಡುವೆ ಒಂದೂವರೆ-ಎರಡೂವರೆ ಕಿಮೀ ಅಂತರ ಇರಲಿದೆ. ಎಲ್ಲ ನಿಲ್ದಾಣಗಳು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಹೊಂದಿರಲಿವೆ.
ಹಸಿರು ಸ್ನೇಹಿ ನಿಲ್ದಾಣ:
ಬೆಂಗಳೂರು ಉಪನಗರ ರೈಲ್ವೇ ಯೋಜನೆಯಲ್ಲಿ ನಿರ್ಮಾಣ ಆಗಲಿರುವ ಎಲ್ಲ 4 ಕಾರಿಡಾರ್‌ನ 56 ನಿಲ್ದಾಣಗಳು ಪರಿಸರ ಸ್ನೇಹಿಯಾಗಿರಲಿವೆ. ಭಾರತೀಯ ಹಸಿರು ಕಟ್ಟಡ ಮಂಡಳಿ ( ಐಜಿಬಿಸಿ) ಮಾರ್ಗಸೂಚಿ ಅನ್ವಯ ಇವು ತಲೆ ಎತ್ತಲಿವೆ. ಸೋಲಾರ್ ವ್ಯವಸ್ಥೆ ಹೊಂದಿರುವ ನಿಲ್ದಾಣಕ್ಕೆ ಬೇಕಾದ ಶೇ. 60ರಷ್ಟು ವಿದ್ಯುತ್‌ನ್ನು ತಾವೇ ಉತ್ಪಾದಿಸಿಕೊಳ್ಳಲಿವೆ. ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಮಳೆನೀರು ಕೊಯ್ಲು ವ್ಯವಸ್ಥೆ ಇರಲಿದೆ. ಇದರಲ್ಲದೆ, ನಿಲ್ದಾಣದ ಸುತ್ತ ಹಸಿರಿರಣಕ್ಕೆ ಬೇಕಾದ ಸಸಿಗಳನ್ನು ಬೆಳೆಸುವ ಕಾರ್ಯವನ್ನು ಕೆ-ರೈಡ್ ಮಾಡುತ್ತಿದೆ. ನಿಲ್ದಾಣಗಳ ಒಳಾಂಗಣ ವಿನ್ಯಾಸ ಪ್ರಯಾಣಿಕ ಸ್ನೇಹಿಯಾಗಿರಲಿದೆ ಎಂದು ಕೆ-ರೈಡ್ ಅಧಿಕಾರಿಗಳು ತಿಳಿಸಿದರು.