ನರಗುಂದ: ಕುಂಟುತ್ತ ಎಂಟನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ..!
ಹೋರಾಟ ಮೊದಲಿನಂತೆ ಬಿರುಸಿನ ಕಾವು ಉಳಿಸಿಕೊಂಡಿಲ್ಲ. ಮುಖ್ಯಮಂತ್ರಿ, ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುವುದಕ್ಕಷ್ಟೇ ಈಗ ಸೀಮಿತವಾಗಿ, ಕುಂಟುತ್ತ ಸಾಗಿದೆ.
ಎಸ್.ಜಿ. ತೆಗ್ಗಿನಮನಿ
ನರಗುಂದ(ಜು.17): ಬಂಡಾಯ ನೆಲ ನರಗುಂದದಲ್ಲಿ 2015ರ ಜು. 16ರಂದು ಪ್ರಾರಂಭವಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಶನಿವಾರ (ಜು.16) ಸುದೀರ್ಘ ಏಳು ವರ್ಷಗಳನ್ನು ಪೂರೈಸಿ ಎಂಟನೇ ವರ್ಷಕ್ಕೆ ಪದಾರ್ಪಣೆ ಮಾಡಿತು. ಹೋರಾಟ ಮೊದಲಿನಂತೆ ಬಿರುಸಿನ ಕಾವು ಉಳಿಸಿಕೊಂಡಿಲ್ಲ. ಮುಖ್ಯಮಂತ್ರಿ, ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುವುದಕ್ಕಷ್ಟೇ ಈಗ ಸೀಮಿತವಾಗಿ, ಕುಂಟುತ್ತ ಸಾಗಿದೆ. ಆದಾಗ್ಯೂ ನಿತ್ಯ ಬೆಳಗ್ಗೆ ಕೆಲವು ಹೋರಾಟಗಾರರು ವೇದಿಕೆಯಲ್ಲಿ ತುಸುಹೊತ್ತು ಕುಳಿತು ಹೋಗುವುದನ್ನು ರೂಢಿಸಿಕೊಂಡಿದ್ದರಿಂದ ಏಳು ವರ್ಷ ಪೂರೈಸಿ, ಎಂಟನೇ ವರ್ಷಕ್ಕೆ ಮುಂದಡಿ ಇಟ್ಟಿದೆ.
ಈ ಹೋರಾಟದಲ್ಲಿ ಇದ್ದ ಕೆಲವು ಮುಖಂಡರು ಹೊರಹೋಗಿ ಬೇರೆ ಸಂಘಟನೆ ಕಟ್ಟಿದ್ದರಿಂದ ಹೋರಾಟದ ಶಕ್ತಿಯೇ ಕುಂದಿದೆ. ಅಲ್ಲದೇ ಸೊಬರದಮಠ ಅವರ ನೇತೃತ್ವದ ಈ ಹೋರಾಟ ಮಹದಾಯಿಗಷ್ಟೇ ಸೀಮಿತವಾಗಿಲ್ಲ. ಬೇರೆ ಬೇರೆ ವಿಷಯಗಳಿಗೂ ವಿಸ್ತರಿಸಿದ್ದರಿಂದ ಕಳಸಾ-ಬಂಡೂರಿ, ಮಹದಾಯಿ ಹೋರಾಟ ಕಾವು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ.
ಮಹದಾಯಿ ನೀರಿಗಾಗಿ ಹೋರಾಟ, 2ನೇ ದಿನಕ್ಕೆ ಕಾಲಿಟ್ಟ ಅನ್ನದಾತರ ಪ್ರತಿಭಟನೆ, ಸರ್ಕಾರಕ್ಕೆ ಎಚ್ಚರಿಕೆ
ಆಗ್ರಹ..:
ಹೋರಾಟದ ನೇತೃತ್ವ ವಹಿಸಿರುವ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು ಇಂದು ಹೋರಾಟ ವೇದಿಕೆಯಲ್ಲಿ ಯೋಜನೆ ಜಾರಿ ಆಗದಿರುವುದಕ್ಕೆ ಕಪ್ಪು ಬಟ್ಟೆಪ್ರದರ್ಶಿಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟ ಎಂಟನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಇದು ದೇಶಕ್ಕೆ ಅವಮಾನಕಾರಿ ಸಂಗತಿ. ಏಕೆಂದರೆ ಇಡೀ ಜಗತ್ತಿನಲ್ಲಿ ಕುಡಿಯಲು ಹಾಗೂ ಕೃಷಿ ನೀರಿಗಾಗಿ ಇಂತಹ ಸುದೀರ್ಘ ಹೋರಾಟ ನಡೆದಿಲ್ಲ ಎಂದರು.
ರಾಜಕೀಯ ಮೇಲಾಟಗಳಲ್ಲಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಯ ರೈತರ ಜೀವನ ಅಯೋಮಯವಾಗುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ಈ ಹೋರಾಟದ ಮೂಲಕ ಬೆಳಕಿಗೆ ಬಂದ ಹಲವರು ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಅನುಭವಿಸಿದ್ದರೂ ರೈತರ ಕನಸು ನನಸಾಗುತ್ತಿಲ್ಲ ಎಂದು ವಿಷಾಧಿಸಿದರು.
ರಾಜಕಾರಣಿಗಳಿಂದ ಆಗದ ಈ ಯೋಜನೆಯ ಲಾಭವನ್ನು ಹೋರಾಟಗಾರರು ನ್ಯಾಯಾಧಿಕರಣದ ಮೂಲಕ ಪಡೆಯುವಲ್ಲಿ ಅಲ್ಪ ಪ್ರಮಾಣದಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಧಿಕರಣದ ತೀರ್ಪು ಬಂದರೂ ಗೆಜೆಟ್ ನೋಟಿಫಿಕೇಶನ್ ಮಾಡಲು ಪ್ರಧಾನಿಗಳು ಮನಸ್ಸು ಮಾಡಲೇ ಇಲ್ಲ. ಆಗ ಸರ್ವೋಚ್ಚ ನ್ಯಾಯಾಲಯವು ಛೀಮಾರಿ ಹಾಕಿದಾಗ ಅಧಿಸೂಚನೆ ಹೊರಡಿಸಿದರು. ಅಂತಿಮವಾಗಿ ಅನ್ನದಾತನಿಗೆ ನ್ಯಾಯದೇವತೆಯಿಂದ ಮತ್ತೊಂದು ಹಂತದ ಜಯ ಸಿಕ್ಕಿತು. ಇಷ್ಟೆಲ್ಲ ಆಗಿ ಸುಮಾರು ಮೂರೂವರೆ ವರ್ಷಗಳು ಗತಿಸಿದರೂ ಕಾಮಗಾರಿ ಪ್ರಾರಂಭವಾಗುತ್ತಿಲ್ಲ, ಇದರಲ್ಲಿಯೂ ಹೊಲಸು ರಾಜಕಾರಣ ತುಂಬಿ ತುಳುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಿಮವಾಗಿ ಹೋರಾಟಗಾರರು ನ್ಯಾಯಾಂಗ ವ್ಯವಸ್ಥೆಯ ಮೂಲಕ ನಮ್ಮ ನೀರನ್ನು ಪಡೆಯುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಸರ್ಕಾರ ಈ ಯೋಜನೆ ಜಾರಿಗೆ ಈಗಲಾದರೂ ಮುತುವರ್ಜಿ ವಹಿಸಬೇಕೆಂದು ಆಗ್ರಹಿಸಿದರು.
ಮಹದಾಯಿ ಜಾರಿಗಾಗಿ ಶೀಘ್ರದಲ್ಲಿ ಬೆಂಗಳೂರು ಚಲೋ: ಸೊಬರದಮಠ
ರೈತ ಮುಖಂಡ ಎಸ್.ಬಿ. ಜೋಗಣ್ಣವರ ಮಾತನಾಡಿ, ಜು. 21ರ ರೈತ ಹುತ್ಮಾತ ದಿನವನ್ನು ರೈತ ಸೇನಾ ಸಂಘಟನೆ ಹಾಗೂ ರೈತ ಸಂಘದ ನೇತೃತ್ವದಲ್ಲಿ ರೈತ ಸಮಾವೇಶ ಮಾಡಿ ಮಹದಾಯಿ ನೀರು ಪಡೆದುಕೊಳ್ಳುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಎ.ಪಿ. ಪಾಟೀಲ, ರಾಘವೇಂದ್ರ ಗುಜಮಾಗಡಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಅರ್ಜುನ ಮಾನೆ, ಯಲ್ಲಪ್ಟಚಲವಣ್ಣವರ, ವಾಸು ಚವ್ಹಾಣ, ಮಲ್ಲಪ್ಪ ಅಣ್ಣೆಗೇರಿ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಈರಣ್ಣ ಗಡಗಿ ಉಪಸ್ಥಿತರಿದ್ದರು.