Asianet Suvarna News Asianet Suvarna News

ಇನ್ನೊಂದು ವರ್ಷದಲ್ಲಿ ರೈತರಿಗೆ ಮಹದಾಯಿ ನೀರು: ಸಚಿವ ಕಾರಜೋಳ

ಈ ಯೊಜನೆ ಅನುಷ್ಠಾನಕ್ಕೆ ಕಳೆದ 45 ವರ್ಷಗಳಿಂದ ಹೋರಾಟ ನಡೆದಿದ್ದು 1978ರಿಂದ ನಡೆದ ಹೋರಾಟಕ್ಕೆ 2022ರಲ್ಲಿ ಜಯ ಸಿಕ್ಕಿದೆ. ಈಗ ಕಾಂಗ್ರೆಸ್‌ನವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಏನೂ ಮಾಡದವರು ಇಂದು ಹತಾಶ ಭಾವದಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ 

Mahadayi Water for Farmers in Another Year Says Minister Govind Karjol grg
Author
First Published Jan 5, 2023, 8:00 PM IST

ಬೈಲಹೊಂಗಲ(ಜ.05):  ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು ಈ ಯೋಜನೆಗೆ ಶೀಘ್ರದಲ್ಲಿ ಅಡಿಗಲ್ಲು ಸಮಾರಂಭ ನಡೆಸಿ ಒಂದು ವರ್ಷದೊಳಗೆ ರೈತರ ಜಮೀನುಗಳಿಗೆ ಹಾಗೂ ಕುಡಿಯಲು ನೀರು ಒದಗಿಸುವುದಾಗಿ ಜಲಸಂಪನ್ಮೂಲ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬುಧವಾರ ಪಟ್ಟಣದ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಮಂಡಳ, ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕಳಸಾ ಬಂಡೂರಿ ಜೋಡಣೆ ಮತ್ತು ಹೋರಾಟಗಾರರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಯೊಜನೆ ಅನುಷ್ಠಾನಕ್ಕೆ ಕಳೆದ 45 ವರ್ಷಗಳಿಂದ ಹೋರಾಟ ನಡೆದಿದ್ದು 1978ರಿಂದ ನಡೆದ ಹೋರಾಟಕ್ಕೆ 2022ರಲ್ಲಿ ಜಯ ಸಿಕ್ಕಿದೆ. ಈಗ ಕಾಂಗ್ರೆಸ್‌ನವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಏನೂ ಮಾಡದವರು ಇಂದು ಹತಾಶ ಭಾವದಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ .10 ಸಾವಿರ ಕೋಟಿಯಂತೆ .50 ಸಾವಿರ ಕೋಟಿ ನೀಡುವುದಾಗಿ ಕಾಂಗ್ರೆಸ್‌ನವರು ಭರವಸೆ ನೀಡಿದ್ದರು. ಆದರೆ, ಈ ಮಾತನ್ನು ಅವರು ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ: ಗೋವಾ ಮೂಲದ ಕೇಂದ್ರ ಸಚಿವ ರಾಜೀನಾಮೆ ಬೆದರಿಕೆ

ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡ ಹತಾಶ ಭಾವನೆಯಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವರ ಯೋಗ್ಯತೆಗೆ ತಕ್ಕುದಲ್ಲ. ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ. ವಿರೋಧ ಪಕ್ಷದವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡ ಬಂದವರಂತೆ ಅವರು ಮಾತನಾಡಿಕೊಂಡು ಓಡಾಡುತ್ತಿದ್ದಾರೆ. ದೇಶವನ್ನು ಅರು ದಶಕಗಳಿಂದ ಆಳಿದ್ದರೂ ನೀರಾವರಿಗೆ, ದೀನ-ದಲಿತರ ಅಭಿವೃದ್ಧಿಗೆ ಕಾಂಗ್ರೆಸ್‌ ಆದ್ಯತೆ ನೀಡಿಲ್ಲ ಎಂದು ದೂರಿದರು.

ದೇಶದ 130 ಕೋಟಿ ಜನರು ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಭಿವೃದ್ಧಿ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ. ಇವರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಪಂಚದ ವಿವಿಧ ರಾಷ್ಟ್ರಗಳು ರತ್ನಗಂಬಳಿ ಹಾಸಿ ಸ್ವಾಗತ ಮಾಡುವಂತಾಗಿದೆ. ಅವರು ಒಬ್ಬ ಸಮರ್ಥ ನಾಯಕರಾಗಿದ್ದು, ಕೇಂದ್ರ ಸರ್ಕಾರ ಬಡವರಿಗಾಗಿ ನೀಡುತ್ತಿರುವ ಅಕ್ಕಿಗೆ ಸಿದ್ದರಾಮಯ್ಯ ತಮ್ಮ ಫೋಟೋ ಅಂಟಿಸಿ ಪೋಸ್‌ ನೀಡಿ ಉಚಿತ ಅಕ್ಕಿ ನೀಡುತ್ತಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದರು.

ಮಹದಾಯಿ ಯೋಜನೆ:

ಕೇಂದ್ರ ಸರ್ಕಾರ ಈ ಭಾಗದ ಜನತೆಯ ಹೋರಾಟಗಳಿಗೆ ಮನ್ನಣೆ ನೀಡಿ, ಮಹದಾಯಿ ಯೋಜನೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡವರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಬಿಜೆಪಿ ಸರ್ಕಾರ ಹಿಂಪಡೆದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಹದಾಯಿ ಯೋಜನೆಗೆ ತಡೆಯಾಜ್ಞೆ ತಂದ ಕಾಂಗ್ರೆಸ್‌ನವರು ಇಂದು ಈ ಯೋಜನೆ ಬಗ್ಗೆ ಬಹಳ ಪ್ರೀತಿ ತೋರಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೈಲಹೊಂಗಲ ಮತಕ್ಷೇತ್ರ ಕೂಡ ಬಿಜೆಪಿ ಪಾಲಾಗಲಿದೆ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಬಿಜೆಪಿ ಸರ್ಕಾರ ಜನಪ್ರಿಯ ಯೋಜನೆಗಿಂತ ಜನಹಿತ ಕಾರ್ಯಗಳಿಗೆ ಹೆಚ್ಚಿಗೆ ಒತ್ತು ನೀಡಿದೆ. ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ನೀರಾವರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು .100 ಕೋಟಿ ಅನುದಾನ ನೀಡುವ ಮೂಲಕ ಮಹದಾಯಿ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಗೆ ಕಾಂಗ್ರೆಸ್‌ನವರು ಆರಂಭದಿಂದಲೂ ಅಡ್ಡಗಾಲು ಹಾಕುತ್ತಿದ್ದಾರೆ. ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಮಹಾದಾಯಿ ನದಿಯ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂದಿದ್ದರು. ಆಗ ಕಾಂಗ್ರೆಸ್‌ನವರು ಏಕೆ ಖಂಡಿಸಿಲ್ಲ ಎಂದು ಪ್ರಶ್ನಿಸಿದರು.

ಮಹದಾಯಿ ಅನುಮತಿ ರದ್ದತಿಗಾಗಿ ಮೋದಿಗೆ ಮನವಿ: ಗೋವಾ ಸಿಎಂ ಸಾವಂತ್‌

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಈ ಭಾಗದ ಜೀವನಾಡಿ ಮಲಪ್ರಭಾ ನದಿಗೆ ಕಳಸಾ ಬಂಡೂರಿ ಜೋಡಣೆ ಯೋಜನೆಗೆ ಚಾಲನೆ ದೊರಕಿದ್ದು ಹರ್ಷ ತಂದಿದೆ. ಈ ನಾಡಿನ ಜನತೆಯ 119 ದಿನಗಳ ಕಾಲದ ನಿರಂತರ ಹೋರಾಟ ಫಲ ಕಂಡಿದೆ. ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಎಲ್ಲರಿಗೂ ಕೃತಜ್ಞತೆ ಎಂದರು.ಸಂಸದೆ ಮಂಗಲಾ ಅಂಗಡಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಮಾಧ್ಯಮ ಸಂಚಾಲಕ

ಎಫ್‌.ಎಸ್‌.ಸಿದ್ದನಗೌಡರ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡಿವಾಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶ್ರೀಕರ ಕುಲಕರ್ಣಿ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ರಾಜು ಕುಡಸೋಮನ್ನವರ, ರತ್ನಾ ಗೋದಿ, ಮಡಿವಾಳಪ್ಪ ಹೋಟಿ, ರಮೇಶ ಯಲ್ಲಪ್ಪಗೋಳ, ಇನ್ನಿತರರು ಇದ್ದರು. ಬಿಜೆಪಿ ಕಾರ್ಯಕರ್ತರು, ಸಾವಿರಾರು ನಾಗರಿಕರು ಭಾಗವಹಿಸಿದ್ದರು. ಮಡಿವಾಳಪ್ಪ ಚಳಕೊಪ್ಪ ಸ್ವಾಗತಿಸಿದರು. ದುಂಡೇಶ ಗರಗದ ನಿರೂಪಿಸಿ ವಂದಿಸಿದರು.

Follow Us:
Download App:
  • android
  • ios