ಚರ್ಮಗಂಟು ರೋಗ: ಒಂದೇ ತಿಂಗಳಲ್ಲಿ 960 ಪ್ರಕರಣ ಪತ್ತೆ!
- ಚರ್ಮಗಂಟು ರೋಗ: ಒಂದೇ ತಿಂಗಳಲ್ಲಿ 960 ಪ್ರಕರಣ ಪತ್ತೆ
- ಕಡೂರು ತಾಲೂಕಿನಲ್ಲಿ ಹೆಚ್ಚು ಕೇಸ್
- ಎರಡು ತಿಂಗಳು ಜಾನುವಾರು ಸಂತೆ ನಿಷೇಧಿಸಿ ಜಿಲ್ಲಾಡಳಿತ ಆದೇಶ
ಚಿಕ್ಕಮಗಳೂರು (ಅ.17) : ಆರಂಭದಲ್ಲೇ ಕೋವಿಡ್‌ಗಿಂತ ಅತಿವೇಗ ಪಡೆದಿರುವ ಜಾನುವಾರುಗಳಿಗೆ ಚರ್ಮಗಂಟು ರೋಗ ಚಿಕ್ಕಮಗಳೂರು ಜಿಲ್ಲೆಯನ್ನು ಸಹ ಬಿಟ್ಟಿಲ್ಲ. ಕೇವಲ ಒಂದೇ ತಿಂಗಳಲ್ಲಿ ಅಂದರೆ ಸೆಪ್ಟಂಬರ್ ಮೊದಲವಾರದಿಂದ ಅಕ್ಟೋಬರ್ 16ರವರೆಗೆ 960 ಜಾನುವಾರುಗಳಲ್ಲಿ ಈ ರೋಗ ಕಂಡು ಬಂದಿದೆ. ಎರಡು ಜಾನುವಾರುಗಳು ಮೃತಪಟ್ಟಿವೆ. ಇನ್ನೊಂದು ಸಮಾಧಾನಕರ ವಿಷಯವೆಂದರೆ 960 ಸೋಂಕು ಪೀಡಿತ ಜಾನುವಾರುಗಳಲ್ಲಿ 850ಕ್ಕೂ ಹೆಚ್ಚು ಜಾನುವಾರುಗಳು ಸೋಂಕಿನಿಂದ ಮುಕ್ತವಾಗಿವೆ.
‘ಚರ್ಮಗಂಟು’ ತಡೆಗೆ 7 ಲಕ್ಷ ಲಸಿಕೆ ಪೂರೈಕೆ: ಸಚಿವ ಪ್ರಭು ಚವ್ಹಾಣ್
ಜಿಲ್ಲೆಯಲ್ಲಿ ಪ್ರಥಮದಲ್ಲಿ ಚರ್ಮಗಂಟು ರೋಗ ಕಂಡುಬಂದಿದ್ದು ಕಡೂರು ತಾಲೂಕಿನ ದೇವನೂರು ಪಶು ಆಸ್ಪತ್ರೆಯ ವ್ಯಾಪ್ತಿ ಪ್ರದೇಶದಲ್ಲಿ, ನಂತರದಲ್ಲಿ ಮತಿಗಟ್ಟಸುತ್ತಮುತ್ತ ಕಂಡುಬಂದಿತು. ಅದು, ತುಂಬಾ ವೇಗದಲ್ಲಿ ಹರಡಿಕೊಂಡಿತು.
ಸದ್ಯ ಚಿಕ್ಕಮಗಳೂರು, ಕಡೂರು, ಅಜ್ಜಂಪುರ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಚರ್ಮಗಂಟು ರೋಗ ಪ್ರಕರಣಗಳು ಪತ್ತೆಯಾಗಿವೆ. ಈ ನಾಲ್ಕು ತಾಲೂಕುಗಳ ಪೈಕಿ ಅಜ್ಜಂಪುರ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಒಂದೊಂದು ಪ್ರಕರಣ ಪತ್ತೆಯಾಗಿದ್ದರೆ, ಅತಿ ಹೆಚ್ಚು ಕೇಸ್‌ಗಳು ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಪತ್ತೆಯಾಗಿವೆ.
ಆದಾಯಕ್ಕೆ ಪೆಟ್ಟು:
ಜಿಲ್ಲೆಯ ಬಯಲುಸೀಮೆ ತಾಲೂಕುಗಳ ಬಹಳಷ್ಟುರೈತರ ಜೀವನಕ್ಕೆ ಜಾನುವಾರು ಸಾಕಾಣಿಕೆ ಹಾಗೂ ಹಾಲು ಉತ್ಪಾದನೆ ಆಧಾರ ಸ್ತಂಭ. ಕಡೂರು ತಾಲೂಕಿನಲ್ಲಿ ಹೆಚ್ಚು ಜಾನುವಾರುಗಳಿವೆ. ಚರ್ಮಗಂಟು ರೋಗ ಅತಿ ಹೆಚ್ಚು ಕಾಣಿಸಿಕೊಂಡಿದ್ದು, ಇದೇ ತಾಲೂಕಿನಲ್ಲಿ. ಇದು ಹೈನುಗಾರಿಕೆ ಮೇಲೆ ದುಷ್ಪರಿಣಾಮ ಬೀರಿದೆ. ಕಾರಣ, ಯಾವುದೇ ಒಂದು ಹಸುವಿನಲ್ಲಿ ಈ ಸೋಂಕು ಕಂಡುಬಂದರೆ, ಅದು, ಗುಣಮುಖವಾಗಲು ಕನಿಷ್ಠ 15ರಿಂದ 20 ದಿನಗಳು ಬೇಕು. ಆದರೆ, ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿರುವುದಿಲ್ಲ. ಆದ್ದರಿಂದ ರೈತರ ಆದಾಯಕ್ಕೆ ಪೆಟ್ಟುಬಿದ್ದಿದೆ.
ಚರ್ಮಗಂಟು ರೋಗ ತಡೆಗೆ 13 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ ಸೂಚನೆ
ರೋಗ ನಿಯಂತ್ರಣಕæ್ಕ ಮನೆ ಮದ್ದು: ವೀಳ್ಯದೆಲೆ-10, ಕಾಳುಮೆಣಸು- 10 ಗ್ರಾಂ, ಉಪ್ಪು-10 ಗ್ರಾಂ, ಬೆಲ್ಲ-10 ಗ್ರಾಂ ಅರೆದು ಪೇಸ್ಟ್ ಮಾಡಬೇಕು.
ಡೋಸ್: ಮೊದಲನೆಯ ದಿನ ಪ್ರತಿ ಮೂರು ಗಂಟೆಗೆ ಒಮ್ಮೆ, ಎರಡನೆಯ ದಿನದಿಂದ ಎರಡನೆಯ ವಾರದವರೆಗೆ ದಿನಕ್ಕೆ ಮೂರು ಬಾರಿ ನೀಡಬೇಕು.
ಯಾವುದೇ ಜಾನುವಾರುವಿನಲ್ಲಿ ಚರ್ಮಗಂಟು ರೋಗ ಪತ್ತೆಯಾದರೆ, ಆ ಪ್ರದೇಶದ 5 ಕಿಮೀ ಸುತ್ತಳತೆಯಲ್ಲಿ ವ್ಯಾಕ್ಸಿನ್ ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 20 ಸಾವಿರ ಡೋಸ್ ವ್ಯಾಕ್ಸಿನ್ ಲಭ್ಯವಿದೆ. ಈವರೆಗೆ 4019 ಡೋಸ್ ವ್ಯಾಕ್ಸಿನ್ ಹಾಕಲಾಗಿದೆ
- ಡಾ. ಮೋಹನ್‌ಕುಮಾರ್, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
ಜಾನುವಾರುಗಳಿಗೆ ಚರ್ಮಗಂಟು ರೋಗದ ಹರಡುವಿಕೆ ತಟ್ಟೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ಕಾಯ್ದೆ- 2005ರ ಕಲಂ 26, 33 ಹಾಗೂ 34 ಮತ್ತು ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ರಡಿಯಲ್ಲಿ ಚಿಕ್ಕಮಗಳೂರು ಜಿಲ್ಲಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ಡಿಸೆಂಬರ್ 15ರವರೆಗೆ ಅನ್ವಯ ಆಗುವಂತೆ ಜಾನುವಾರುಗಳ ಸಂತೆ, ಜಾನುವಾರುಗಳ ಜಾತ್ರೆ ಹಾಗೂ ಸಾಗಾಣಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು
- ಕೆ.ಎನ್. ರಮೇಶ್, ಜಿಲ್ಲಾಧಿಕಾರಿ