ಕೊರೊನಾ ಲಾಕ್ಡೌನ್ ನಂತರದ ಒಂದೆರಡು ದಿನ ತಾರಕಕ್ಕೇರಿದ್ದ ಮದ್ಯದ ಬೇಡಿಕೆ ಆನಂತರದ ದಿನಗಳಲ್ಲಿ ನಿಧಾನಗತಿಯಲ್ಲಿ ಕ್ಷೀಣಿಸಲಾರಂಭಿದ್ದು, ಕಳೆದ ಒಂದೂವರೆ ತಿಂಗಳ ಮದ್ಯ ಮಾರಾಟದಲ್ಲಿ ಶೇ.30ರಷ್ಟುಕುಸಿತ ಕಂಡುಬಂದಿದೆ.
ಮಂಡ್ಯ(ಜು.12): ಕೊರೊನಾ ಲಾಕ್ಡೌನ್ ನಂತರದ ಒಂದೆರಡು ದಿನ ತಾರಕಕ್ಕೇರಿದ್ದ ಮದ್ಯದ ಬೇಡಿಕೆ ಆನಂತರದ ದಿನಗಳಲ್ಲಿ ನಿಧಾನಗತಿಯಲ್ಲಿ ಕ್ಷೀಣಿಸಲಾರಂಭಿದ್ದು, ಕಳೆದ ಒಂದೂವರೆ ತಿಂಗಳ ಮದ್ಯ ಮಾರಾಟದಲ್ಲಿ ಶೇ.30ರಷ್ಟುಕುಸಿತ ಕಂಡುಬಂದಿದೆ.
ಲಾಕ್ಡೌನ್ ಮುಗಿದು ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಕೂಡಲೇ ಮದ್ಯ ಮಳಿಗೆಗಳ ಎದುರು ಕಿ.ಮೀ.ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಜನರು ಮುಗಿಬಿದ್ದಿದ್ದರು. ಪೊಲೀಸ್ ಭದ್ರತೆಯಲ್ಲಿ ಮದ್ಯ ಮಾರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲದೆ, ಒಬ್ಬರು 3 ಲೀ.ವರೆಗೆ ಮಾತ್ರ ಮದ್ಯ ಖರೀದಿಸಲು ನಿಯಮ ವಿಧಿಸಲಾಗಿತ್ತು. ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದನ್ನು ಕಂಡ ರಾಜ್ಯಸರ್ಕಾರ ಎಲ್ಲ ಮದ್ಯದ ಮೇಲೆ ಶೇ.17ರಷ್ಟುಬೆಲೆ ಹೆಚ್ಚಳ ಮಾಡಿ ಆದಾಯ ಸಂಗ್ರಹಕ್ಕೆ ಮುಂದಾಯಿತು.
ಸೀಮಿತ ಅವಧಿಗೆ ಮಾರಾಟ:
ಲಾಕ್ಡೌನ್ ತೆರವಾದ ಬೆನ್ನಲ್ಲೇ ಕೊರೊನಾ ಸೋಂಕು ಪ್ರಕರಣಗಳು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಲು ಆರಂಭಿಸಿದ್ದರಿಂದ ಜನರು ಭೀತಿಗೆ ಒಳಗಾದರು. ಇದರೊಂದಿಗೆ ಮದ್ಯ ಮಳಿಗೆಗಳ ಮಾರಾಟ ಅವಧಿಯನ್ನು ಜಿಲ್ಲಾಡಳಿತ ಕಡಿತಗೊಳಿಸಿತು. ಬಾರ್ ಅಂಡ್ ರೆಸ್ಟೋರೆಂಟ್ಗಳು, ಕ್ಲಬ್ಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡದೆ ಪಾರ್ಸಲ್ಗಷ್ಟೇ ಮೀಸಲಿಟ್ಟಿತು.
ಇದರಿಂದ ಜನರು ಒಂದೆಡೆ ಕುಳಿತು ನಿರ್ಭೀತಿಯಿಂದ ಮದ್ಯ ಸೇವಿಸಲು ಸದಾವಕಾಶ ದೊರೆಯಲಿಲ್ಲ. ಪಾರ್ಸಲ್ ತೆಗೆದುಕೊಂಡು ಹೊರಗೆ ಸೇವನೆ ಮಾಡುವುದಕ್ಕೂ ಹಲವು ಅಡಚಣೆಗಳು ಎದುರಾದವು. ಮನೆಗೆ ತೆಗೆದುಕೊಂಡು ಹೋಗಿ ಸೇವಿಸುವುದು ಕಷ್ಟವಾಯಿತು. ಇದರಿಂದ ಮದಿರೆಯಿಂದ ಮಧ್ಯಮ ವರ್ಗದ ಜನರು ದೂರವಾಗಲಾರಂಭಿಸಿದರು.
ಬಡವರು-ಕೂಲಿ ಕಾರ್ಮಿಕರಿಗೆ ಬರೆ:
ಮದ್ಯ ವ್ಯಸನ ರೂಢಿಸಿಕೊಂಡಿರುವವರಲ್ಲಿ ಬಡವರು, ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮದ್ಯದ ಬೆಲೆ ಏರಿಕೆ ಇವರ ನಾಲಿಗೆಗೆ ಬರೆ ಎಳೆದಂತಾಯಿತು. ಕೊರೊನಾ ಸಂಕಷ್ಟಸಮಯದಲ್ಲಿ ದುಡಿಯಲು ಕೆಲಸವೂ ಇಲ್ಲ. ಕುಡಿಯುವುದಕ್ಕೆ ಹಣವೂ ಇಲ್ಲ ಎಂಬಂತಾಯಿತು. ಎಷ್ಟೋ ಜನರು ಮದಿರೆಯ ಆಸೆಯನ್ನು ಪೂರೈಸಿಕೊಳ್ಳದೆ ಚಡಪಡಿಸಲಾರಂಭಿಸಿದರು.
ನಿತ್ಯವೂ ಮದ್ಯ ಸೇವನೆ ಮಾಡುವ ಚಟ ರೂಢಿಸಿಕೊಂಡಿದ್ದ ಮಧ್ಯಮವರ್ಗದವರು ಕುಡಿತದ ಪ್ರಮಾಣವನ್ನು ಗರಿಷ್ಠ ಮಿತಿಯಿಂದ ಕನಿಷ್ಠ ಮಿತಿಗೆ ಇಳಿಸಿಕೊಂಡಿದ್ದಾರೆ. ಕೆಲವು ಮಧ್ಯಮ ವರ್ಗದ ಜನರ ಆದಾಯವೂ ಕುಸಿತವಾಗಿರುವುದರಿಂದ ಮೊದಲಿಗಿಂತಲೂ ಕಡಿಮೆ ಪ್ರಮಾಣದ ಮದ್ಯ ಸೇವಿಸುವುದನ್ನು ರೂಢಿಸಿಕೊಂಡಿದ್ದಾರೆ. ಉತ್ತಮ ಬ್ರಾಂಡ್ನ ಮದ್ಯ ಸೇವನೆ ಮಾಡುತ್ತಿದ್ದವರು ಕಡಿಮೆ ಬ್ರಾಂಡ್ನ ಮದ್ಯ ಸೇವನೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಹಳ್ಳಿ ಜನರು ಬರುವುದೇ ಕಡಿಮೆ:
ಕೊರೊನಾಗೆ ಹೆದರಿ ಗ್ರಾಮಾಂತರ ಪ್ರದೇಶಗಳಿಂದ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಬರುವವರ ಸಂಖ್ಯೆಯೂ ಕ್ಷೀಣಿಸಿದೆ. ಹಲವಾರು ಗ್ರಾಮಗಳ ಮುಖಂಡರು ಊರಿನಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಎರಡು ತಿಂಗಳ ಲಾಕ್ಡೌನ್ ಸಮಯದಲ್ಲಿ ಬಹಳಷ್ಟುಜನರು ಮದ್ಯವ್ಯಸನ ತ್ಯಜಿಸಿರುವುದು ಮದ್ಯ ಮಾರಾಟಕ್ಕೆ ಕೊಂಚ ಮಟ್ಟಿನ ಬ್ರೇಕ್ ಬೀಳಲು ಕಾರಣವಾಗಿದೆ.
ಕೊರೊನಾ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದ ಗ್ರಾಮ ದೇವತೆ ಹಬ್ಬದ ಮೇಲೆ ನಿಷೇಧಿಸಲ್ಪಟ್ಟಿವೆ. ಹಾಗಾಗಿ ಹಬ್ಬದ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಮದ್ಯಕ್ಕೂ ಬ್ರೇಕ್ ಬಿದ್ದಂತಾಗಿದೆ. ಲಾಕ್ಡೌನ್ಗೆ ಮೊದಲು ಬೀಗರ ಔತಣಗಳು ಭರ್ಜರಿಯಾಗೇ ನಡೆಯುತ್ತಿದ್ದವು. ಕಳೆದ ಮೂರು ತಿಂಗಳಿಂದ ಬೀಗರ ಔತಣಗಳೇ ಕಣ್ಮರೆಯಾಗಿವೆ. ಈ ಸಮಯದಲ್ಲೂ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿತ್ತು. ಈಗ ಅಲ್ಲಿಗೂ ಮದ್ಯ ಪ್ರವೇಶಕ್ಕೆ ನಿರ್ಬಂಧ ಬಿದ್ದಂತಾಗಿದೆ.
ಪ್ರವಾಸಿಗರು ಕ್ಷೀಣ:
ಕೊರೊನಾ ಪರಿಸ್ಥಿತಿಗಿಂತ ಮೊದಲು ಜಿಲ್ಲೆಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಶೇ.5ರಷ್ಟುಪ್ರವಾಸಿಗರೂ ಬಾರದಂತಹ ಪರಿಸ್ಥಿತಿ ಇದೆ. ಇದೂ ಸಹ ಮದ್ಯ ಮಾರಾಟದ ಮೇಲೆ ದೊಡ್ಡ ಹೊಡೆತ ಬೀಳುವಂತೆ ಮಾಡಿದೆ.
ಪ್ರವಾಸಿಗರ ಆಗಮಿಸುತ್ತಿದ್ದ ಸಮಯದಲ್ಲಿ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿತ್ತಲ್ಲದೆ, ವೀಕೆಂಡ್ಗಳಲ್ಲಂತೂ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಮದ್ಯ ವ್ಯಾಪಾರವಾಗುತ್ತಿತ್ತು. ಆ ಸಮಯದಲ್ಲೆಲ್ಲಾ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ರಾಜಾರೋಷವಾಗಿಯೇ ನಡೆಯುತ್ತಿದ್ದರಿಂದ ಮದಿರೆ ವ್ಯಾಪಾರದಲ್ಲಿ ಗುರಿ ಮೀರಿದ ಸಾಧನೆ ಮಾಡಿತ್ತು.
ಕೊರೊನಾ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿರುವಂತೆಯೇ ಮದ್ಯ ಮಾರಾಟಕ್ಕೂ ಹಿನ್ನಡೆ ಉಂಟುಮಾಡಿದೆ. ಮದ್ಯ ಮಳಿಗೆಗಳಲ್ಲಿ ಹಿಂದಿನಂತೆ ಜನಸಂದಣಿ ಕಂಡುಬರುತ್ತಿಲ್ಲ. ಸೀಮಿತ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮಳಿಗೆ ವ್ಯಾಪಾರಸ್ಥರೂ ಹೆಚ್ಚಿನ ಮಟ್ಟದಲ್ಲಿ ಲಾಭ ನೋಡಲಾಗುತ್ತಿಲ್ಲ. ಮದಿರೆಯ ರುಚಿಯನ್ನು ಮನಸಾರೆ ಅನುಭವಿಸಲಾಗದ ಜನರು ಕೊರೊನಾ ದೂರವಾಗುವ ದಿನಗಳಿಗೆ ಎದುರುನೋಡುತ್ತಿದ್ದಾರೆ.
ಶೇ.17ರಷ್ಟುತೆರಿಗೆ ಹೆಚ್ಚಳವೂ ಕಾರಣ: ಮಹದೇವಸ್ವಾಮಿ
ಸರ್ಕಾರ ಬಜೆಟ್ನಲ್ಲಿ ಶೇ.6ರಷ್ಟುದರ ಹೆಚ್ಚಳ ಮಾಡಿತ್ತು. ಲಾಕ್ಡೌನ್ ಬಳಿಕ ಮತ್ತೆ ಶೇ.11ಕ್ಕೆ ದರ ಹೆಚ್ಚಿಸಿದ್ದರಿಂದ ಶೇ.17ರಷ್ಟುತೆರಿಗೆ ಹೆಚ್ಚಾಯಿತು. ಇದು ಮದ್ಯ ಮಾರಾಟ ಕುಸಿತಕ್ಕೆ ಮತ್ತೊಂದು ಕಾರಣ ಎಂದು ಪಾನೀಯ ನಿಗಮದ ಅಧಿಕಾರಿ ಮಹದೇವಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದರು.
ಲಾಕ್ಡೌನ್ ವೇಳೆ ಮದ್ಯ ತಯಾರಿಕಾ ಘಟಕಗಳಲ್ಲಿ ಅತ್ಯುತ್ತಮ ಗುಣಮಟ್ಟದ ವಿವಿಧ ಮಾದರಿಯ ಮದ್ಯ ಉತ್ಪಾದನೆ ಕಡಿತವಾಯಿತು. ಲಾಕ್ಡೌನ್ ತೆರವಾದ ನಂತರ ತಕ್ಷಣಕ್ಕೆ ಅತ್ಯುತ್ತಮ ಬ್ರಾಂಡ್ಗಳನ್ನು ಔಟ್ಲೆಟ್ಗಳಿಗೆ ಸರಬರಾಜು ಮಾಡಲಾಗಲಿಲ್ಲ. ಮದ್ಯಪ್ರಿಯರು ಗುಣಮಟ್ಟದ ಮದ್ಯ ಸಿಗಲಿಲ್ಲವೆಂಬ ಕಾರಣಕ್ಕೆ ಮದ್ಯಪಾನವನ್ನೇ ತ್ಯಜಿಸಿದರು. ಅದನ್ನು ಈಗಲೂ ಮುಂದುವರೆಸಿದ್ದಾರೆ.
ಅಲ್ಲದೆ, ಲಾಕ್ಡೌನ್ ಸಮಯದಲ್ಲಿ ಒಂದು ವರ್ಗದ ಜನರು ಮದ್ಯ ಸೇವನೆ ಕಡಿತ ಮಾಡಿದರೆ, ಮತ್ತೊಂದು ವರ್ಗ ಯಾವುದೇ ಮದ್ಯ ಸಿಗದಿದ್ದಾಗ ಸಿಕ್ಕ ಕಡಿಮೆ ಗುಣಮಟ್ಟದ ಮದ್ಯ ಸೇವಿಸುವ ಹವ್ಯಾಸ ರೂಢಿಸಿಕೊಂಡರು. ಲಾಕ್ಡೌನ್ ಸಡಿಲಗೊಂಡು ವ್ಯಾಪಾರ ಆರಂಭಗೊಂಡರೂ ಅದೇ ಮದ್ಯವನ್ನು ಸೇವಿಸುತ್ತಿರುವುದರಿಂದ ಶೇ.25 ರಿಂದ 30ರಷ್ಟುಮದ್ಯ ಮಾರಾಟ ಕಡಿಮೆಯಾಗಿದೆ.
ಕೊರೊನಾ ಎಲ್ಲರಿಗೂ ಆರ್ಥಿಕ ಸಂಕಷ್ಟತಂದೊಡ್ಡಿದೆ. ಬಡವರು, ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗದಂತಾಗಿದೆ. ಅವರ ಬಳಿಯೂ ಹಣವಿಲ್ಲ. ಲಾಕ್ಡೌನ್ ವೇಳೆ ಹಲವರು ಕುಡಿಯುವುದನ್ನೇ ಬಿಟ್ಟಿದ್ದಾರೆ. ಸೀಮಿತ ಅವಧಿಯ ಮದ್ಯ ಮಾರಾಟ, ಮದ್ಯದ ಮೇಲಿನ ಬೆಲೆ ಹೆಚ್ಚಳ ಹೀಗೆ ಒಂದಲ್ಲ, ಎರಡಲ್ಲ ಹಲವಾರು ಕಾರಣಗಳಿಂದ ಮದ್ಯ ಮಾರಾಟ ಕಡಿಮೆಯಾಗಿರುವುದಂತೂ ಸತ್ಯ ಎಂದು ಅಬಕಾರಿ ಜಿಲ್ಲಾ ಅಧೀಕ್ಷಕ ಶಿವಪ್ರಸಾದ್ ತಿಳಿಸಿದ್ದಾರೆ.
ಮದ್ಯ ಮಾರಾಟ ಈಗ ಮೊದಲಿನಂತಿಲ್ಲ. ವ್ಯಾಪಾರ ಕುಸಿಯಲು ಹಲವಾರು ಕಾರಣಗಳಿವೆ. ಬೆಲೆ ಹೆಚ್ಚಳ, ಮಾರಾಟದ ಅವಧಿ ಕಡಿತಗೊಳಿಸಿರುವುದು, ಪ್ರವಾಸಿಗರೂ ಬರುತ್ತಿಲ್ಲ, ಜನರ ಬಳಿ ಹಣವಿಲ್ಲ, ಬಾರ್-ಅಂಡ್ ರೆಸ್ಟೋರೆಂಟ್ಗಳಲ್ಲಿ ಮದ್ಯ ಮಾರುವಂತಿಲ್ಲ. ಹೀಗೆ ನಾನಾ ಕಾರಣಗಳಿಂದ ಮದ್ಯ ಮಾರಾಟದ ಪ್ರಮಾಣ ಕುಸಿದಿದೆ ಎಂದು ಪ್ರಿಯಾ ಹೋಲ್ಸೇಲ್ ವೈನ್ಸ್ ಮಾಲೀಕ ಎಚ್.ಪಿ. ಮಹೇಶ್ ತಿಳಿಸಿದ್ದಾರೆ.
-ಮಂಜುನಾಥ
