ಸಮ ಸಮಾಜಕ್ಕೆ ಶ್ರಮಿಸಿದ್ದ ನಾರಾಯಣ ಗುರು ಬ್ರಹ್ಮರ್ಷಿ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವ, ಈಡಿಗರ ಸಮಾವೇಶದಲ್ಲಿ ಮಧು ಬಂಗಾರಪ್ಪ

ಕೊಪ್ಪಳ (ಅ.8) : ಜಾತಿ- ಜಾತಿಗಳ ನಡುವೆ ಇದ್ದ ಅಸಮಾನತೆಯಿಂದ ಆಗುತ್ತಿದ್ದ ಶೋಷಣೆ ವಿರುದ್ಧ ಧ್ವನಿಯಾಗಿದ್ದ ನಾರಾಯಣ ಗುರು ಅವರು ಸಮ ಸಮಾಜಕ್ಕಾಗಿ ಶ್ರಮಿಸಿ, ಮಾನವೀಯತೆ ಮೆರೆದಿದ್ದಾರೆ ಎಂದು ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಆರ್ಯ ಈಡಿಗ ಸಂಘ ಮತ್ತು ಬ್ರಹ್ಮರ್ಷಿ ನಾರಾಯಣ ಗುರುಗಳ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವ ಹಾಗೂ ಜಿಲ್ಲಾ ಈಡಿಗರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಾರಾಯಣ ಗುರುಗಳ ಆಶಯದಿಂದಲೇ ಹಿಂದುಳಿದ ಸಮುದಾಯದವರು ಶಾಸಕರು, ಅಧಿಕಾರಿಗಳು ಆಗಿದ್ದಾರೆ. ಇದಕ್ಕೆ ಸಿನಿಮಾ ರಂಗದಲ್ಲಿ ಡಾ. ರಾಜಕುಮಾರ, ರಾಜಕೀಯ ರಂಗದಲ್ಲಿ ಬಂಗಾರಪ್ಪ, ಸುಪ್ರೀಂಕೋರ್ಚ್‌ ನ್ಯಾಯಾಧೀಶರಾಗಿ ಸಾಧನೆ ಮಾಡಿರುವುದು ಉದಾಹರಣೆಯಾಗಿದೆ ಎಂದರು.

ನಾರಾಯಣ ಗುರುಗಳ ಸರ್ಕಾರಿ ಜಯಂತಿ ಆಚರಣೆ, ಮಂಗಳೂರಿನ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ, ನಾರಾಯಣ ಗುರುಗಳ ಬಗ್ಗೆ ಪಠ್ಯದಲ್ಲಿ ಸೇರಿಸುವ ಮೂರು ಬೇಡಿಕೆಗಳನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಈಡೇರಿಸಿದರು. ಹೀಗಾಗಿ ಜಯಂತಿ ಆಚರಣೆ ಮಾಡುತ್ತಿದ್ದು, ರಜೆ ಘೋಷಣೆ ಮಾಡದಂತೆಯೂ ಬೇಡಿಕೆ ಇಟ್ಟಿದ್ದೆ. ಅದನ್ನು ಸಿದ್ದರಾಮಯ್ಯನವರು ಒಪ್ಪಿಗೆ ಸೂಚಿಸಿ, ಅಧ್ಯಯನ ಪೀಠ ಸ್ಥಾಪನೆ ಮಾಡಿದ್ದಾರೆ. ಜಾತಿ, ಧರ್ಮ ಭೇದಭಾವವಿಲ್ಲದೇ ಸಮಾನತೆ ಸಮಾಜ ಸಂದೇಶ ಸಾರಿದ ನಾರಾಯಣ ಗುರುಗಳ ಬಗ್ಗೆಯೂ ಪಠ್ಯದಲ್ಲಿ ಸೇರಿಸಿದ ಸಿದ್ದರಾಮಯ್ಯನವರಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೇ ನಾರಾಯಣ ಗುರುಗಳಿಗೆ ಅಗೌರವ ತೋರಿದವರಿಗೆ ಧಿಕ್ಕಾರ ಹಾಕಬೇಕು ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ನಾರಾಯಣ ಗುರುಗಳು 1854ರ ಸೆ. 20ರಂದು ಜನಿಸಿ, ಮಾನವ ಜಾತಿ ಒಂದೇ ಎಂದು ಸಾರಿದರು. ಸಮಾನ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಜಾತಿ ವ್ಯವಸ್ಥೆಯನ್ನು ದೂರ ಮಾಡಿ ನಾವೆಲ್ಲರೂ ಒಂದೇ ಎಂದು ಸಾರಿದರು ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ್‌ ತಂಗಡಗಿ ಮಾತನಾಡಿ, ಕೇರಳದಲ್ಲಿ ಜನಿಸಿದ ನಾರಾಯಣ ಗುರುಗಳು ಎಲ್ಲರೂ ಸಮಾನರು. ಎಲ್ಲರೂ ಒಂದೇ ಎಂದು ದೇಶಕ್ಕೆ ಸಂದೇಶ ಸಾರಿದರು. ಸಮಾಜ ಸಣ್ಣದು. ಆದರೆ, ಶಕ್ತಿ ದೊಡ್ಡದಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಸಂಸದ ಎಸ್‌.ಜಿ. ರಾಮುಲು ಎಂದರೆ ತಪ್ಪಾಗಲಾರದು ಎಂದರು. ಎಚ್‌.ಆರ್‌. ಶ್ರೀನಾಥ್‌ ಮಾತನಾಡಿ, ಬಸವಣ್ಣನವರ ನಂತರ ಸಮಾನತೆ ಸಮಾಜಕ್ಕಾಗಿ ಶ್ರಮಿಸಿದವರು ನಾರಾಯಣ ಗುರುಗಳು ಎಂದರು.

ಸೋಲೂರು ಮಹಾ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್ಯ ಈಡಿಗ ಸಂಘದ ಗೌರವಾಧ್ಯಕ್ಷ ಪ್ರದೀಪ್‌ ಹಾನಗಲ್‌ ಮತ್ತು ಅಧ್ಯಕ್ಷ ಈರಣ್ಣ ಹುಲಿಗಿ ಅಧ್ಯಕ್ಷತೆ ವಹಿಸಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಬೆಂಗಳೂರು ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಲಕ್ಷ್ಮೀನರಸಯ್ಯ, ವಿಧಾನಪರಿಷತ್‌ ಸದಸ್ಯ ಕರಿಯಣ್ಣ ಸಂಗಟಿ, ಖಜಾಂಚಿ ಕುಸುಮಾ ಅಜಯ…, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್‌ ಗೋಕಾಕ, ಚಂದ್ರಶೇಖರ್‌, ಸಿದ್ದರಾಮಪ್ಪ, ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ, ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ಈಳಿಗೇರ್‌, ಮಂಜುನಾಥ ಈಳಿಗೇರ್‌, ಉಮಾಕಾಂತ್‌ ಮಾನ್ವಿ, ಈ.ನಾಗರಾಜ, ಕಾಶಿ ವಿಶ್ವನಾಥ ಬಿಚ್ಚಾಲಿ ಇದ್ದರು.