Asianet Suvarna News Asianet Suvarna News

ಲೋಕ್ ಅದಾಲತ್ ನಲ್ಲಿ ಒಂದಾದ್ರು ಬೇರೆಯಾದ ಜೋಡಿಗಳು

ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ನಲ್ಲಿ 10 ಜೋಡಿಗಳು ಮತ್ತೆ ಒಂದಾಗಿದ್ದಾರೆ.

Lok  Adalat Repair  their Relationship  snr
Author
First Published Dec 10, 2023, 8:34 AM IST

  ತುಮಕೂರು :  ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ನಲ್ಲಿ 10 ಜೋಡಿಗಳು ಮತ್ತೆ ಒಂದಾಗಿದ್ದಾರೆ.

ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ನಲ್ಲಿ ಪುನರ್ ಒಂದಾದ ಸತಿ-ಪತಿ ಕುರಿತು ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾ.ಬಿ.ಜಯಂತಕುಮಾರ ಅವರು ಕುಟುಂಬದಲ್ಲಿ ಹಲವಾರು ಸಮಸ್ಯೆಗಳು ತಲೆದೋರುವುದು ಸಹಜ. ಸಣ್ಣಪುಟ್ಟ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಬರುವುದು ಸಹಜ. ಸತಿ-ಪತಿಗಳು ಅವುಗಳನ್ನೇ ದೊಡ್ಡದು ಮಾಡಿಕೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ತರವಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನೂ ಮರೆತು ಮುಂದಿನ ಜೀವನ ನಡೆಸಬೇಕು. ಮಕ್ಕಳ ಮುಂದಿನ ಓದು, ಮದುವೆ ಇತ್ಯಾದಿ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು.

ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅನೇಕ ಜನ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕಳೆದ ಒಂದು ತಿಂಗಳಿನಿಂದ ಅರ್ಜಿದಾರರ ಪರ ವಕೀಲರು ಮತ್ತು ಎದುರುರಾರರ ವಕೀಲರು, ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರು ಎರಡೂ ಕಡೆಯವರಿಗೆ ಬುದ್ಧಿ ಹೇಳಿದ ಪರಿಣಾಮ 10 ಜೋಡಿಗಳು ಮತ್ತೆ ಹಾರ ಬದಲಾಯಿಸಿಕೊಂಡು, ಪರಸ್ಪರ ಸಿಹಿ ತಿನ್ನಿಸಿ ಮತ್ತೆ ಒಂದಾದ ಘಟನೆಗೆ ಇಲ್ಲಿನ ಜಿಲ್ಲಾ ನ್ಯಾಯಾಧೀಶರು, ವಕೀಲರುಗಳು ಸಾಕ್ಷಿಯಾದರು.

ಜಿಲ್ಲಾ ನ್ಯಾಯಾಧೀಶ ಮುನಿರಾಜ ಮಾತನಾಡಿ, ದಂಪತಿ ಚಿಕ್ಕ ಚಿಕ್ಕ ಮಾತುಗಳನ್ನೇ ದೊಡ್ಡದು ಮಾಡಿಕೊಂಡು ಹೋಗಬಾರದು, ಆ ಮಾತುಗಳನ್ನೇ ಮುಂದುವರೆಸಿಕೊಂಡು ಹೋದರೆ ಅದು ಎಲ್ಲಿಗೋ ಮುಟ್ಟುತ್ತದೆ, ಜೀವನ ದೊಡ್ಡದು, ಸಮಾಜ, ಕುಟುಂಬ ನಿಮ್ಮ ತಂದೆ-ತಾಯಿಯರು ಬಹಳ ಕಷ್ಟ ಪಟ್ಟು ವಿವಾಹ ನೆರವೇರಿಸಿದ್ದಾರೆ. ಕುಟುಂಬದ ಮರ್ಯಾದೆ ಸಹ ದೊಡ್ಡದು ಎಂದು ಬುದ್ಧಿವಾದ ಹೇಳಿದರು.

ನ್ಯಾ. ನೂರುನ್ನೀಸಾ ಮಾತನಾಡಿ, ಉತ್ತಮ ಮಾತು ಕೇಳಿ ಹಿರಿಯರಿಗೆ ಮರ್ಯಾದೆ ನೀಡಿ, ಒಟ್ಟು ಕುಟುಂಬವಿದ್ದರೆ ನಮಗೆ ಶಕ್ತಿ, ಈ ಸಮಾಜ ಒಂಟಿ ಮಹಿಳೆಯನ್ನು ಅಥವಾ ವಿಚ್ಛೇದನ ಪಡೆದ ಗಂಡನನ್ನು ನೋಡುವುದೇ ಬೇರೆ ಅದೇ ನೀವು ಒಟ್ಟಾಗಿದ್ದಲ್ಲಿ ನಿಮಗೆ ಸಿಗುವ ಮರ್ಯಾದೆಯೇ ಬೇರೆ. ದಂಪತಿ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ವಕೀಲರಾದ ಕೆ.ಎಸ್.ಪುಟ್ಟರಾಜು, ಸೀತಕಲ್ ಮಂಜುನಾಥ್, ಗೋವಿಂದರಾಜು, ರವಿ, ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.

Follow Us:
Download App:
  • android
  • ios