* ಕೆ.ಆರ್‌.ಪೇಟೆ ಬಳಿ 20 ಕಿ.ಮೀ. ವ್ಯಾಪ್ತಿಯಲ್ಲಿ ಸಿಕ್ಕಸಿಕ್ಕವರಿಗೆ ಕಚ್ಚಿದ ನಾಯಿ* ಮಂಡ್ಯ: 40 ಜನರನ್ನು ಕಚ್ಚಿದ ಹುಚ್ಚುನಾಯಿ* 20 ಕಿ.ಮೀ. ವ್ಯಾಪ್ತಿಯಲ್ಲಿ ಸಿಕ್ಕಸಿಕ್ಕವರಿಗೆ ದಾಳಿ

ಕೆ.ಆರ್‌.ಪೇಟೆ(ಅ.06): ಹುಚ್ಚುನಾಯಿಯೊಂದು(Mad Dog) ದಾರಿಯಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿದ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರೂ ಸೇರಿ 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ(KR Pete) ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಸುಮಾರು 20 ಕಿ.ಮಿ. ವ್ಯಾಪ್ತಿಯಲ್ಲಿ ಸಂಚರಿಸಿರುವ ಹುಚ್ಚುನಾಯಿ ದಾರಿಬದಿಯಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿದೆ. ಹುಚ್ಚು ನಾಯಿ ಕಡಿತಕ್ಕೆ ಒಳಗಾದ ಹೆಚ್ಚಿನವರು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಿಂದ ಪುರಸಭಾ ವ್ಯಾಪ್ತಿಯ ಹೊಸಹೊಳಲು, ಕೆ.ಆರ್‌ .ಪೇಟೆ ಪಟ್ಟಣ, ಪಟ್ಟಣ ಹೊರವಲಯದ ಪುರದ ಗೇಟ್‌ ಬಳಿ ಕೆಲವರಿಗೆ, ಕುಂದನಹಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿ, ಕೋರಮಂಡಲ ಸಕ್ಕರೆ ಕಾರ್ಖಾನೆಯ ಸಮೀಪ ಇರುವ ನಿವಾಸಗಳಿಗೂ ಮನಬಂದಂತೆ ಕಚ್ಚಿ ಗಾಯಗೊಳಿಸಿದೆ. ಕೋರಮಂಡಲ ಸಕ್ಕರೆ ಕಾರ್ಖಾನೆ ಕಬ್ಬು ಕಟಾವು ಮಾಡಲು ಬಳ್ಳಾರಿಯಿಂದ ಕಬ್ಬು ಆಗಮಿಸಿರುವ ಕೆಲ ಕೂಲಿಕಾರ್ಮಿಕರ ಮೇಲೆ ಕೂಡ ಎರಗಿದೆ. ನಾಯಿ ಕಡಿತಕ್ಕೊಳಗಾದ ಕೆಲವು ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಕೈಕಾಲುಗಳ ಮಾಂಸಖಂಡವೇ ಕಿತ್ತು ಬಂದಿದೆ.

ಅಧಿಕ ಪ್ರಮಾಣದಲ್ಲಿ ಗಾಯಗೊಂಡಿದ್ದ ಕೆಲ ವೃದ್ಧರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್‌ ಮುಖಾಂತರ ರವಾನಿಸಲಾಯಿತು. ಹುಚ್ಚು ನಾಯಿಯ ಕಡಿತದಿಂದಾಗಿ ಆತಂಕಗೊಂಡಿರುವ ಸಾರ್ವಜನಿಕರು ಕೂಡಲೇ ಈ ನಾಯಿನು ಸರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.