ಅರಣ್ಯದ ನಡುವೆ ಇರುವ ಆಕರ್ಷಣಾ ಕೇಂದ್ರ ಸಾವನದುರ್ಗದ ದೇಗುಲ
ಮಾಗಡಿ ಪಟ್ಟಣದಿಂದ 11 ಕಿ.ಮೀ.ದೂರದಲ್ಲಿರುವ ಸಾವನದುರ್ಗವೆಂಬ ದಟ್ಟಅರಣ್ಯದ ನಡುವೆ ಲಕ್ಷಾಂತರ ಭಕ್ತರ ಆರಾಧ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿ ನೆಲೆಸಿದ್ದು, ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.
ಎಚ್.ಆರ್. ಮಾದೇಶ್
ಮಾಗಡಿ [ಸೆ.30]: ಸಾವನದುರ್ಗದ ಬೃಹತ್ ಏಕಶಿಲಾ ಬೆಟ್ಟದ ತಪ್ಪಲಲ್ಲಿ ನೆಲಸಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದೆ. ಇಲ್ಲಿಗೆ ರಾಜ್ಯವಲ್ಲದೇ, ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಸ್ವಾಮಿಗೆ ತಮ್ಮ ಭಕ್ತಿಯನ್ನು ಆರ್ಪಿಸಿ ಪುನೀತರಾಗುತ್ತಾರೆ.
ಬಂಡೆಯಲ್ಲಿ ಸ್ವಯಂಭು ನರಸಿಂಹ ಸ್ವಾಮಿ:
ಮಾಗಡಿ ಪಟ್ಟಣದಿಂದ 11 ಕಿ.ಮೀ.ದೂರದಲ್ಲಿರುವ ಸಾವನದುರ್ಗವೆಂಬ ದಟ್ಟಅರಣ್ಯದ ನಡುವೆ ಲಕ್ಷಾಂತರ ಭಕ್ತರ ಆರಾಧ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿ ನೆಲೆಸಿದ್ದು, ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಬಂಡೆಯಲ್ಲಿ ಉದ್ಬವವಾಗಿರುವ ನರಸಿಂಹಸ್ವಾಮಿಯನ್ನು ಯಾರೂ ತಂದು ಪ್ರತಿಷ್ಠಾಪನೆ ಮಾಡಿಲ್ಲ ಅಥವಾ ಕೆತ್ತಿಲ್ಲ. ಇಲ್ಲಿರುವ ದೊಡ್ಡ ಬಂಡೆಯೊಂದರಲ್ಲಿ ನರಸಿಂಹಸ್ವಾಮಿ ಸ್ವಾಮಿ ಸ್ವಯುಂಭ ವಾಗಿ ಉದ್ಭವಾಗಿದ್ದು, ಚಿಕ್ಕದಾಗಿದ್ದ ದೇವಾಲಯಕ್ಕೆ 1930ರ ದಶಕದಲ್ಲಿ ಭಕ್ತರೊಬ್ಬರು ಕಾಯಕಲ್ಪ ನೀಡಿ ಸುಂದರ ದೇವಾಲಯವನ್ನು ನಿರ್ಮಿಸಿದ್ದಾರೆ.
ಲಕ್ಷ್ಮೀ ದೇವಿ ಪ್ರತಿಷ್ಠಾಪನೆ:
ನರಸಿಂಹ ಸ್ವಾಮಿ ಉಗ್ರತೆ ದಿನೇ ದಿನೇ ಹೆಚ್ಚಾದ ಕಾರಣ ಸ್ವಾಮಿಯ ಉಗ್ರತೆಯನ್ನು ಶಾಂತಗೊಳಿಸುವ ಸಲುವಾಗಿ ದೇವಾಲಯದ ಗರ್ಭಗುಡಿಯಲ್ಲಿ 60ರ ದಶಕದಲ್ಲಿ ಲಕ್ಷ್ಮೀ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಇಲ್ಲಿ ಲಕ್ಷ್ಮೀ ದೇವಿಯ ವಿಗ್ರವಿರುವ ಬಗ್ಗೆ ಬಹತೇಕ ಭಕ್ತರಿಗೆ ತಿಳಿದಿಲ್ಲ. ದೇವಾಲಯದ ಅವರಣದಲ್ಲಿಯೇ ಮತ್ತೊಂದು ಮಹಾ ಲಕ್ಷ್ಮೀ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಾವಿರಾರು ವರ್ಷಗಳ ಹಿಂದೆ ಸಾವನದುರ್ಗ ಪ್ರದೇಶದಲ್ಲಿ ಜಾಬಲಿ ಎನ್ನುವ ಋುಷಿಯೊಬ್ಬರು ವಾಸಿಸುತ್ತಿದ್ದು, ಇವರು ತಿರುಪತಿಗೆ ತೆರಳಿ ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸು ಮಾಡಿದ್ದು, ಜಾಬಲಿ ಋುಷಿಯ ತಪಸ್ಸಿಗೆ ಮೆಚ್ಚಿದ ನಾರಾಯಣ ಪ್ರತ್ಯಕ್ಷನಾಗಿ ಏನು ವರಬೇಕು ಎಂದು ಕೇಳಿದಾಗ ಅದಕ್ಕೆ ಜಾಬಲಿ ಋುಷಿಗಳು ನೀನು ನನ್ನ ಕ್ಷೇತ್ರಕ್ಕೆ ಬಂದು ನೆಲಸಬೇಕು ಎಂದು ಬೇಡಿಕೊಂಡಿದ್ದು, ಇದಕ್ಕೆ ಒಪ್ಪಿದ ಶ್ರೀಮನ್ನಾರಾಯಣ ಸಾವನದುರ್ಗಕ್ಕೆ ಬಂದು ನರಸಿಂಹಸ್ವಾಮಿಯ ರೂಪದಲ್ಲಿ ಸ್ವಯಂಭುವಾಗಿ ನೆಲಸಿದ್ದಾನೆ ಎಂದು ಸ್ಥಳ ಪುರಾಣವಿದೆ ಎಂದು ಸ್ಥಳೀಕರು ಹೇಳುತ್ತಾರೆ.
ಮುತ್ತೈದೆ ಭಾಗ್ಯ ಹೆಚ್ಚುತ್ತದೆ:
ಬಹಳ ಶಕ್ತಿಶಾಲಿಯಾಗಿರುವ ನರಸಿಂಹಸ್ವಾಮಿಗೆ ದೇಶಾದಾದ್ಯಂತ ಭಕ್ತರು ಇದ್ದಾರೆ. ಶನಿವಾರ, ಭಾನುವಾರ, ಅಮಾವಾಸ್ಯೆಗಳಂದು ಹೆಚ್ಚಿನ ಭಕ್ತರು ಇಲ್ಲಿಗೆ ಬರುತ್ತಾರೆ. ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಅವರಣದಲ್ಲಿ ರಾತ್ರಿ ಕಳೆದರೆ ಬಹಳಷ್ಟುಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ದೇವಾಲಯದ ಪ್ರಾಂಗಣದಲ್ಲಿ ಪ್ರತಿರಾತ್ರಿ ಬಹಳಷ್ಟುಭಕ್ತರು ಮಲಗುತ್ತಾರೆ. ಭೀಮನ ಅಮಾವಾಸ್ಯೆಯಂದು ಮುತ್ತೈದೆಯರು ದೇವಾಲಯದ ಅವರಣದಲ್ಲಿ ಕಳೆದು ಬೆಳಗಿನ ಪೂಜೆ ಮಾಡಿಸಿದರೆ, ಮುತ್ತೈದೆ ಭಾಗ್ಯ ಹೆಚ್ಚುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.
ಮೇ ತಿಂಗಳಿನಲ್ಲಿ ಬ್ರಹ್ಮರಥೋತ್ಸವ:
ಮುಜಾರಾಯಿ ಇಲಾಖೆಗೆ ಒಳಪಟ್ಟಿರುವ ದೇವಾಲಯದಲ್ಲಿ ಹರಿಸೇವೆ, ಉತ್ಸವದಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಮೇ ತಿಂಗಳಿನಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ದೇವಾಲಯದಲ್ಲಿ ಎರಡು ಆರ್ಚಕ ಕುಟುಂಬದವರು ನೂರಾರು ವರ್ಷಗಳಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಉತ್ತಮ ಸಾರಿಗೆ ವ್ಯವಸ್ಥೆ: ದಟ್ಟಅರಣ್ಯ ಪ್ರದೇಶದಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದ ಕಾಲದಲ್ಲಿಯೂ ಸಹ ಭಕ್ತರು ಅರಣ್ಯದಲ್ಲಿ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಬಂದು ನರಸಿಂಹಸ್ವಾಮಿ ದರ್ಶನ ಮಾಡುತ್ತಿದ್ದರು. ಇಲ್ಲಿಗೆ ಬರುವ ಭಕ್ತರು ತಂಗಲು ದೇವಾಲಯದ ಅವರಣದಲ್ಲಿ ಬಹಳಷ್ಟುಛತ್ರಗಳನ್ನು ಭಕ್ತರು ನಿರ್ಮಿಸಿದ್ದಾರೆ. ಸ್ವಾಮಿಯ ಭಕ್ತರು ಇಲ್ಲಿ ಮದುವೆ, ನಾಮಕರಣ ಮುಂತಾದ ಶುಭ ಕಾರ್ಯಗಳನ್ನು ಸ್ವಾಮಿದ ಸನ್ನಿಧಿಯಲ್ಲಿ ನೆರವೇರಿಸುತ್ತಾರೆ. ಈಗ ಸಾವನದುರ್ಗಕ್ಕೆ ಬರಲು ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಬೆಳಗ್ಗೆ ಮತ್ತು ಸಂಜೆ ಸರಕಾರಿ ಬಸ್ ಬರುತ್ತದೆ. ಅಲ್ಲದೇ ಮಗಡಿ-ರಾಮನಗರ ರಸ್ತೆಯಲ್ಲಿರುವ ನಾಯಕನಪಾಳ್ಯ ಗೇಟ್ ನಲ್ಲಿ ಇಳಿದರೆ ಇಲ್ಲಿಂದ ಸಾವನದುರ್ಗಕ್ಕೆ ತೆರಳಲು ಆಟೋಗಳು ಬಹಳಷ್ಟಿವೆ.
ಸಾವನದುರ್ಗದ ಲಕ್ಷ್ಮೀ ನರಸಿಂಹಸ್ವಾಮಿಯಲ್ಲಿ ಬಹಳ ಶಕ್ತಿ ಇದೆ. ಭಕ್ತರು ಇಲ್ಲಿಗೆ ಬಂದು ಸ್ವಾಮಿಯನ್ನು ಬೇಡಿಕೊಂಡರೆ ತಮ್ಮ ಕೆಲಸ ಕಾರ್ಯಗಳು ಶೀಘ್ರವಾಗಿ ನೆರವೇರುತ್ತವೆ ಎಂಬ ನಂಬಿಕೆ ಇರುವುದರಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸಿ ಸ್ವಾಮಿಗೆ ತಮ್ಮ ಭಕ್ತಿಯನ್ನು ಆರ್ಪಿಸುತ್ತಿದ್ದಾರೆ.
- ಎನ್.ನಾಗರಾಜು. ಹೊಸಪೇಟೆ ರಸ್ತೆ, ಮಾಗಡಿ.
ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಿಂದ ಸರ್ಕಾರಕ್ಕೆ ಪ್ರತಿವರ್ಷ ಲಕ್ಷಾಂತರ ರು. ಅದಾಯ ಬರುತ್ತಿದೆ. ಆದರೂ ದೇವಾಲಯಕ್ಕೆ ಬರುವ ಭಕ್ತರಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಭಕ್ತರು ಮಂಡೆ ತೆಗೆಸಲು ಹಾಗೂ ಸ್ನಾನ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಭಕ್ತರಿಗೆ ಊಟ, ಉಪಹಾರಕ್ಕೆ, ಒಂದು ಸುಸಜ್ಜಿತ ಹೋಟೆಲ್ ಇಲ್ಲ. ಶೌಚಾಲಯಗಳ ಸಮಸ್ಯೆ ಇರುವುದರಿಂದ ಸರ್ಕಾರ ಇತ್ತ ಗಮನಹರಿಸಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು.
- ರಾಜೇಶ್, ವೀರೇಗೌಡನದೊಡ್ಡಿ.
ದೇವಾಲಯದ ರಥ ಬೀದಿಯ ರಸ್ತೆ ಹಾಳಾಗಿದ್ದ ಕಾರಣ ಉತ್ತಮ ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವರು ಸೌಲಭ್ಯಗಳನ್ನು ಒದಗಿಸುವ ಮೂಲಕ ಭಕ್ತರಿಗೆ ಅನೇಕ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ.
- ಚಂದ್ರಮ್ಮ ನಂಜಯ್ಯ. ಮಾಡಬಾಳ್ ಜಿಪಂ ಸದಸ್ಯೆ.