ಉಡುಪಿ (ನ.02): ಅಯೋಧ್ಯೆಯಲ್ಲಿ 300 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುವ ಭವ್ಯ ರಾಮಮಂದಿರಕ್ಕೆ ಅಗತ್ಯವಾದ ಹಣ ಸಂಗ್ರಹಕ್ಕೆ ಜ.15 (ಮಕರ ಸಂಕ್ರಾಂತಿ)ರಿಂದ 45 ದಿನಗಳ ಕಾಲ ಅಭಿಯಾನ ನಡೆಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ವ್‌ ತೀರ್ಮಾನಿಸಿದೆ. ಭಾನುವಾರ ಅಯೋಧ್ಯೆಯಲ್ಲಿ ನಡೆದ ಟ್ರಸ್ವ್‌ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಟ್ರಸ್ಟಿಗಳಲ್ಲೊಬ್ಬರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಈ ಅಭಿಯಾನದಲ್ಲಿ ಕಾರ್ಯಕರ್ತರು ದೇಶಾದ್ಯಂತ ಮನೆಮನೆಗೆ ತೆರಳಿ ಭಕ್ತರಿಂದ ಧನ ಸಂಗ್ರಹಿಸಲಿದ್ದಾರೆ. 45 ದಿನಗಳ ಅಭಿಯಾನವು ಮಾಚ್‌ರ್‍ ಮೊದಲ ವಾರದ ಮಾಘ ಹುಣ್ಣಿಮೆಯವರೆಗೆ ನಡೆಯಲಿದೆ. ಇದಕ್ಕೆ ಭಕ್ತರೆಲ್ಲರೂ ಸಹಕರಿಸಬೇಕು ಎಂದು ಶ್ರೀಗಳು ಹೇಳಿದ್ದಾರೆ.

ಅಯೋಧ್ಯೆ ಮಂದಿರಕ್ಕೆ ಭೂಮಿ ಪೂಜೆ ನಡೆದಲ್ಲೇ 28 ವರ್ಷ ಬಳಿಕ ದೀಪಾವಳಿ! ..

ರಾಮಮಂದಿರ ನಿರ್ಮಾಣದ ಖಾತೆಯನ್ನು ನಿರ್ವಹಿಸಲು ಆನೇಕ ಬ್ಯಾಂಕುಗಳು ಮುಂದೆ ಬಂದಿವೆಯಾದರೂ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ ಮಾತ್ರ ಒಂದೇ ಖಾತೆಯನ್ನು ತೆರೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಭಾರತೀಯ ವಾಸ್ತು ಶೈಲಿಯನ್ನು ಬಳಸಲಾಗುತ್ತದೆ. ಅದಕ್ಕಾಗಿ ಭಾರತೀಯ ವೈದಿಕ ವಾಸ್ತು ತಜ್ಞರ ಸಮಿತಿಯನ್ನು ರಚಿಸುವುದಕ್ಕೂ ಸಭೆಯಲ್ಲಿ ನಿರ್ಧರಿಸಲಾಯಿತು. ಈಗಾಗಲೇ ಸಾಕಷ್ಟುಮಂದಿ ಮಂದಿರ ನಿರ್ಮಾಣಕ್ಕೆ ನಾನಾ ಸೊತ್ತುಗಳನ್ನು ನೀಡಿದ್ದಾರೆ. ಅವೆಲ್ಲವನ್ನೂ ಸಂಪೂರ್ಣವಾಗಿ ಬಳಸುವುದಕ್ಕೂ ನಿರ್ಧರಿಸಲಾಯಿತು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ಎಲ್‌ ಆಂಡ್‌ ಟಿ, ಟಾಟಾಗೆ ನಿಯೋಜನೆ:

ಮಂದಿರ ನಿರ್ಮಾಣ ಕಾಮಗಾರಿ ನಿರ್ವಹಿಸುವುದಕ್ಕೆ ಎಲ್‌ ಆ್ಯಂಡ್‌ ಟಿ ಕಂಪನಿ, ಕಾಮಗಾರಿಯ ಗುಣಮಟ್ಟಪರೀಕ್ಷೆಗೆ ಟಾಟಾ ಕನ್‌ಸ್ಟ್ರಕ್ಷನ್‌ ಕಂಪನಿಯನ್ನು ನಿಯೋಜಿಸಲಾಗಿದೆ. ಇದಕ್ಕೆ ಎರಡೂ ಕಂಪನಿಗಳು ಒಪ್ಪಿವೆ. ಟಾಟಾ ಕಂಪನಿ ಕಾಮಗಾರಿಯು ಹಂತಹಂತವಾಗಿ ನಡೆಯುತ್ತಿದ್ದಂತೆ ಅದರ ವರದಿಯನ್ನು ಟ್ರಸ್ವ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಅವರಿಗೆ ಸಲ್ಲಿಸಲಿದೆ ಎಂದು ಹೇಳಿದರು.

ಮಂದಿರ ನಿರ್ಮಾಣವಾಗುವ ಸ್ಥಳದ ಧಾರಣಾ ಸಾಮರ್ಥ್ಯದ ಪರೀಕ್ಷೆ ನಡೆಯುತ್ತಿದೆ. ಭೂಮಿ ಸಮತಟ್ಟು, ಹಳೆಯ ಕಟ್ಟಡಗಳ ತೆರವು, ಕೆತ್ತಲಾಗಿರುವ ಶಿಲಾಸ್ತಂಭಗಳನ್ನು ಯೋಜಿತ ಪ್ರದೇಶಕ್ಕೆ ಸ್ಥಳಾಂತರ ಭರದಿಂದ ನಡೆಯುತ್ತಿದೆ ಎಂದವರು ಹೇಳಿದ್ದಾರೆ.

ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಡೆದ ಈ ಸುದೀರ್ಘ ಸಭೆಯಲ್ಲಿ ಟ್ರಸ್ವ್‌ ಕಾರ್ಯದರ್ಶಿ ಚಂಪತ್‌ ರಾಯ…, ಟ್ರಸ್ಟಿಗಳಾದ ಸ್ವಾಮಿ ಗೋವಿಂದ ದೇವಗಿರಿ, ನೃಪೇಂದ್ರ ಮಿಶ್ರಾ, ದಿನೇಶ್‌ ಚಂದ್ರ, ಅನೂಪ್‌ ಮಿಶ್ರಾ, ರಾಜ ವಿಮಲೇಟದ್ರ ಮಿಶ್ರಾ ಮತ್ತು ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಡಾ.ಅನಿಲ್‌ ಮಿಶ್ರಾ ಭಾಗವಹಿಸಿದ್ದರು.

ನಂತರ ಪೇಜಾವರ ಶ್ರೀಗಳು ಸಂಜೆ 4 ಗಂಟೆಗೆ ರಾಮಜನ್ಮಭೂಮಿಗೆ ಭೇಟಿ ನೀಡಿ ರಾಮ ದೇವರ ದರ್ಶನ ಪಡೆದು, ಮಂದಿರ ನಿರ್ಮಾಣದ ಕಾಮಗಾರಿಗಳನ್ನು ವೀಕ್ಷಿಸಿದರು. 5 ಗಂಟೆಗೆ ಹನುಮಾನ್‌ ಗಡಿ ದರ್ಶನ ಪಡೆದರು. 6 ರಿಂದ 7 ರ ತನಕ ರಾಮ ದೇವರಿಗೆ ಆರತಿಯಲ್ಲಿ ಭಾಗವಹಿಸಿದರು.