87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶೀರ್ಷಿಕೆಯನ್ನು ವಿದ್ಯುತ್ ದೀಪಾಲಂಕಾರದಲ್ಲಿ ಬೆಳಗಿಸಲು ನಿರ್ಧರಿಸಲಾಗಿದೆ. ಸಮ್ಮೇಳನ ನಡೆಯುವ ಸ್ಥಳದಿಂದ ಹಿಡಿದು ಕಿರಂಗೂರು ವೃತ್ತದವರೆಗೆ ಹೆದ್ದಾರಿಯುದ್ದಕ್ಕೂ ಬೆಳಕಿನ ರಂಗು ತುಂಬಿರುವಂತೆ ಮಾಡುವುದಕ್ಕೆ ಚಿಂತನೆ ನಡೆಸಿದ್ದು, ಅಂತಿಮ ಹಂತದ ಸಿದ್ಧತೆಗಳನ್ನು ಸೆಸ್ಕಾಂ ಇಲಾಖೆಯವರು ಮಾಡಿಕೊಳ್ಳುತ್ತಿದ್ದಾರೆ. 

ಮಂಡ್ಯ ಮಂಜುನಾಥ 

ಮಂಡ್ಯ(ಡಿ.17): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ದಸರಾ ಮಾದರಿಯಲ್ಲಿ" ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ನಗರ ವ್ಯಾಪ್ತಿಯನ್ನು ಒಳಗೊಂಡಂತೆ ಸಮ್ಮೇಳನ ನಡೆಯುವವರೆಗೆ ಸುಮಾರು 15 ರಿಂದ 20 ಕಿ.ಮೀ. ದೂರದವರೆಗೆ ಬೆಳಕಿನ ಅಲಂಕಾರ ಮಾಡುವುದಕ್ಕೆ ನಗರ ಅಲಂಕಾರ ಸಮಿತಿ ತೀರ್ಮಾನಿಸಿದೆ. 

ಸೆಸ್ಕಾಂ ವತಿಯಿಂದಲೇ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿಸಲು ನಿರ್ಧರಿಸಿದ್ದು, 5 ದಿನಗಳ ಕಾಲ ನಗರ ಕಂಗೊಳಿಸಲಿದೆ. ನಗರದ ಪ್ರಮುಖ ರಸ್ತೆಗಳಾದ ರ ವಿ.ವಿ.ರಸ್ತೆ, ಆರ್.ಪಿ.ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ ಜಿಲ್ಲಾಧಿಕಾರಿ ಕಚೇರಿ ರಸ್ತೆ, ಮೈಷುಗರ್‌ವೃತ್ತ, ಎಸ್‌.ಡಿ.ಜಯರಾಂ ವೃತ್ತ, ಮಹಾವೀರ ವೃತ್ತ, ಜಯಚಾಮರಾಜೇಂದ್ರ ಒಡೆಯರ್‌ ವೃತ್ತ, ಕಲ್ಲಹಳ್ಳಿ, ಕಿರಂಗೂರು ವೃತ್ತವನ್ನು ವರ್ಣರಂಜಿತವಾಗಿ ಬೆಳಗಿಸಲು ಅಲಂಕಾರ ಸಮಿತಿ ತೀರ್ಮಾನಿಸಿದೆ. 

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶೀರ್ಷಿಕೆಯನ್ನು ವಿದ್ಯುತ್ ದೀಪಾಲಂಕಾರದಲ್ಲಿ ಬೆಳಗಿಸಲು ನಿರ್ಧರಿಸಲಾಗಿದೆ. ಸಮ್ಮೇಳನ ನಡೆಯುವ ಸ್ಥಳದಿಂದ ಹಿಡಿದು ಕಿರಂಗೂರು ವೃತ್ತದವರೆಗೆ ಹೆದ್ದಾರಿಯುದ್ದಕ್ಕೂ ಬೆಳಕಿನ ರಂಗು ತುಂಬಿರುವಂತೆ ಮಾಡುವುದಕ್ಕೆ ಚಿಂತನೆ ನಡೆಸಿದ್ದು, ಅಂತಿಮ ಹಂತದ ಸಿದ್ಧತೆಗಳನ್ನು ಸೆಸ್ಕಾಂ ಇಲಾಖೆಯವರು ಮಾಡಿಕೊಳ್ಳುತ್ತಿದ್ದಾರೆ. 

ನಗರ ವ್ಯಾಪ್ತಿಯೊಳಗೂ ವಿದ್ಯುತ್ ರಂಗನ್ನು ತುಂಬಿಸುವುದರೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಮೆರುಗನ್ನು ತುಂಬುವು ದರೊಂದಿಗೆ ಅದ್ದೂರಿತನವನ್ನು ತುಂಬುವುದು ವಿಶೇಷವಾಗಿದೆ. ಮೈಸೂರು ದಸರಾ ಮಾದರಿ ಯಲ್ಲೇ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೀಪಾಲಂಕಾರದ ವೇಳೆಯನ್ನು ನಿಗದಿಪಡಿಸುವುದಕ್ಕೆ ಆಲೋಚಿಸುತ್ತಿದ್ದು, ಸೆಸ್ಕಾಂ ಇಲಾಖೆ ಅಧಿಕಾರಿಗಳು ಮಂಗಳವಾರ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ. 

ಈ ಹಿಂದೆ ಜಿಲ್ಲೆಯಲ್ಲಿ 2 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಾಗಲೂ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ವಿದ್ಯುತ್ ದೀಪಗಳು ನಗರವನ್ನು ಬೆಳಗಲಿರುವುದರಿಂದ ನಗರದ ಜನರಲ್ಲಿ ಕುತೂಹಲ ಮೂಡಿಸಿದೆ. 

ಮೈಸೂರು ದಸರಾ ವೇಳೆ ದೀಪಾಲಂಕಾರ ನೋಡುವುದಕ್ಕೆ ಸುತ್ತಮುತ್ತಲ ಜಿಲ್ಲೆಯ ಜನರು ತೆರಳುತ್ತಿದ್ದರು. ಇದೀಗ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ವಿದ್ಯುತ್ ದೀಪಾಲಂ ಕಾರವನ್ನು ಕಣ್ಣುಂಬಿಕೊಳ್ಳಲು ಸ್ಥಳೀಯರ ಜೊತೆ ಹೊರಜಿಲ್ಲೆಯ ಸಾವಿರಾರು ಮಂದಿಯೂ ಬರುವ ನಿರೀಕ್ಷೆ ಇದೆ. ಈ ಮೊದಲು 875 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ, ಹೂವಿನ ಅಲಂಕಾರ, ಮನೆ ಮನೆಗೆ ಕನ್ನಡ ಬಾವುಟ, ತಳಿರು-ತೋರಣ, ಬ್ಯಾನರ್ ಕಟ್ಟಲು ನಿರ್ಧರಿಸಲಾಗಿತ್ತು. ಆದರೆ ದೀಪಾ ಲಂಕಾರಕ್ಕೆ ವೆಚ್ಚ ಹೆಚ್ಚಾಗಲಿರುವುದರಿಂದ ನಗರ ಅಲಂಕಾರ ಸಮಿತಿ ಅಧ್ಯಕ್ಷರಾದ ಶಾಸಕ ಪಿ.ರವಿಕುಮಾರ್ ಗಣಿಗೆ ಅವರು ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದು ಸೆಸ್ಕಾಂ ವತಿಯಿಂದಲೇ ದೀಪಾಲಂಕಾರ ಮಾಡಿಸಲು ನಿರ್ಧರಿಸಿದ್ದಾರೆ. 

ಈಗಾಗಲೇ ಹೆದ್ದಾರಿ ರಸ್ತೆಯುದ್ದಕ್ಕೂ ಬಣ್ಣದಿಂದ ಅಲಂಕೃತಗೊಳಿಸಲಾಗಿದೆ. `ರಸ್ತೆ ವಿಭಜಕದ ಮಧ್ಯೆ ಉಂಟಾಗಿದ್ದ ಗುಂಡಿಗಳನ್ನು ಡಾಂಬರಿನಿಂದ ಮುಚ್ಚಿ ಸಮತಟ್ಟುಗೊಳಿಸಲಾಗುತ್ತಿದೆ. ಹೆದ್ದಾರಿಯುದ್ದಕ್ಕೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.