ಶಿಗ್ಗಾಂವಿ(ಮೇ.02): ತಾಲೂಕಿನ ಕುಂದೂರ ಗ್ರಾಮದಲ್ಲಿ ಗುರುವಾರ ಸುರಿದ ಬಾರಿ ಮಳೆ ಹಾಗೂ ಗಾಳಿಯಿಂದ ಬಾಳೆ, ಮಾವು, ಪೇರಲ್‌ ಸೇರಿದಂತೆ ತೋಟಗಾರಿಕಾ ಬೆಳೆಗಳು ಸಂಪೂರ್ಣ ನೆಲಕಚ್ಚಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ.

ರೈತ ಬಾಪುಗೌಡ ಪಾಟೀಲ ಆರು ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಗಿಡಗಳು ನೆಲಕ್ಕಚ್ಚಿದರೆ, 30 ಎಕರೆ ಜಮೀನಿನಲ್ಲಿ ಬೆಳೆದ ಮಾವಿನ ಕಾಯಿ, ಪೇರಲದ ಹೂ ಉದರಿವೆ. ಈರಣ್ಣ ಬಂಗಿ ಅವರು 3 ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸಹ ಸಂಪೂರ್ಣ ನೆಲಸಮವಾಗಿದೆ.

ಜೈಲು ಕ್ಯಾಂಟೀನ್‌ಗಾಗಿ ಕೈದಿಗಳಿಂದ ಹಣ ವಸೂಲಿ!

ಬಂಕಾಪುರದ ಗುಳೇದ ಓಣಿಯಲ್ಲಿ ಬೃಹತಾಕಾರದ ಬೇವಿನ ಮರ ಬಿದ್ದ ಪರಿಣಾಮ ಮನೆ-ದೇವಸ್ಥಾನಕ್ಕೆ ಹಾನಿಯಾಗಿದೆ. ಬೇವಿನಗಿಡದ ಕೆಳಗಿರುವ ಹುಲಗೇಮ್ಮದೇವಿ ದೇವಸ್ಥಾನ ಸಂಪೂರ್ಣ ನೆಲಸಮವಾಗಿದ್ದು ಮನೆಯೊಂದರ ಚಾವಣಿ ಜಖಂಗೊಂಡಿದೆ. ಮನೆಯಲ್ಲಿದ್ದ ಜನರು ತಕ್ಷಣ ಹೊರಗೆ ಓಡಿ ಹೋಗಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಗಿಡದ ಕೆಳಗಿದ್ದ ಬೈಕ್‌ ಸಹ ನಜ್ಜುಗುಜ್ಜಾಗಿದೆ.

ಬ್ರಾಹ್ಮಣ ಓಣಿಯಲ್ಲಿನ ಕೃಷ್ಣಾ ಕುಲಕರ್ಣಿ ಮನೆ ಚಾವಣಿ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ಸುಂಕದಕೆರಿ ನರೇಗಲ್ಲ ಅವರ ಓಣಿಯಲ್ಲಿನ ರೇಣಮ್ಮ ಕೆಂಗಣ್ಣವರ ಮನೆ ಗೋಡೆ ಕುಸಿದಿದೆ. ಪರಶುರಾಮ ನರೇಗಲ್ಲ ಅವರ ಮನೆ ಮೇಲಿನ ತಗಡುಗಳು ಹಾರಿ ಹೋಗಿದ್ದು ಮಲ್ಲಿಕಾರ್ಜುನ ನರೇಗಲ್ಲ, ಅಶೋಕ ನರೇಗಲ್ಲ ಅವರ ಮನೆ ಚಾವಣಿಗಳು ಬಿದ್ದು ಅಪಾರ ನಷ್ಟವಾಗಿದೆ. ಬಂಕಾಪುರ ಜಹಿರಗಟ್ಟಿಯಲ್ಲಿನ ಹನುಮಂತಪ್ಪ ಹಳೆಬಂಕಾಪುರ, ಅರ್ಜುನ ಸರ್ಜಾಪುರ ಎಂಬುವರ ಮನೆ ಮೇಲೆ ಮರ ಬಿದ್ದಿದೆ.