ಧಾರವಾಡ[ಡಿ.25]: ನಾಲ್ಕು ದಶಕಗಳಿಂದ ನಿರಂತರವಾಗಿ ಮಹದಾಯಿಗಾಗಿ ಹೋರಾಟ ನಡೆಯುತ್ತಲೆ ಇದೆ. ಸರ್ಕಾರಗಳು ಕೇವಲ ಭರವಸೆ ನೀಡುತ್ತ ಬಂದಿದ್ದು, ಈಗ ಮಲಪ್ರಭೆಯಲ್ಲಿ ನೀರಿನ ಕೊರತೆ ಉಂಟಾಗಿರುವ ಕಾರಣ ಪ್ರಧಾನಮಂತ್ರಿ ಸಂಬಂಧಿಸಿದ ರಾಜ್ಯದ ಮಂತ್ರಿಗಳನ್ನು ಕರೆಸಿ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿ ಮಹದಾಯಿಗಾಗಿ ಮಹಾವೇದಿಕೆ ಹಾಗೂ ಮಹದಾಯಿ ಕಳಸಾ ಬಂಡೂರಿ ಹೋರಾಟ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಕಲಾ ಭವನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂದರ್ಭದಲ್ಲಿ ಮಹದಾಯಿಗಾಗಿ ಮಹಾವೇದಿಕೆ ರಾಜ್ಯ ಸಂಚಾಲಕ ಶಂಕರ ಅಂಬಲಿ ಮಾತನಾಡಿ, ಗೋವಾದಲ್ಲಿರುವ ಇಬ್ಬರು ಸಂಸದರು ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಆದರೆ, ರಾಜ್ಯದಲ್ಲಿ 28 ಸಂಸದರಿದ್ದರೂ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಲು ಸಾಧ್ಯವಾಗದೇ ಇರುವುದು ನಮ್ಮ ಜನಪ್ರತಿನಿಧಿಗಳ ಯೋಗ್ಯತೆಯನ್ನು ಅಳೆಯುವ ಅಳತೆಗೋಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ಯೋಜನೆ ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಳಂಬ ನೀತಿಯನ್ನು ಅನುಸರಿಸುತ್ತಿವೆ. ಪರಿಸರ ಇಲಾಖೆ ಅನುಮತಿ ತಡೆ ಹಿಡಿದಿರುವುದು ನೋವಿನ ಸಂಗತಿಯಾಗಿದೆ. ನಮ್ಮ ಬೇಡಿಕೆಯನ್ನು 15 ದಿನದೊಳಗೆ ಈಡೇರಿಸದಿದ್ದರೆ ನಾಲ್ಕು ಜಿಲ್ಲೆಗಳನ್ನು ಬಂದ್‌ ಮಾಡಿ ಉಗ್ರವಾದ ಹೋರಾಟದ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟದ ಪ್ರಾರಂಭದಿಂದಲೇ ಸರ್ಕಾರಗಳು ನಿರ್ಲಕ್ಷ ಭಾವ ತೋರುತ್ತಿವೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಚುನಾವಣೆ ಸಂದರ್ಭದಲ್ಲಿ ಮಾತ್ರ ಮಹದಾಯಿ ವಿಷಯವನ್ನು ಬಗೆಹರಿಸುವುದಾಗಿ ಸರ್ಕಾರಗಳು ಹುಸಿ ಭರವಸೆ ನೀಡುತ್ತವೆ. ಆದರೆ, ಸಮಸ್ಯೆ ಮಾತ್ರ ಇದುವರೆಗೂ ಬಗೆ ಹರಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಹಿಂದೆ ಮಹದಾಯಿ ಹೋರಾಟಕ್ಕೆ ಇದ್ದ ಉಗ್ರ ಸ್ವರೂಪ ಮರಕಳಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆ ನೇರ ಹೊಣೆಯಾಗಲಿವೆ. ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಯಲು ಅವಕಾಶ ನೀಡುವುದಿಲ್ಲ. ಹೀಗಾಗಿ, ಈ ಭಾಗದ ಶಾಸಕರು, ಸಚಿವರು ಮಹದಾಯಿ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಪರಿಸರ ಇಲಾಖೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.