Asianet Suvarna News Asianet Suvarna News

ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ, ಲಕ್ಷಕ್ಕೂ ಅಧಿಕ ಹೆಸರು ಔಟ್!

28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ| 1.75 ಲಕ್ಷ ಹೆಸರುಗಳು ಪಟ್ಟಿಯಿಂದ ಹೊರಕ್ಕೆ

list of 88 lakh 81 thousand bangalore voters has been released
Author
Bangalore, First Published Jan 17, 2019, 7:57 AM IST

ಬೆಂಗಳೂರು[ಜ.17]: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಅಂತಿಮಗೊಳಿಸಲಾಗಿದ್ದು ಒಟ್ಟು 88,81,066 ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ ಎಂದು ಬೆಂಗಳೂರು ನಗರ ಚುನಾವಣಾಧಿಕಾರಿಯೂ ಆದ ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಬಿಬಿಎಂಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಅಂತಿಮ ಮತದಾರರ ಪಟ್ಟಿಯನ್ನು ನಗರದ 28 ವಿಧಾನಸಭಾ ಕ್ಷೇತ್ರಗಳ ನೋಂದಣಾಧಿಕಾರಿಗಳ ಕಚೇರಿ ಮತ್ತು ಸಹಾಯಕ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್‌ ಕಚೇರಿಗಳಲ್ಲಿ ಪ್ರಕಟಿಸಲಾಗುತ್ತಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ (www.ceokarnataka.kar.nic.in) ನಲ್ಲೂ ಪಟ್ಟಿಪ್ರಕಟವಾಗಲಿದೆ. ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಂಡಿದೆಯೇ ಎಂದು ಖಾತರಿಪಡಿಸಿಕೊಳ್ಳಬಹುದು. ಹೆಸರು, ವಯಸ್ಸು ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಗಳಲ್ಲಿ ಲೋಪದೋಷವಿದ್ದರೆ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ನಗರದಲ್ಲಿ ಒಟ್ಟಾರೆ 1.37 ಕೋಟಿ ಜನಸಂಖ್ಯೆಯ ಅಂದಾಜು ಮಾಡಲಾಗಿದ್ದು, ಇದರಲ್ಲಿ 88,81,066 ಮತದಾರರಿದ್ದಾರೆ. ಈ ಪೈಕಿ 46,32,900 ಪುರುಷ ಮತದಾರರು, 42,48,166 ಮಹಿಳಾ ಮತದಾರರಿದ್ದು, 2018ರ ಮತದಾರರ ಸಂಖ್ಯೆಗೆ ಹೋಲಿಸಿದರೆ ಈ ವರ್ಷ 67,020 ರಷ್ಟುಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 2018ರ ಅಕ್ಟೋಬರ್‌ನಲ್ಲಿ ಪ್ರಕಟಿಸಲಾಗಿದ್ದ ಪರಿಷ್ಕೃತ ಕರಡು ಮತದಾರರ ಪಟ್ಟಿಗೆ ಬಂದಿದ್ದ ಆಕ್ಷೇಪಗಳನ್ನು ಪರಿಹರಿಸಿ ಅಂತಿಮ ಪಟ್ಟಿಪ್ರಕಟಿಸಲಾಗಿದೆ. ಪ್ರಮುಖವಾಗಿ ರಾಜರಾಜೇಶ್ವರಿ ನಗರ, ಯಶವಂತಪುರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಕಲಿ ಮತದಾರ ಗುರುತಿನ ಚೀಟಿಗಳ ಸೃಷ್ಟಿಸಿರುವ ಬಗ್ಗೆ ದೂರುಗಳು ಬಂದಿದ್ದವು. ಕಾರ್ಯಾಚರಣೆ ನಡೆಸಿ ರಾಜರಾಜೇಶ್ವರಿ ನಗರದಲ್ಲಿ 14,880 ನಕಲಿ ಮತದಾರರ ಹೆಸರು ಸೇರಿದಂತೆ ಒಟ್ಟಾರೆ ಅಂತಹ ಒಟ್ಟು 1.75 ಲಕ್ಷ ಜನರ ಹೆಸರನ್ನು ಪಟ್ಟಿಯನ್ನು ಕೈಬಿಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ನೋಂದಣಿ ನಿಲ್ಲಲ್ಲ

ಅಂತಿಮ ಮತದಾರ ಪಟ್ಟಿಪ್ರಕಟವಾದರೂ, ಇನ್ನೂ ಮತದಾರ ಪಟ್ಟಿಗೆ ಹೆಸರು ಸೇರಿಸಲು ಸಾಧ್ಯವಾಗದ ಅರ್ಹ ನಾಗರಿಕರು ಹೊಸದಾಗಿ ತಮ್ಮ ಹೆಸರು ನೋಂದಾಯಿಸಬಹುದು. ಆದರೆ, ಅಂತಹವರಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಸಿಗುವುದಿಲ್ಲ. ಆ ನಂತರದ ಚುನಾವಣೆಗಳಲ್ಲಿ ಮತದಾನ ಮಾಡಬಹುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

Follow Us:
Download App:
  • android
  • ios